Advertisement

ಹೊಸನಗರ- ಪಳಂಬೆ ರಸ್ತೆ ಅಭಿವೃದ್ಧಿಗೆ 2.75 ಕೋಟಿ ರೂ.

12:41 PM Mar 18, 2018 | |

ಬಡಗನ್ನೂರು: ನಿಡ್ಪಳ್ಳಿ – ಪಾಣಾಜೆ ರಸ್ತೆಯ ಹೊಸನಗರ- ಪಳಂಬೆ ನಡುವಿನ 3.5 ಕಿ.ಮೀ. ರಸ್ತೆ ವಿಸ್ತರಣೆಗೆ ಚಾಲನೆ ನೀಡಲಾಗಿದೆ. ಇದಕ್ಕೆ 2.75 ಕೋಟಿ ರೂ. ಅನುದಾನ ಬಿಡುಗಡೆಗೊಂಡಿದ್ದು, ಮಳೆಗಾಲಕ್ಕೆ ಮೊದಲು ಕಾಮಗಾರಿ ಪೂರ್ಣಗೊಳ್ಳಬೇಕಾದ ಅನಿವಾರ್ಯತೆ ಆಡಳಿತದ ಮುಂದಿದೆ. 

Advertisement

ಈಗಾಗಲೇ ಮಳೆ ತನ್ನ ಇರವನ್ನು ತೋರಿಸಿದೆ. ಸಣ್ಣ ಮಳೆಗೆ ಗ್ರಾಮಾಂತರ ಭಾಗದ ಹಲವೆಡೆಗಳ ರಸ್ತೆ ದುಸ್ಥಿತಿಗೆ ತಲುಪಿದೆ. ಇದರ ನಡುವೆ ಹೊಸನಗರ ರಸ್ತೆಯ ಕಾಮಗಾರಿ ಶುರುವಿಟ್ಟುಕೊಳ್ಳಲಾಗಿದೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಕಾಮಗಾರಿ ನಡೆಸಬೇಕಾದ ಜವಾಬ್ದಾರಿ ಗುತ್ತಿಗೆದಾರರ ಹೆಗಲ ಮೇಲಿದೆ. ಇದರ ಜತೆಗೆ ಮುಂದಿನ ಎರಡು ತಿಂಗಳ ಒಳಗಾಗಿ 3.5 ಕಿ.ಮೀ. ರಸ್ತೆಯನ್ನು 5 ಮೀಟರ್‌ನಿಂದ 9 ಮೀ. ಅಗಲ ಮಾಡ ಬೇಕಾಗಿದೆ. ಮಳೆಗಾಲ ಕಾಲಿಡುವುದರ ಒಳಗಾಗಿ ಕಾಮಗಾರಿ ಮುಗಿಸಿದರೆ ವಾಹನ ಸವಾರರು, ವಿದ್ಯಾರ್ಥಿಗಳು, ನಾಗರಿಕರು ಸೇರಿದಂತೆ ಎಲ್ಲರಿಗೂ ಅನುಕೂಲ. ಇಲ್ಲದಿದ್ದರೆ ಪ್ರಗತಿಯಲ್ಲಿರುವ ಕಾಮಗಾರಿಯೇ ಸಂಚಕಾರವಾದೀತು ಎಂಬ ಭೀತಿಯೂ ಸಾರ್ವಜನಿಕರಿಗೆ ಮೂಡಿದೆ.

ರಸ್ತೆ ವಿಸ್ತರಣೆ ಕಾಮಗಾರಿ ಆರಂಭಗೊಂಡಿದೆ. ಮೊದಲ ಹಂತದಲ್ಲಿ ಮೋರಿ ನಿರ್ಮಾಣ ಮಾಡಿ, ರಸ್ತೆ ವಿಸ್ತರಣೆಗೆ ಸಿದ್ಧತೆಗಳು ನಡೆಯುತ್ತಿವೆ. ರಸ್ತೆಯ ಬದಿಯಲ್ಲಿ ಬೆಳೆದು ನಿಂತಿರುವ ಮರಗಳನ್ನು ತೆರವುಗೊಳಿಸುವ ಕಾರ್ಯ ಇನ್ನಷ್ಟೇ ನಡೆಯಬೇಕಾಗಿದೆ. ಇದನ್ನು ತೆರವು ಮಾಡದೇ ರಸ್ತೆ ಕಾಮಗಾರಿ ಪೂರ್ಣಗೊಳ್ಳದು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಗೆ ಲೋಕೋಪಯೋಗಿ ಇಲಾಖೆ ಪತ್ರ ಬರೆದಿದೆ. ಆದಷ್ಟು ಶೀಘ್ರ ಅನುಮತಿ ನೀಡಿ, ಮರ ತೆರವಿಗೆ ಸಹಕರಿಸುವಂತೆ ಒತ್ತಾಯಿಸಿದೆ. ಇನ್ನೆರಡು ದಿನಗಳಲ್ಲಿ ಕಾಮಗಾರಿಗೆ ಚಾಲನೆ ಸಿಗುವ ಸಾಧ್ಯತೆ ಇದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ರಸ್ತೆ ಬದಿ ಇರುವ ವಿದ್ಯುತ್‌ ಕಂಬಗಳೂ ತೊಡಕಾಗಿ ಪರಿಣಮಿಸಿವೆ. ಹಲವು ಕಡೆಗಳಲ್ಲಿ ರಸ್ತೆ ನಡುವೆಯೇ ತಂತಿಗಳಿವೆ. ಇಂತಹ ಪರಿಸ್ಥಿತಿ ಇಲ್ಲಿ ಆಗದಿರಲಿ ಎಂಬ ಹಾರೈಕೆ ಸ್ಥಳೀಯರದ್ದು. ಲೋಕೋಪಯೋಗಿ ಇಲಾಖೆ ವತಿಯಿಂದ ಮೆಸ್ಕಾಂಗೆ ಪತ್ರ ಬರೆಯಲಾಗಿದೆ. ಶೀಘ್ರ ತಂತಿ, ಕಂಬ ತೆರವು ಮಾಡಿ ಕಾಮಗಾರಿಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.

ವಿಸ್ತರಣೆ 
ಈ ಹಿಂದೆ ಹೊಸನಗರ- ಪಳಂಬೆ ರಸ್ತೆ 5 ಮೀಟರ್‌ ಅಗಲವಿತ್ತು. ಆದರೆ, ಡಾಮರು ಕೇವಲ 3.5 ಮೀ. ಅಗಲವಿತ್ತು. ಎರಡು ವಾಹನಗಳು ಎದುರು-ಬದುರಾಗಿ ಬಂದರೆ ಸೈಡ್‌ ಕೊಡಲು ಹಾಗೂ ಓವರ್‌ಟೇಕ್‌ ಮಾಡಲು ತೊಡಕಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಮನವಿ ಮೇರೆಗೆ ಲೋಕೋಪಯೋಗಿ ಇಲಾಖೆಯ ಎಂಡಿಆರ್‌ ಯೋಜನೆಯಡಿ 2.75 ಕೋಟಿ ರೂ. ಅನುದಾನ ಮೀಸಲಿಡಲಾಯಿತು. ಇದರಡಿ ರಸ್ತೆಯನ್ನು ಒಟ್ಟು 9 ಮೀಟರ್‌ನಷ್ಟು ಅಗಲ ಮಾಡುವ ಪ್ರಸ್ತಾಪ ಇದೆ. ಈ ಪೈಕಿ 5.5 ಮೀ. ಅಗಲಕ್ಕೆ ಡಾಮರು ಇರಲಿದೆ.

Advertisement

ಮಳೆಗಾಲಕ್ಕೆ ಮೊದಲು ಮುಗಿಸಲು ಯತ್ನ
ಹೊಸನಗರ- ಪಳಂಬೆ ನಡುವಿನ ರಸ್ತೆಗೆ 2.75 ಕೋಟಿ ರೂ. ಅನುದಾನ ಮಂಜೂರಾಗಿದೆ. ರಸ್ತೆಯನ್ನು 5.5 ಮೀಟರ್‌ನಷ್ಟು ಅಗಲ ಮಾಡಿ, ಡಾಮರು ಹಾಕಲಾಗುವುದು. ರಸ್ತೆ ಒಟ್ಟು 9 ಮೀಟರ್‌ನಷ್ಟು ಅಗಲವಾಗಲಿದೆ. ಮಳೆಗಾಲಕ್ಕೆ ಮೊದಲು ಕಾಮಗಾರಿ ಮುಗಿಸಬೇಕೆಂದು ಪ್ರಯತ್ನ ಪಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಗುತ್ತಿಗೆದಾರರಿಗೆ ಒತ್ತಡ ಹಾಕಲಾಗುತ್ತಿದೆ.
-ಎಲ್‌.ಸಿ. ಸಿಕ್ವೇರಾ
ಕಿರಿಯ ಎಂಜಿನಿಯರ್‌, ಪಿಡಬ್ಲ್ಯೂಡಿ ಇಲಾಖೆ

ಬೇಗನೆ ಪೂರ್ಣಗೊಳ್ಳಲಿ
ಈ ಹಿಂದೆ ರಸ್ತೆ ಇಕ್ಕಟ್ಟಾಗಿದ್ದರಿಂದ ಸಂಚಾರಕ್ಕೆ ಬಹಳ ಕಷ್ಟವಾಗುತ್ತಿತ್ತು. ರಸ್ತೆಯಲ್ಲಿ ತಿರುವುಗಳಿದ್ದ ಕಾರಣ ಸಾಕಷ್ಟು ಅಪಘಾತಗಳು ಸಂಭವಿಸುತ್ತಿದ್ದವು. ಹೀಗಾಗಿ, ತಿರುವುಗಳನ್ನು ಕಡಿಮೆ ಮಾಡಿ, ರಸ್ತೆ ಅಗಲ ಹೆಚ್ಚಿಸುವ ಅನಿವಾರ್ಯತೆ ಇತ್ತು. ಸದ್ಯಕ್ಕೆ ಕೆಲಸ ಆರಂಭವಾಗಿದ್ದು, ಒಂದಿಷ್ಟು ನಿರಾಳರಾಗಿದ್ದೇವೆ. ಮಳೆಗಾಲಕ್ಕೆ ಮೊದಲು ಕಾಮಗಾರಿ ಪೂರ್ಣಗೊಂಡರೆ, ಸಾರ್ವಜನಿಕರಿಗೆ ಅನುಕೂಲ. ಇಲ್ಲದೇ ಹೋದರೆ, ಮಳೆಗಾಲ ಪೂರ್ತಿ ತೊಂದರೆಗೆ ಸಿಲುಕುವ ಸಾಧ್ಯತೆ ಇದೆ.
-ಕೃಷ್ಣ ನಾಯ್ಕ ಪಟ್ಟೆ
ಗ್ರಾಮಸ್ಥ

ದಿನೇಶ್‌ ಬಡಗನ್ನೂರು

Advertisement

Udayavani is now on Telegram. Click here to join our channel and stay updated with the latest news.

Next