Advertisement

ಜಿಎಸ್‌ಟಿ ನಕಲಿ ರಶೀದಿ ವಂಚನೆಯ ಜಾಲ ಬಯಲು​​​​​​​

06:00 AM Sep 27, 2018 | |

ಬೆಂಗಳೂರು: ಸುಮಾರು 14 ವ್ಯವಹಾರಗಳ ಹೆಸರಿನಲ್ಲಿ ಜಿಎಸ್‌ಟಿ ನೋಂದಣಿ ಪಡೆದು ಸರಕು ಮತ್ತು ಸೇವೆಯನ್ನು ಖರೀದಿಸದೆ ನಕಲಿ ಇನ್‌ವಾಯ್ಸ ರಸೀದಿಗಳನ್ನು ಸಲ್ಲಿಸಿ ಸುಮಾರು 15ರಿಂದ 20 ಕೋಟಿ ರೂ. ಜಿಎಸ್‌ಟಿ ವಂಚಿಸಿರುವ ಜಾಲವನ್ನು ಬೇಧಿಸಿರುವ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು, ಉದ್ಯಮಿ ಹಾಗೂ ಇಬ್ಬರು ಸಹಚರರನ್ನು ಬಂಧಿಸಿದ್ದಾರೆ.

Advertisement

ರಾಜೀವ್‌ ಎಂಟರ್‌ಪ್ರೈಸಸ್‌ ಮಾಲೀಕ ವಿಕ್ರಮ್‌ ಜೀತ್‌ ದುಗ್ಗಲ್‌ ಹಾಗೂ ಸಹಚರರಾದ ಅಷ#ಕ್‌ ಅಹಮದ್‌, ನಯಾಜ್‌ ಅಹಮದ್‌ ಎಂಬುವರನ್ನು ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ದಕ್ಷಿಣ ವಲಯದ ಜಾರಿ ವಿಭಾಗವು ಮಂಗಳವಾರ ಬಂಧಿಸಿದ್ದು, ತನಿಖೆ ಚುರುಕುಗೊಳಿಸಿದೆ.

ದೇಶಾದ್ಯಂತ ಜಿಎಸ್‌ಟಿ ಜಾರಿಯಾಗಿ ವರ್ಷ ಕಳೆದ ಬಳಿಕ ರಾಜ್ಯದಲ್ಲಿ ತೆರಿಗೆ ವಂಚಕರ ಪತ್ತೆ, ದಂಡ ಸಹಿತ ಸೂಕ್ತ ತೆರಿಗೆ ವಸೂಲಿ ಮಾಡುವ ಕಾರ್ಯಕ್ಕೆ ಇಲಾಖೆ ಆದ್ಯತೆ ನೀಡಿದೆ. ಅದರಂತೆ ಪರಿಶೀಲನೆ ವೇಳೆ ನಕಲಿ ಇನ್‌ವಾಯ್ಸ ರಸೀದಿ ಸಲ್ಲಿಸಿ ವಂಚಿಸಿರುವ ಜಾಲವನ್ನು ಪತ್ತೆ ಹಚ್ಚುವಲ್ಲಿ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ವಿಕ್ರಮ್‌ ಜೀತ್‌ ದುಗ್ಗಲ್‌ ಎಂಬುವರು ಅಷ#ಕ್‌ ಅಹಮದ್‌ ಹಾಗೂ ನಯಾಜ್‌ ಅಹಮದ್‌ ಎಂಬುವರ ಜೊತೆಗೂಡಿ ಸಂಬಂಧಿಕರು, ಇತರೆ ವ್ಯಕ್ತಿಗಳ ಹೆಸರಿನಲ್ಲಿ ಒಟ್ಟು 14 ವ್ಯವಹಾರದಡಿ ಜಿಎಸ್‌ಟಿ ನೋಂದಣಿ ಮಾಡಿಕೊಂಡಿದ್ದಾರೆ. ಮನೆಯ ಎರಡನೇ ಮಹಡಿಯಲ್ಲಿ ಸಣ್ಣ ಕಚೇರಿ ತೆರೆದು ಸರಕುಗಳನ್ನು ಖರೀದಿಸದೆ ನಕಲಿ ಇನ್‌ವಾಯ್ಸ ರಸೀದಿ, ಇ-ವೇ ರಸೀದಿಗಳನ್ನು ಸೃಷ್ಟಿಸುತ್ತಿದ್ದರು. ಈ ಇನ್‌ವಾಯ್ಸ ರಸೀದಿಗಳನ್ನು ಬಳಸಿ ಇತರೆ ಡೀಲರ್‌ಗಳು ಹುಟ್ಟುವರಿ ತೆರಿಗೆ (ಇನ್‌ಪುಟ್‌ ಟ್ಯಾಕ್ಸ್‌ ಕೆಡಿಟ್‌) ಪಡೆದು ವಂಚಿಸುತ್ತಿದ್ದರು ಎಂದು ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ಎಂ.ಎಸ್‌.ಶ್ರೀಕರ ತಿಳಿಸಿದ್ದಾರೆ.

ವಂಚನೆಗೆ ಸಂಬಂಧಪಟ್ಟಂತೆ ಖಚಿತ ಗೌಪ್ಯ ಮಾಹಿತಿಯೊಂದಿಗೆ ದತ್ತಾಂಶ ವಿಶ್ಲೇಷಣೆ (ಡೇಟಾ ಅನಾಲಿಸಿಸ್‌) ಮೂಲಕ ಜಾರಿ ವಿಭಾಗದ ಹೆಚ್ಚುವರಿ ಆಯುಕ್ತ ನಿತೇಶ್‌ ಪಾಟೀಲ್‌ ಅವರ ಮೇಲ್ವಿಚಾರಣೆಯಲ್ಲಿ ಅಧಿಕಾರಿಗಳು ಮಂಗಳವಾರ ಕಚೇರಿ ಮೇಲೆ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ 14 ವ್ಯವಹಾರಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಇದೇ ವೇಳೆ ಎರಡು ಲ್ಯಾಪ್‌ಟಾಪ್‌, ಮೊಬೈಲ್‌ ಫೋನ್‌, ಡೈರಿಗಳು, ಇತರೆ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಹೇಳಿದ್ದಾರೆ.

Advertisement

ಉದ್ಯಮಿ ವಿಕ್ರಮ್‌ ಜೀತ್‌ ದುಗ್ಗಲ್‌ ಜತೆಗೆ ಸಹಚರರಾದ ಅಫ‌Òಕ್‌ ಅಹಮದ್‌, ನಯಾಜ್‌ ಅಹಮದ್‌ ಅವರನ್ನು ಬಂಧಿಸಲಾಗಿದೆ. ಅಧಿಕಾರಿಗಳ ತಂಡವು ಕಳೆದ ಒಂದು ತಿಂಗಳಲ್ಲಿ ನಕಲಿ ಬಿಲ್‌, ನಕಲಿ ಇನ್‌ವಾಯ್ಸ ಸಲ್ಲಿಸಿ ವಂಚಿಸುತ್ತಿದ್ದ ನಕಲಿ ಡೀಲರ್‌ಗಳ ವಂಚನೆ ದಂಧೆಯನ್ನು ಬಯಲಿಗೆಳೆದಿದ್ದಾರೆ. ಬೆಂಗಳೂರಿನಲ್ಲಿ 50ಕ್ಕೂ ಹೆಚ್ಚು ವ್ಯಾಪಾರ, ಉದ್ದಿಮೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದು, ತೆರಿಗೆ ವಂಚನೆ ಸಾಧ್ಯತೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

15- 20 ಕೋಟಿ ರೂ. ತೆರಿಗೆ ವಂಚನೆ
ಸುಮಾರು 203 ಕೋಟಿ ರೂ. ಮೊತ್ತಕ್ಕೆ ನಕಲಿ ಇನ್‌ವಾಯ್ಸ ಸಲ್ಲಿಸಿ ವ್ಯವಹರಿಸಿದ್ದಾರೆ. ಇದನ್ನು ಬಳಸಿಕೊಂಡು ಡೀಲರ್‌ಗಳು ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಪಡೆದು ವಂಚಿಸಿದ್ದಾರೆ. ಒಟ್ಟು 15 ಕೋಟಿ ರೂ.ನಿಂದ 20 ಕೋಟಿ ರೂ.ನಷ್ಟು ಜಿಎಸ್‌ಟಿ ವಂಚಿಸಿರುವ ಸಾಧ್ಯತೆಯಿದ್ದು, ಪರಿಶೀಲನೆ ಮುಂದುವರಿದಿದೆ ಎಂದು ಹೇಳಿದ್ದಾರೆ.

ಈವರೆಗೆ ಆರು ಮಂದಿ ಬಂಧನ
ಜಿಎಸ್‌ಟಿ ವಂಚನೆಗೆ ಸಂಬಂಧಪಟ್ಟಂತೆ ಈ ಹಿಂದೆ ಮೂರು ಮಂದಿಯನ್ನು ಬಂಧಿಸಲಾಗಿತ್ತು. ಇದೀಗ ವಂಚನೆ ಸಂಬಂಧ ಇನ್ನೂ ಮೂರು ಮಂದಿಯ ಬಂಧನವಾಗಿದ್ದು, ಒಟ್ಟು ಆರು ಮಂದಿಯ ಬಂಧನವಾದಂತಾಗಿದೆ. ಜಿಎಸ್‌ಟಿ ವಂಚನೆ, ಕಮಿಷನ್‌ಗಾಗಿ ನಕಲಿ ಬಿಲ್‌, ನಕಲಿ ಇನ್‌ವಾಯ್ಸ ಸಲ್ಲಿಸಿ ವಂಚಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ನಕಲಿ ಇನ್‌ವಾಯ್ಸ ಪೂರೈಸುವವರು ಮಾತ್ರವಲ್ಲದೇ ಅದನ್ನು ಪಡೆದು ಹುಟ್ಟುವಳಿ ತೆರಿಗೆಯ ಪ್ರಯೋಜನ ಪಡೆದು ವಂಚಿಸುವ ಡೀಲರ್‌ಗಳ ವಿರುದ್ಧವೂ ಕ್ರಮ ಜರುಗಿಸಲಾಗುವುದು. ಹಾಗಾಗಿ ಅಕ್ರಮ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳದೆ ನಿಯಮಾನುಸಾರ ಜಿಟಿಎಸ್‌ ಪಾವತಿಸಬೇಕು. ತೆರಿಗೆ ವಂಚಿಸಿದರೆ ಅದು ಬಯಲಾಗಲಿದ್ದು, ಬಡ್ಡಿ ಸಹಿತ ತೆರಿಗೆ ವಸೂಲಿ ಮಾಡಲಾಗುವುದು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next