ಸೂರತ್: ಮಂಗಳೂರು ಮೂಲದ ಡಾ. ಸುಶೀಲ್ ದೇವಪ್ರಸಾದ್ ಜತಾನಾ ಎಂಬ ವೈದ್ಯರ ಆ್ಯಕ್ಸಿಸ್ ಬ್ಯಾಂಕ್ ಖಾತೆಯಿಂದ 2.5 ಕೋಟಿ ರೂ. ಹಣ ಲಪಟಾಯಿಸಿದ್ದ ಅದೇ ಬ್ಯಾಂಕಿನ ಇಬ್ಬರು ಸಿಬ್ಬಂದಿ, ಒಬ್ಬ ಮಾಜಿ ಸಿಬ್ಬಂದಿ ಸೇರಿದಂತೆ ಒಟ್ಟು ನಾಲ್ಕು ಮಂದಿಯನ್ನು ಸೂರತ್ ಪೊಲೀಸರು ಬಂಧಿಸಿದ್ದಾರೆ.
ಸೂರತ್‌ನ ಆಕ್ಸಿಸ್ ಬ್ಯಾಂಕ್‌ನ ಅಧಿಕಾರಿ ಓಂಕಿಶನ್ ಪಟೇಲ್ ಅವರ ದೂರಿನ ಆಧಾರದ ಮೇಲೆ ಆ್ಯಕ್ಸಿಸ್ ಬ್ಯಾಂಕ್‌ನ ಹಾಲಿ ಉದ್ಯೋಗಿಗಳಾಗಿರುವ ಸಂದೀಪ್ ದಾಖಾÅ, ಸಾವನ್ ಬಾಲ್ಡಾ, ಮಾಜಿ ಉದ್ಯೋಗಿ ದಾವಲ್ ಬಿಖಾಡಿಯಾ ಅವರನ್ನು ವಶಕ್ಕೆ ಪಡೆಯಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದ ಸಿಸಿಟಿವಿಯ ದೃಶ್ಯಾವಳಿಗಳಲ್ಲಿ ಕಾಣಸಿಕ್ಕಿರುವ ಮತ್ತೂಬ್ಬ ವ್ಯಕ್ತಿಯೊಬ್ಬನನ್ನು ನಾಲ್ಕನೇ ಆರೋಪಿಯೆಂದು ಪರಿಗಣಿಸಲಾಗಿದ್ದು ಆತನಿಗಾಗಿ ಶೋಧ ನಡೆದಿದೆ. ಈತ ಯಾರೆಂಬುದು ಇನ್ನೂ ಪತ್ತೆಯಾಗಿಲ್ಲ.
ಹಣ ದೋಚಿದ ಬಗೆ: ಜನವರಿ 8ರಿಂದ 18ರವರೆಗಿನ ಅವಧಿಯಲ್ಲಿ ಹಣ ದೋಚಲಾಗಿದೆ. ಇದರ ಮೊದಲ ಹೆಜ್ಜೆಯಾಗಿ, ಸಂದೀಪ್ ದಾಖಾÅ ಹಾಗೂ ಸಾವನ್ ಬಾಲ್ಡಾ, ಡಾ. ಸುಶೀಲ್ ಅವರು ಮೃತಪಟ್ಟಿದ್ದಾರೆಂಬ ಸುಳ್ಳು ಮಾಹಿತಿ ಹಾಗೂ ದಾಖಲೆಗಳನ್ನು ಬ್ಯಾಂಕಿಗೆ ನೀಡಿ, ಗ್ರಾಹಕರ ಬ್ಯಾಂಕ್ ವಿವರಗಳನ್ನು ಬದಲಿಸಲು ಬ್ಯಾಂಕು ತಮಗೆ ನೀಡಿದ್ದ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ಡಾ. ಸುಶೀಲ್ ಅವರ ಖಾತೆಯ ಮಾಲೀಕತ್ವ ಹಾಗೂ ಇತರ ವಿವರಗಳನ್ನು ಬದಲಿಸಿದ್ದಾರೆ. ಈ ವೇಳೆ, ಮೊಬೈಲ್ ಸಂಖ್ಯೆಯನ್ನೂ ಬದಲಿಸಿ, ತಮ್ಮ ಮೊಬೈಲ್ ಸಂಖ್ಯೆಗಳನ್ನು ನೀಡಿದ್ದಾರೆ.
ಆನಂತರ, ಮಂಗಳೂರಿನಲ್ಲಿದ್ದ ಅವರ ಆ್ಯಕ್ಸಿಸ್ ಬ್ಯಾಂಕ್ ಖಾತೆಯಿಂದ ಒಂದಿಷ್ಟು ಕೋಟಿ ಹಣವನ್ನು ವಿತ್‌ಡ್ರಾ ಮಾಡಿ, ಆನಂತರ, ಸಿರ್ಸಾದ ಆ್ಯಕ್ಸಿಸ್ ಬ್ಯಾಂಕ್‌ಗಳ ಶಾಖೆಯಿಂದಲೂ ಮತ್ತಷ್ಟು ಕೋಟಿ ರೂ.ಗಳನ್ನು ಡಾ. ಸುಶೀಲ್ ಅವರ ಖಾತೆಯಿಂದ ಹಣ ವಿತ್‌ಡ್ರಾ ಮಾಡಿಕೊಳ್ಳಲಾಗಿದೆ. ಇದೇ ಕ್ರಮದಲ್ಲಿ, ಒಟ್ಟು 2.5 ಕೋಟಿ ಹಣ ಲೂಟಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಹಿಂದೆ ದೊಡ್ಡ ದಂಧೆ ಇರಬಹುದೆಂಬ ಶಂಕೆಯಿದೆ. ಸದ್ಯಕ್ಕೆ ಬಂಧಿತರಿಂದ 1.23 ಕೋಟಿ ರೂ. ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಆ್ಯಕ್ಸಿಸ್ ಬ್ಯಾಂಕಿನ ಇನ್ನೂ ಕೆಲವು ಅಧಿಕಾರಿಗಳು ಶಾಮೀಲಾಗಿರುವ ಅನುಮಾನವಿದ್ದು ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
– ವಿಧಿ ಚೌಧರಿ, ಸೂರತ್‌ನ ಪೊಲೀಸ್ ಉಪ ಆಯುಕ್ತ