ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕೊಳೆಗೇರಿಗಳ ಅಭಿವೃದ್ಧಿ ಬಜೆಟ್‌ನಲ್ಲಿ 60 ಕೋಟಿ ರೂ. ವಿಶೇಷ ಅನುದಾನ ನೀಡಲಾಗಿದ್ದು, ಒಟ್ಟಾರೆಯಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಕಲ್ಯಾಣಕ್ಕಾಗಿ 225 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.
ಪಾಲಿಕೆಯ 198 ವಾರ್ಡ್‌ಗಳಲ್ಲಿ ಎಸ್‌ಸಿ-ಎಸ್‌ಸಿ ಸಮುದಾಯದವರು ವಾಸಿಸುವ ಕೊಳೆಗೇರಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಪ್ರತಿ ವಾರ್ಡ್‌ಗೆ 15 ಲಕ್ಷ ರೂ.ಗಳಂತೆ ಒಟ್ಟು 30 ಕೋಟಿ ರೂ. ಮೀಸಲಿಡಲಾಗಿದೆ. ಜತೆಗೆ ಪೌರಕಾರ್ಮಿಕರ ಮಧ್ಯಾಹ್ನದ ಬಿಸಿಯೂಟಕ್ಕಾಗಿ 12 ಕೋಟಿ ರೂ.ಗಳನ್ನು ಆಯವ್ಯಯದಲ್ಲಿ ಇಡಲಾಗಿದೆ.
ಇದರೊಂದಿಗೆ ಎಸ್ಸಿ,ಎಸ್ಟಿ ವರ್ಗಕ್ಕೆ ವೈಯಕ್ತಿಕ ಮನೆ ಹೊಂದಲು ಆರ್ಥಿಕ ಸಹಾಯ ದೃಷ್ಟಿಯಿಂದ ಪ್ರತಿ ವಾರ್ಡ್‌ಗೆ 10 ಮನೆಗಳಂತೆ 100 ಕೋಟಿ ರೂ. ನಿಗದಿಪಡಿಸಲಾಗಿದೆ. ಜತೆಗೆ ಒಂಟಿ ಮನೆಗೆ ಹಂಚಿಕೆ ಮಾಡಿದ ಅನುದಾನ ಸಮರ್ಪಕವಾಗಿ ಬಳಕೆಯಾಗಲು ವಾರ್ಡ್‌ನಲ್ಲಿ ಎಸ್ಸಿ-ಎಸ್ಟಿ ಫಲಾನುಭವಿಗಳು ಇಲ್ಲದಿದ್ದಲ್ಲಿ ಆ ಅನುದಾನವನ್ನು ವಾರ್ಡ್‌ನ ವಿಧಾನಸಭಾ ಕ್ಷೇತ್ರದಲ್ಲಿನ ಮತ್ತೂಂದು ವಾರ್ಡ್‌ನಲ್ಲಿರುವ ಪರಿಶಿಷ್ಟರಿಗೆ ನೀಡುವ ಬಗ್ಗೆ ಸ್ಥಳೀಯ ಸದಸ್ಯರು ಹಾಗೂ ವಲಯ ಜಂಟಿ ಆಯುಕ್ತರು ಕ್ರಮಕೈಗೊಳ್ಳಬಹುದು ಎಂದು ಉಲ್ಲೇಖೀಸಲಾಗಿದೆ.
ಪರಿಶಿಷ್ಟರು ಆರ್ಥಿಕ ಸ್ವಾವಲಂಬಿಗಳಾಗಲು 10 ಕೋಟಿ ಮೀಸಲಿಡಲಾಗಿದ್ದು, ಕೊಳಗೇರಿ ಅಭಿವೃದ್ಧಿ ಮಂಡಳಿಗೆ ವಂಚಿಗೆ ಪಾವತಿಸಲು 12 ಕೋಟಿ ರೂ ಹಾಗೂ ಕೊಳೆಗೇರಿಗಳಲ್ಲಿ ರಸ್ತೆ, ಚರಂಡಿ ಹಾಗೂ ಮೂಲಸೌಕರ್ಯ ಕಲ್ಪಿಸಲು 60 ಕೋಟಿ ನೀಡಲಾಗಿದೆ.
ಇದರೊಂದಿಗೆ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ವೈಯಕ್ತಿಕ ಮನೆ ನಿರ್ಮಾಣಕ್ಕೆ ಆರ್ಥಿಕ ಸಹಾಯ ಮಾಡುವ ದೃಷ್ಟಿಯಿಂದ ಪ್ರತಿ ವಾರ್ಡ್‌ಗೆ 5 ಮನೆಯಂತೆ 50 ಕೋಟಿ ರೂ.ಗಳನ್ನು ಆಯವ್ಯಯದಲ್ಲಿ ಮೀಸಲಿಡಲಾಗಿದೆ.