ಬೆಂಗಳೂರು: ಸಾಮಾಜಿಕ ಸಮಸ್ಯೆಗಳ ನೈಜ ಕಾಳಜಿ ಇಲ್ಲದ ಸಾರ್ವಜಿಕ ಹಿತಾಸಕ್ತಿ ಅರ್ಜಿಗಳ ಸಲ್ಲಿಕೆಯಿಂದ ಹೈಕೋರ್ಟ್‌ನ ಅಮೂಲ್ಯ ಸಮಯ ಹಾಳಾಗುತ್ತಿದೆ ಎಂದು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ನೇತೃತ್ವದ ವಿಭಾಗೀಯ ಪೀಠ ಅಸಮಾಧಾನವ್ಯಕ್ತಪಡಿಸಿದೆ.
ಇತ್ತೀಚೆಗೆ ಅರ್ಜಿಗಳ ವಿಚಾರಣೆ ವೇಳೆಯೇ ಹಲವು ಬಾರಿ ಅನಗತ್ಯ ಪಿಐಎಲ್‌ಗಳನ್ನು ಸಲ್ಲಿಸಿದ ಅರ್ಜಿದಾರರಿಗೆ ಹಲವು ಬಾರಿ ತರಾಟೆ ತೆಗೆದುಕೊಂಡಿದ್ದ ನ್ಯಾಯ ಪೀಠ, ಪಿಐಎಲ್‌ಗಳು ಸಮಾಜದ ದುರ್ಬಲ ವರ್ಗಕ್ಕೆ ನೆರವು, ಸಮಾಜವನ್ನು ಕಾಡುತ್ತಿರುವ ನೈಜ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವಂತಿರಬೇಕು ಎಂದೂ ಸಲಹೆ ನೀಡಿದೆ.
ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರ ಹುದ್ದೆ ಅಸಂವಿಧಾನಿಕ ಎಂದು ಘೋಷಿಸುವಂತೆ ಪಿಐಎಲ್ ಪ್ರೊ.ಶೇಖರ್ ಅಯ್ಯರ್ ಎಂಬುವವರಿಗೆ 10 ಸಾವಿರ ರೂ. ದಂಡ ವಿಧಿಸಿದ್ದ ಮುಖ್ಯ ನ್ಯಾಯಮೂರ್ತಿಗಳ ಪೀಠ, ಇದೀಗ ಮತ್ತೂಂದು ಪ್ರಕರಣದಲ್ಲಿ ಕೋರ್ಟ್ ಸಮಯ ವ್ಯರ್ಥ ಮಾಡಿದ ಶಿಕ್ಷಕನಿಗೆ 20 ಸಾವಿರ ರೂ. ದಂಡವಿಧಿಸುವ ಮೂಲಕ ಬಿಸಿಮುಟ್ಟಿಸಿದೆ.
ಸಿಖ್ ಧರ್ಮಕ್ಕೆ ಸಂಬಧಿಸಿದ ವಿಚಾರಗಳನ್ನು ಶಾಲಾ ಪಠ್ಯಗಳಲ್ಲಿ ಅಳವಡಿಸುವಂತೆ ರಾಜ್ಯ ಶಿಕ್ಷಣ ಇಲಾಖೆಗೆ ನಿರ್ದೇಶಿಸುವಂತೆ ಕೋರಿ ವಿಜಯಪುರ ಜಿಲ್ಲೆ ಇಂಡಿ ಮೂಲದ ಪುಂಡಿತ್‌ರಾವ್ ಧರೇಣ್ಣವರ್ ಎಂಬುವವರು ಸಲ್ಲಿಸಿದ್ದ ಪಿಐಎಲ್ ವಜಾಗೊಳಿಸಿದ ವಿಭಾಗೀಯ ಪೀಠ, ಅವರಿಗೆ 20 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಅರ್ಜಿದಾರರು ಮುಂದಿನ 1 ತಿಂಗಳಲ್ಲಿ ದಂಡದ ಮೊತ್ತವನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ಬಳಿ ಪಾವತಿಸಬೇಕು. ಒಂದು ವೇಳೆ ಅರ್ಜಿದಾರ ದಂಡ ಪಾವತಿಸದಿದ್ದರೆ ಜಿಲ್ಲಾಧಿಕಾರಿಗಳು ಆತನ ಬಳಿ ದಂಡ ವಸೂಲಿ ಮಾಡಬೇಕು. ಬಳಿಕ ಆ ಮೊತ್ತವನ್ನು ರಾಜ್ಯ ಕಾನೂನು ಸೇವಾಪ್ರಾಧಿಕಾರಕ್ಕೆ ನೀಡಬೇಕು ಎಂದು ಆದೇಶಿಸಿದೆ.
ಚಂಡೀಗಡ ಕಾಲೇಜೊಂದರಲ್ಲಿ ಪ್ರೊಫೆಸರ್ ಎಂದು ಅರ್ಜಿಯಲ್ಲಿ ಹೇಳಿಕೊಂಡಿರುವ ಪುಂಡಿತ್‌ರಾವ್ ಧರೇಣ್ಣವರ್, ಸಿಖ್ ಧರ್ಮದ ಇತಿಹಾಸ, ಸಂಸ್ಕೃತಿ ಸಾರುವಂತಹ ವಿಚಾರಗಳನ್ನು ರಾಜ್ಯ ಪ್ರಾಥಮಿಕ ಶಾಲಾ ಪಠ್ಯಗಳಲ್ಲಿ ಅಳವಡಿಸಬೇಕು.
ಬಹುಮುಖ್ಯವಾಗಿ ರಾಜ್ಯದವರೇ ಆದ ಬಾಹಿಸಾಹೇಬ್ ಸಿಂಗ್, ಮೈ ಭಾಗೋ ವೋಸೆ ಅವರ ಜೀವನ ವಿಚಾರಳನ್ನು ಒಳಗೊಂಡಿರಬೇಕು.ಬೀದರ್‌ನಲ್ಲಿ ಸಿಖ್ ವಿಶ್ವವಿದ್ಯಾಲಯ ಸ್ಥಾಪಿಸಿ ಬಾಹೀ ಸಾಹೀಬ್ ಸಿಂಗ್ ಹೆಸರಿನಲ್ಲಿರಬೇಕು. ಪಂಜಾಬಿ ಸಾಹಿತ್ಯ ಅಕಾಡೆಮಿ ಸ್ಥಾಪಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು.