ದಾವಣಗೆರೆ: ಆಶ್ರಯ ಮನೆಗಳಿಗೆ ವರ್ಷಕ್ಕೆ 2 ಸಾವಿರ ರೂಪಾಯಿ ನೀರಿನ ಕಂದಾಯ ನಿಗದಿಪಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಮಾನವ ಹಕ್ಕುಗಳ ಹೋರಾಟ ಸಮಿತಿ ನೇತೃತ್ವದಲ್ಲಿ ಎಸ್.ಒ.ಜಿ ಕಾಲೋನಿ ನಿವಾಸಿಗಳು ಪ್ರತಿಭಟನೆ ನಡೆಸಿದರು.
ಮಹಾನಗರ ಪಾಲಿಕೆಯಿಂದ ವರ್ಷಕ್ಕೆ 2,400 ರೂಪಾಯಿ ನೀರಿನ ಕಂದಾಯ ನಿಗದಿಪಡಿಸಲಾಗಿದೆ. ಅಲ್ಲದೆ ಇಲ್ಲಿಯವರೆಗೆ ಬಾಕಿ ಇರುವ ನೀರಿನ ಕಂದಾಯ ಶುಲ್ಕ ಕಟ್ಟಲೇಬೇಕು. ಇಲ್ಲದಿದ್ದರೆ ನೀರಿನ ಸಂಪರ್ಕ ಕಡಿತಗೊಳಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕುತ್ತಿರುವುದು ಅತ್ಯಂತ ಖಂಡನೀಯ ಎಂದು ಪ್ರತಿಭಟನಾಕಾರರು ದೂರಿದರು.
ಎಸ್.ಒ.ಜಿ. ಕಾಲೋನಿಯಲ್ಲಿ ಅನೇಕರು ಬಡತನದಿಂದ ಜೀವನ ನಡೆಸುತ್ತಿದ್ದಾರೆ. ಆಟೋ ಚಾಲಕರು, ಕಟ್ಟಡ ಕಾರ್ಮಿಕರು, ನಾಟಕ ಕಲಾವಿದರು, ತರಕಾರಿ ವ್ಯಾಪಾರಿಗಳು, ಅಂಗನವಾಡಿ ಕಾರ್ಯಕರ್ತರು, ಚಿತ್ರಮಂದಿರಗಳಲ್ಲಿ ಹಾಗೂ ಹಮಾಲಿ ಕೆಲಸ ಮಾಡುವವರು ಇದ್ದಾರೆ ಇಂತಹ ಸಂದರ್ಭದಲ್ಲಿ ನೀರಿನ ಕಂದಾಯ ಕಟ್ಟುವುದಕ್ಕೆ ತುಂಬಾ ಕಷ್ಟಕರವಾಗುತ್ತದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
2014ರಿಂದ ಈವರೆಗೆ 15 ದಿನಕ್ಕೆ ಒಮ್ಮೆ ಹಾಗೂ 1 ತಿಂಗಳಿಗೆ ಒಂದು ಸಾರಿ ಕುಡಿಯುವ ನೀರು ಬಿಡುತ್ತಾರೆ. ಈ ವರ್ಷವಂತೂ ವಾರಕ್ಕೊಮ್ಮೆ ಕೇವಲ 20 ನಿಮಿಷ ಮಾತ್ರ ಬಿಡುತ್ತಾರೆ. ಈ ವರ್ಷದಿಂದ ಮಾತ್ರ ನೀರಿನ ಕಂದಾಯ ಕಟ್ಟುವುದಕ್ಕೆ ಬದ್ಧರಾಗುತ್ತೇವೆ. ಅದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಕರ್ನಾಟಕ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ. ಕಲ್ಲೇಶಪ್ಪ, ಬಿ. ದುಗ್ಗಪ್ಪ, ಅಶೋಕ, ಪಾಂಡು, ವಿಠ್ಠಲ್, ನಾರಾಯಣಗೌಡ್ರು, ಸಂತೋಷ್, ಸಿದ್ದೇಶ್, ಭರಮಪ್ಪ, ರುದ್ರೇಶಿ, ಶರಣಪ್ಪ, ನಾಗಣ್ಣ, ರಮೇಶ್, ಲಿಂಗರಾಜ್, ಶಾಂತಮ್ಮ, ಮಮತಮ್ಮ, ಮಂಜಮ್ಮ, ಇಂದ್ರಮ್ಮ, ಮಲ್ಲಣ್ಣ, ಮುಜಿಬ್‌ಖಾನ್ ಇದ್ದರು.