ಹೈದರಾಬಾದ್:2019ರ ಲೋಕಸಭಾ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರ 2000 ಸಾವಿರ ರೂಪಾಯಿ ಮುಖಬೆಲೆಯ ನೋಟನ್ನು ಕೇಂದ್ರ ಸರ್ಕಾರ ನಿಷೇಧಿಸುತ್ತದೆಯೇ? ಅರೇ ಇದೇನಪ್ಪಾ ಕತೆ ಅಂತ ಹುಬ್ಬೇರಿಸೋ ಮೊದಲು 500, 1000 ರೂ. ಮುಖಬೆಲೆ ನೋಟನ್ನು ನಿಷೇಧಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಐಡಿಯಾದ ಹಿಂದಿದ್ದ ಅನಿಲ್ ಬೊಕಿಲ್ ಅವರ ಅಭಿಪ್ರಾಯ ಓದಿ…
ಬಹುಶಃ 2000 ಸಾವಿರ ರೂ. ನೋಟನ್ನು ನಿಷೇಧಿಸುವ ಸಾಧ್ಯತೆ ಇದೆ. ಹಾಗಂತ ಅದು ತರಾತುರಿಯಲ್ಲಿ ಅಲ್ಲ, ಆದರೂ ಆ ದಿನ ಹೆಚ್ಚು ದೂರವಿಲ್ಲ ಎಂದು ಬೊಕಿಲ್ ಹೇಳಿದ್ದಾರೆ!
ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳು, 1000 ಸಾವಿರ ರೂಪಾಯಿ ಮುಖಬೆಲೆಯ ನೋಟನ್ನು ಕೇಂದ್ರ ಸರ್ಕಾರ ನಿಷೇಧಿಸಿ, 2000 ಸಾವಿರ ರೂ. ಮುಖಬೆಲೆಯ ನೋಟನ್ನು ಚಲಾವಣೆಗೆ ತಂದಿರುವುದು ಯಾವ ರೀತಿ ಯಶಸ್ವಿಯಾಗಿದೆ ಎಂದು ಬೊಕಿಲ್ ಅವರನ್ನು ಪ್ರಶ್ನಿಸಿದ್ದರು.
ದೇಶದಲ್ಲಿ ಅತೀ ಹೆಚ್ಚು ಚಲಾವಣೆಯಾಗುತ್ತಿದ್ದ 500, 1000 ರೂ. ಮುಖಬೆಲೆಯ ನೋಟನ್ನು ನಿಷೇಧಿಸಿದ ಬಳಿಕ ಅದರಿಂದ ಉಂಟಾಗುವ ತೊಂದರೆ ತಪ್ಪಿಸುವ ನಿಟ್ಟಿನಲ್ಲಿ 2000 ರೂಪಾಯಿ ಮುಖಬೆಲೆಯ ಹೊಸ ನೋಟನ್ನು ಚಲಾವಣೆಗೆ ತರಲಾಗಿದೆ ಎಂಬುದಾಗಿ ನಾನು ನಂಬುತ್ತೇನೆ. ಅಲ್ಲದೇ ಮುಂದಿನ ಸಾರ್ವತ್ರಿಕ ಚುನಾವಣೆಗೂ ಮೊದಲು 2000 ರೂ. ಮುಖಬೆಲೆಯ ನೋಟನ್ನು ಕೇಂದ್ರ ನಿಷೇಧಿಸುವ ಸಾಧ್ಯತೆ ಇದೆ ಎಂದು ಬೊಕಿಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ಭಾರತದಲ್ಲಿ ಕ್ಯಾಶ್ ಲೆಸ್ ಸಕ್ಸಸ್ ಆಗುತ್ತಾ?
ನಗದುರಹಿತ ಆರ್ಥಿಕ ವಹಿವಾಟಿನ ನಿಮ್ಮ(ಬೊಕಿಲ್) ಚಿಂತನೆ ದೇಶದಲ್ಲಿ ತುಂಬಾ ಪ್ರಚಾರ ಪಡೆದಿರುವುದು ಸತ್ಯ. ಆದರೆ ಭಾರತದ ಬ್ಯಾಂಕಿಂಗ್ ವ್ಯವಸ್ಥೆ ತುಂಬಾ ಆಧುನಿಕವಾಗಿಲ್ಲ. ಅಲ್ಲದೇ ದೇಶದಲ್ಲಿ ಅನಕ್ಷರಸ್ಥತೆ, ಬಡತನ ರೇಖೆಗಿಂತ ಕೆಳಗಿರುವವರು ಇದ್ದಾರೆ ಎಂಬುದು ನಿಮ್ಮ ಗಮನದಲ್ಲಿದ್ದರೆ, ಕ್ಯಾಶ್ ಲೆಸ್ ವ್ಯವಹಾರ ಎಷ್ಟರ ಮಟ್ಟಿಗೆ ಯಶಸ್ವಿ ಆಗಲು ಸಾಧ್ಯ ಎಂಬುದಾಗಿ ಮತ್ತೊಬ್ಬರು ಬೊಕಿಲ್ ಅವರನ್ನು ಪ್ರಶ್ನಿಸಿದ್ದರು.
ಅದಕ್ಕೆ ಉತ್ತರ ನೀಡಿದ ಬೊಕಿಲ್, ಬಡತನ ರೇಖೆಗಿಂತ ಕೆಳಗಿರುವ ಜನರು ದುಬಾರಿ ಖರ್ಚು, ವೆಚ್ಚ ಮಾಡೋದಿಲ್ಲ ಎಂಬುದಾಗಿ ಭಾವಿಸುತ್ತೇನೆ. 50, 100 ರೂಪಾಯಿ ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿ ಇರುವುದರಿಂದ ವ್ಯವಹಾರಕ್ಕೆ ಅದು ಸಾಕಾಗುತ್ತದೆ ಎಂದು ಹೇಳಿದರು.