ಬೀದರ: ಬೀದರ ನಗರದಲ್ಲಿ ಕನಕದಾಸರ ಮೂರ್ತಿ ಸ್ಥಾಪನೆಗೆ 25 ಲಕ್ಷ ರೂ. ಅನುದಾನ ನೀಡುವುದಾಗಿ ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ ಭರವಸೆ ನೀಡಿದರು.
ನಗರದಲ್ಲಿ ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದಿಂದ ಆಯೋಜಿಸಿದ್ದ ಕನಕ ಸಂದೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾರ್ವಜನಿಕರ ಸೇವೆ ಗಮನಿಸಿ ಬಿಜೆಪಿ ನನಗೆ ಮತ್ತೂಮ್ಮೆ ವಿಧಾನ ಪರಿಷತ್ ಸದಸ್ಯನನ್ನಾಗಿ ಆಯ್ಕೆ ಮಾಡಿದೆ. ಸಾರ್ವಜನಿಕರ ಕೆಲಸವನ್ನು ಹಿಂದೆಯೂ ಮಾಡಿದ್ದೇನೆ, ಮುಂದೆಯೂ ಸಕ್ರಿಯವಾಗಿ ಮುಂದುವರಿಸುತ್ತೇನೆ. ಜೊತೆಗೆ ಸಮಾಜ ಬಾಂಧವರ ಕೆಲಸಕ್ಕೂ ಸಹಕಾರ ನೀಡುತ್ತೇನೆ ಎಂದರು.
ಜಿಪಂ ಅಧ್ಯಕ್ಷೆ ಭಾರತಬಾಯಿ ಶೇರಿಕಾರ ಮಾತನಾಡಿ, ನಾಡಿನಾದ್ಯಂತ ಕನಕ ಸಂದೇಶ ಪಸರಿಸಲಿ. ಕನಕದಾಸರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಮಹಿಳೆಯರು ಮೂಢನಂಬಿಕೆಗಳನ್ನು ಬಿಟ್ಟು, ಧೈರ್ಯದಿಂದ ಹೊರಗೆ ಬರಬೇಕು. ಹಾಗೂ ಅಧಿಕಾರದಲ್ಲಿರುವ ಚುನಾಯಿತ ಪ್ರತಿನಿ ಧಿಗಳು ಪಕ್ಷಭೇದ ಮರೆತು, ಒಂದಾಗಿ ಬೀದರ ಶಿವನಗರದಲ್ಲಿ ಕನಕದಾಸರ ಮೂರ್ತಿ ಸ್ಥಾಪನೆಗೆ ಮುಂದಾಗಬೇಕು. ನಾನು ಕೂಡ ಎಲ್ಲ ರೀತಿ ಸಹಕಾರ ನೀಡುವುದಾಗಿ ಹೇಳಿದರು.
ಇದೇ ವೇಳೆ ಎರಡನೇ ಬಾರಿಗೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ರಘುನಾಥರಾವ್ ಮಲ್ಕಾಪುರೆ ಹಾಗೂ ಸರ್ಕಾರಿ ಸೇವೆಯಿಂದ ನಿವೃತ್ತರಾದ ಬಕ್ಕಪ್ಪಾ ನಾಗೂರೆ ಅವರನ್ನು ಅಭಿನಂದಿಸಲಾಯಿತು. ಪಂಡಿತರಾವ್ ಚಿದ್ರಿ, ಜಿಪಂ ಮಾಜಿ ಸದಸ್ಯ ರಾಜಶೇಖರ ನಾಗಮೂರ್ತಿ, ಪೀರಪ್ಪಾ ಯರನಳ್ಳಿ ಮಾತನಾಡಿದರು. ಸಿದ್ದಾರೆಡ್ಡಿ, ನಗರಸಭೆ ಸದಸ್ಯ ರಾಜಾರಾಮ ಚಿಟ್ಟಾ, ಸಂಘದ ಅಧ್ಯಕ್ಷ ಸಂತೋಷ ಜೋಳದಾಪಕೆ, ಆತ್ಮಾನಂದ ಬಂಬುಳಗಿ, ಬಸವರಾಜ
ಅಮ್ಮಣ್ಣ, ಎಂ.ಪಿ. ವೈಜಿನಾಥ, ಬೊಮಗೊಂಡ ಚಿಟ್ಟಾವಾಡಿ, ಬಸವರಾಜ ಬುಧೇರಾ, ರವಿಶಂಕರ ನೀಲಮನಳ್ಳಿ, ಕಾಶಿನಾಥ ಚಿಟ್ಟಾವಾಡಿ ಇದ್ದರು