Advertisement

ಮದುವೆ ನೆಪದಲ್ಲಿ 25 ಲಕ್ಷ ರೂ. ದೋಚಿ ಪರಾರಿ

12:50 AM May 08, 2019 | Lakshmi GovindaRaj |

ಬೆಂಗಳೂರು: ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ನಲ್ಲಿ ಪರಿಚಯವಾದ ವ್ಯಕ್ತಿ ವಿಚ್ಛೇದಿತ ಮಹಿಳೆಯನ್ನು ವಿವಾಹವಾಗುವ ನೆಪದಲ್ಲಿ 25 ಲಕ್ಷ ರೂ. ಹಣ ಪಡೆದು ಪರಾರಿಯಾಗಿರುವ ಘಟನೆ ಜ್ಞಾನಭಾರತಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಹಣ ಪಡೆದು ವಂಚಿಸುವ ಉದ್ದೇಶದಿಂದಲೇ ಮದುವೆ ನಾಟಕವಾಡಿದ ವ್ಯಕ್ತಿಗೆ ಆತನ ಸ್ನೇಹಿತೆಯೇ ಸಾಥ್‌ ನೀಡಿದ್ದಾರೆ. ಮಹಿಳೆಗೆ ನಂಬಿಕೆ ಬರಲು ತಮಿಳುನಾಡಿನಲ್ಲಿ ವಿವಾಹವಾದ ವಂಚಕ, ಒಂದೇ ತಿಂಗಳಿಗೆ 25 ಲಕ್ಷ ರೂ. ಪಡೆದು ಸದ್ದಿಲ್ಲದೆ ಪರಾರಿಯಾಗಿದ್ದಾನೆ.

ಹಣ ಕಳೆದುಕೊಂಡ ಬಳಿಕ ಮಹಿಳೆ ಅನುಮಾನ ಬಂದು ಆತ ವಾಸಿಸುತ್ತಿದ್ದ ಮನೆಗೆ ತೆರಳಿದಾಗ ಮನೆಖಾಲಿ ಮಾಡಿಕೊಂಡು ಹೋಗಿದ್ದಾನೆ. ಜತೆಗೆ, ವಂಚನೆ ಎಸಗುವ ಉದ್ದೇಶದಿಂದಲೇ ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ನಲ್ಲಿ ನಕಲಿ ಐಡಿ ಕ್ರಿಯೇಟ್‌ ಮಾಡಿದ್ದ ಸಂಗತಿ ಅರಿವಿಗೆ ಬಂದಿದೆ.

ಮದುವೆ ಹೆಸರಲ್ಲಿ ಹಣ ಕಳೆದುಕೊಂಡ ಮಹಿಳೆ ಇದೀಗ ಪೊಲೀಸ್‌ ಠಾಣೆಯಲ್ಲಿ ಕುಮಾರ್‌ ಹಾಗೂ ಆತನ ಸ್ನೇಹಿತೆ ರಮ್ಯಾ ಎಂಬಾಕೆ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ವಂಚಕ ಜೋಡಿಯ ಬಂಧನಕ್ಕೆ ಬಲೆಬೀಸಿದ್ದಾರೆ.

ವಂಚನೆಗೆ ಆರುತಿಂಗಳ ಫ್ಲ್ಯಾನ್‌! : ಸರ್ಕಾರಿ ಶಿಕ್ಷಕಿಯಾಗಿರುವ ಉಮಾ ( ಹೆಸರು ಬದಲಾಯಿಸಲಾಗಿದೆ)ಅವರು ಮೊದಲ ಪತಿಗೆ ವಿಚ್ಛೇದನ ನೀಡಿ ಆಡುಗೋಡಿಯಲ್ಲಿ ನೆಲೆಸಿದ್ದರು. ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ನಲ್ಲಿ ವಿಳಾಸ ಪಡೆದುಕೊಂಡಿರುವುದಾಗಿ ಹೇಳಿದ್ದ ಕುಮಾರ್‌ ಕಳೆದ ಡಿಸೆಂಬರ್‌ನಲ್ಲಿ ದೂರವಾಣಿ ಕರೆ ಮಾಡಿ ಮಾತನಾಡಿದ್ದ.

Advertisement

ಇದಾದ ಬಳಿಕ ರಮ್ಯಾ ಎಂಬಾಕೆ ಕರೆ ಮಾಡಿ, ತಾನು ಕುಮಾರ್‌ ಸಹೋದರಿ ಎಂದು ಹೇಳಿ, ಸಹೋದರ ಕುಮಾರ್‌ಬಿಲ್ಡರ್‌ ಆಗಿದ್ದು ನಗರದ ಹಲವು ಕಡೆ ಸ್ವಂತ ಮನೆಗಳಿವೆ ಲಕ್ಷಾಂತರ ರೂ. ಆದಾಯವಿದೆ ಎಂದು ತಿಳಿಸಿದ್ದರು. ಕುಮಾರ್‌ ಕೂಡ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದುಕೊಂಡಿದ್ದು ಮದುವೆಯಾಗುವುದಾಗಿ ನಂಬಿಸಿದ್ದ.

ಈ ಬೆಳವಣಿಗೆಗಳ ಮಧ್ಯೆಯೇ ಜನವರಿಯಲ್ಲಿ 8 ಲಕ್ಷ ರೂ. ತುರ್ತು ಅವಶ್ಯಕತೆಗೆ ಬೇಕಾಗಿದೆ ಎಂದು ಹೇಳಿ ಪಡೆದುಕೊಂಡು ಅದರಲ್ಲಿ 7ಲಕ್ಷ ರೂ. ವಾಪಾಸ್‌ ನೀಡಿದ್ದರು. ಫೆ.13ರಂದು ತಮಿಳುನಾಡಿನ ದೇವಾಲಯೊಂದಲ್ಲಿ ವಿವಾಹದ ಬಳಿಕ ಕುಮಾರ್‌ ಮನೆಗೆ ಬಂದು ಹೋಗುತ್ತಿದ್ದು ಸದ್ಯದಲ್ಲಿಯೇ ಮನೆಗೆ ಕರೆದೊಯ್ಯುವುದಾಗಿ ತಿಳಿಸಿದ್ದರು.

ಇದಾದ ಬಳಿಕ ತಮ್ಮ ತಾಯಿಯ ಹೆಸರಿನಲ್ಲಿದ್ದ ಮನೆ ಮಾರಾಟ ಮಾಡಿದ್ದಕ್ಕೆ 60 ಲಕ್ಷ ರೂ. ಹಣ ಬಂದಿದ್ದ ವಿಚಾರ ತಿಳಿದಿದ್ದ ಕುಮಾರ್‌ ಹಾಗೂ ರಮ್ಯಾ 25 ಲಕ್ಷ ರೂ. ಹಣ ಬೇಕೆಂದು ಪಟ್ಟು ಹಿಡಿದು ಪಡೆದುಕೊಂಡರು ಎಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಹಣ ಪಡೆದು ಮಾತು ನಿಲ್ಲಿಸಿದ: 25 ಲಕ್ಷ ರೂ. ಪಡೆದ ಕೆಲವೇ ದಿನಗಳಲ್ಲಿ ಮನೆಗೆ ಬರುವುದನ್ನು ನಿಲ್ಲಿಸಿದ ಕುಮಾರ್‌ ಫೋನ್‌ ಮಾಡಿದರೂ ಕರೆ ಮಾಡಿ ಸ್ವೀಕರಿಸುತ್ತಿರಲಿಲ್ಲ. ರಮ್ಯಾಳಿಗೆ ಕರೆ ಮಾಡಿದರೆ ಕುಮಾರ್‌ ತನಗೆ ಗೊತ್ತೇ ಇಲ್ಲ ಎಂಬಂತೆ ವರ್ತಿಸಿದ್ದಾರೆ. ಮತ್ತೂಮ್ಮೆ ಕರೆ ಮಾಡಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಪ್ರಾಣಬೆದರಿಕೆ ಒಡ್ಡಿದ್ದಾರೆ.

ಅವರು ವಾಸವಿದ್ದ ಮನೆ ಕೂಡ ಖಾಲಿ ಮಾಡಿಕೊಂಡು ಹೋಗಿದ್ದು. ಪರಿಶೀಲನೆ ನಡೆಸಿದಾಗ ಕುಮಾರ್‌ ಅವರ ನಿಜವಾದ ಹೆಸರು ಶೇಖರ್‌ ಆಗಿದ್ದು ವಂಚನೆ ಮಾಡುವ ಸಲುವಾಗಿಯೇ ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ನಲ್ಲಿ ಕುಮಾರ್‌ ಹೆಸರಿನಲ್ಲಿ ನಕಲಿ ಅಕೌಂಟ್‌ ಹೊಂದಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next