ಬೆಂಗಳೂರು: ಬಮೂಲ್ ವ್ಯಾಪ್ತಿಯ ಹಾಲು ಉತ್ಪಾದಕರು ಸಂಕಷ್ಟಕ್ಕೆ ಸಿಲುಕಿದ್ದು, ಇವರ ನೆರವಿಗೆ ಧಾವಿಸಿರುವ ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟ (ಬಮೂಲ್) ರೈತರು ಪೂರೈಸುವ ಪ್ರತಿ ಲೀಟರ್ ಹಾಲಿಗೆ 3 ರೂ. ಹೆಚ್ಚಳ ಮಾಡಲು ಮುಂದಾಗಿದೆ.
ಏ.1ರಿಂದ ಹೊಸ ದರ ಜಾರಿಗೆ ಬರುವ ಸಾಧ್ಯತೆ ಇದೆ. ರೈತರು ಪೂರೈಸುವ ಪ್ರತಿ ಲೀ.ಹಾಲಿಗೆ ಈ ಹಿಂದೆ 31 ರೂ. ನೀಡಲಾಗುತ್ತಿತ್ತು. ಈಗ 3 ರೂ. ಹೆಚ್ಚಳ ಮಾಡುವುದರಿಂದ ರೈತರಿಗೆ 34 ರೂ. ದೊರೆಯಲಿದೆ.
ನೆರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದ ರೈತರಿಗೆ ಕಡಿಮೆ ಬೆಲೆ ಪಾವತಿಸಲಾಗುತ್ತಿದೆ. ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ನೆರೆ ರಾಜ್ಯಗಳು ರೈತರಿಗೆ 40 ರೂ. ನೀಡಿ ಹಾಲು ಖರೀದಿಸಲಾಗುತ್ತಿದೆ ಎಂದು ಒಕ್ಕೂಟದ ಅಧ್ಯಕ್ಷ ನರಸಿಂಹ ಮೂರ್ತಿ ಹೇಳುತ್ತಾರೆ.
ಒಕ್ಕೂಟವೇ ಭರಿಸಲು ನಿರ್ಧಾರ: ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟ ವ್ಯಾಪ್ತಿಯಲ್ಲಿ 1.25 ಲಕ್ಷ ಹಾಲು ಉತ್ಪಾದಕರಿದ್ದಾರೆ. ಇದರಲ್ಲಿ ಮಹಿಳೆ ಯರು ಕೂಡ ಸೇರಿದ್ದಾರೆ. ರೈತರು ಹೈನುಗಾರಿಕೆ ತ್ಯಜಿಸುವ ಪ್ರವೃತ್ತಿ ಹೆಚ್ಚಾಗುತ್ತಿರುವುದರಿಂದ ಹಾಲಿನ ಉತ್ಪಾದನೆ ಕಡಿಮೆಯಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಹಾಲಿನ ಪೂರೈಕೆಯಲ್ಲಿ ಮತ್ತಷ್ಟು ಕೊರತೆ ಎದುರಾಗಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಬೆಮೂಲ್‌ನಲ್ಲಿ ಹಾಲಿನ ಬೇಡಿಕೆಗಿಂತ ಪೂರೈಕೆ ಕಡಿಮೆ ಇದೆ. ಹೀಗಾಗಿ ರೈತರನ್ನು ಪ್ರೋತ್ಸಾಹಿಸಬೇಕಾಗಿದೆ. ಆ ಹಿನ್ನೆಲೆಯಲ್ಲಿ ರೈತರಿಗೆ 3 ರೂ. ನೀಡುವ ಕುರಿತಂತೆ ಒಕ್ಕೂಟದಲ್ಲಿ ಚರ್ಚೆ ನಡೆಸಲಾಗಿದೆ. ರೈತರಿಗೆ ನೀಡುವ ಹೆಚ್ಚುವರಿ ಮೊತ್ತವನ್ನು ಒಕ್ಕೂಟದ ಆದಾಯದಿಂದಲೇ ಭರಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದ್ದಾರೆ.
ಬೇಡಿಕೆ 15 ಲಕ್ಷ ಲೀಟರ್; ಪೂರೈಕೆ 13.5 ಲಕ್ಷ ಲೀಟರ್: ಬಮೂಲ್ ಈ ಹಿಂದೆ 2022ರ ಜೂನ್-ಜುಲೈನಲ್ಲಿ 18 ಲಕ್ಷ ಲೀ.ಹಾಲು ಉತ್ಪಾದಿಸುತಿತ್ತು. ಆದರೆ ಡಿಸೆಂಬರ್ ಅಂತ್ಯದ ವೇಳೆ ಇದು 15 ಲಕ್ಷ ಲೀಟರ್ ರೂ.ಗೆ ಇಳಿಯಿತು. ಜನವರಿಯಲ್ಲಿ 14 ಲಕ್ಷ ಲೀಟರ್ ಗೆ ಕುಸಿಯಿತು. ರಾಜಧಾನಿ ಬೆಂಗಳೂರಿನಲ್ಲಿ ಹಾಲು, ಮೊಸರು, ಚೀಸ್, ಪೌಡರ್ ಉತ್ಪಾದನೆ ಸೇರಿದಂತೆ ಪ್ರತಿದಿನ 15 ಲಕ್ಷ ಲೀಟರ್ ಹಾಲಿನ ಬೇಡಿಕೆ ಇದೆ. ಆದರೆ ಈಗ 13.5 ಲಕ್ಷ ಲೀಟರ್ ಹಾಲು ಪೂರೈಕೆ ಆಗುತ್ತಿದೆ. ಇದರಲ್ಲಿ 12.5 ಲಕ್ಷ ಹಾಲು, ಮೊಸರು ಉತ್ಪಾದನೆಗೆ ಬಳಕೆ ಆಗುತ್ತಿದೆ.
ಮೇವಿನ ಅಭಾವ ಮತ್ತಿತರರ ಕಾರಣಗಳಿಂದಾಗಿ ಹೈನುಗಾರಿಕೆ ದುಬಾರಿಯಾಗುತ್ತಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರನ್ನು ರಕ್ಷಿಸಲು ಒಕ್ಕೂಟ ಮುಂದಾಗಿದ್ದು ರೈತರು ಪೂರೈಸುವ ಪ್ರತಿ ಲೀಟರ್ ಹಾಲಿಗೆ 3 ರೂ.ಹೆಚ್ಚಿಸುವ ನಿರ್ಧಾರಕ್ಕೆ ಬರಲಾಗಿದೆ.
●ನರಸಿಂಹಮೂರ್ತಿ, ಬಮೂಲ್ ಅಧ್ಯಕ್ಷ
-ದೇವೇಶ ಸೂರಗುಪ್ಪ