ನವದೆಹಲಿ: ಕೇಂದ್ರ ಸರ್ಕಾರ ಶುಕ್ರವಾರ ಪ್ರಕಟಿಸಿದ ಮಧ್ಯಂತರ ಬಜೆಟ್‌ನಲ್ಲಿ ಕ್ರೀಡೆಗೆ ಒಟ್ಟಾರೆ 214.20 ಕೋಟಿ ರೂ.ವಿನ ಅಲ್ಪ ಹೆಚ್ಚಳವನ್ನು ಮಾಡಲಾಗಿದೆ. ಸಾಯ್ (ಭಾರತೀಯ ಕ್ರೀಡಾ ಪ್ರಾಧಿಕಾರ)ಗೆ ನೀಡಿರುವ ಅನುದಾನ ಮತ್ತು ಕ್ರೀಡಾಪಟುಗಳಿಗೆ ಮೀಸಲಿಟ್ಟಿರುವ ಪ್ರೋತ್ಸಾಹ ಧನವೂ ಇದರಲ್ಲಿ ಒಳಗೊಂಡಿದೆ.
2018-19ರಲ್ಲಿ ಮಂಡನೆಯಾದ ಬಜೆಟ್‌ನಲ್ಲಿ ಕ್ರೀಡೆಗೆ 2002.72 ಕೋಟಿ ರೂ. ಹಣವನ್ನು ಮೀಸಲಿಡಲಾಗಿತ್ತು. ಈ ಸಲ (2019-2020) ಇದರ ಪ್ರಮಾಣದಲ್ಲಿ ಅಲ್ಪ ಏರಿಕೆಯಷ್ಟೇ ಮಾಡಲಾಗಿದ್ದು ಒಟ್ಟಾರೆ ಕ್ರೀಡೆಗಾಗಿ 2216.92 ಕೋಟಿ ರೂ. ಹಣವನ್ನು ಮೀಸಲಿಡಲಾಗಿದೆ ಎಂದು ಹಣಕಾಸು ಸಚಿವ ಪಿಯೂಷ್ ಗೋಯೆಲ್ ಘೋಷಿಸಿದ್ದಾರೆ.
ಯಾರ್ಯಾರಿಗೆ ಎಷ್ಟೆಷ್ಟು?: ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ಒಟ್ಟಾರೆ 55 ಕೋಟಿ ರೂ. ಹೆಚ್ಚಿಸಲಾಗಿದೆ. ಕಳೆದ ಸಲ ಒಟ್ಟು 395 ಕೋಟಿ ರೂ. ನೀಡಲಾಗಿತ್ತು. ಎನ್‌ಎಸ್‌ಡಿಎಫ್ (ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ನಿಧಿ)ಗೆ ನೀಡಿರುವ ಹಣದ ಮೊತ್ತದಲ್ಲಿ ಬಾರೀ ಏರಿಕೆಯಾಗಿದೆ. ಒಟ್ಟು 2 ಕೋಟಿ ರೂ.ವಿನಿಂದ 70 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಇನ್ನು ಕ್ರೀಡಾಪಟುಗಳಿಗೆ ನೀಡಿರುವ ಪ್ರೋತ್ಸಾಹಧನದಲ್ಲೂ ಏರಿಕೆಯಾಗಿದೆ. ಈ ಹಿಂದೆ ನೀಡುತ್ತಿದ್ದ ಒಟ್ಟು 63 ಕೋಟಿ ರೂ.ವಿನಿಂದ ಒಟ್ಟು 89 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ರಾಷ್ಟ್ರೀಯ ಕ್ರೀಡಾ ಒಕ್ಕೂಟ (ಎನ್‌ಎಸ್‌ಎಫ್ಗಳಿಗೆ) ಕಳೆದ ಸಲ 245.13 ಕೋಟಿ ರೂ.ನೀಡಲಾಗಿತ್ತು. ಈ ಸಲ ಅಲ್ಪ ಇಳಿಕೆ ಕಂಡು 245 ಕೋಟಿ ರೂ.ಗೆ ನಿಂತಿದೆ. ಇನ್ನು ಕ್ರೀಡಾಪಟುಗಳಿಗೆ ನೀಡುವ ನಗದು ಹಾಗೂ ಪ್ರೋತ್ಸಾಹಧನದಲ್ಲಿ ಒಟ್ಟಾರೆ 94.07 ಕೋಟಿ ರೂ. ಹೆಚ್ಚಿಸಲಾಗಿದೆ. ಈ ಹಿಂದೆ 316.93 ಕೋಟಿ ರೂ. ನೀಡಲಾಗಿದ್ದು ಈ ಸಲ ಒಟ್ಟು 411 ಕೋಟಿ ರೂ. ಮೀಸಲಿಡಲಾಗಿದೆ. ಖೇಲೋ ಇಂಡಿಯಾಕ್ಕೆ ನೀಡಿರುವ ಮೊತ್ತವನ್ನು ಒಟ್ಟು 550.69 ಕೋಟಿ ರೂ.ವಿನಿಂದ 601 ಕೋಟಿ ರೂ.ಗೆ ಹೆಚ್ಚಿಸಲಾಗಿದೆ.