Advertisement

ಮಲ್ಟಿಪ್ಲೆಕ್ಸ್‌ಗಳಲ್ಲಿ  ಗರಿಷ್ಠ 200 ರೂ. ದರ ನಿಗದಿ

09:42 AM May 03, 2017 | Team Udayavani |

ಗೋಲ್ಡ್‌ ಕ್ಲಾಸ್‌, ಐಮ್ಯಾಕ್ಸ್‌, 4ಡಿ ಎಕ್ಸ್‌ಗಳಿಗೆ ಅನ್ವಯಿಸಲ್ಲ
ಬೆಂಗಳೂರು:
ರಾಜ್ಯದ ಮಲ್ಟಿಫ್ಲೆಕ್ಸ್‌ಗಳೂ ಸೇರಿ ಎಲ್ಲ ಚಿತ್ರಮಂದಿರಗಳಲ್ಲಿ ಗರಿಷ್ಠ  200 ರೂ. ಟಿಕೆಟ್‌ ದರ ನಿಗದಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 2017-18 ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಿರುವಂತೆ ಸರ್ಕಾರ ಈ ಆದೇಶ ಹೊರಡಿಸಿದ್ದು, ಮಂಗಳವಾರದಿಂದಲೇ ಜಾರಿಗೆ ಬಂದಿದೆ. ಮಲ್ಟಿಫ್ಲೆಕ್ಸ್‌ ಮತ್ತು ಏಕ ತೆರೆ ಚಿತ್ರಮಂದಿರಗಳಿಗೆ ಈ ಆದೇಶ ಅನ್ವಯವಾಗಲಿದ್ದು, ತೆರಿಗೆ ಹೊರತುಪಡಿಸಿ ಗರಿಷ್ಠ ದರ 200 ರೂ.ನಿಗದಿ ಪಡಿಸಲಾಗಿದೆ. ಈ ಏಕರೂಪ ದರ ರಾಜ್ಯದಲ್ಲಿ ಪ್ರದರ್ಶನಗೊಳ್ಳುವ ಎಲ್ಲ ಭಾಷೆಯ ಚಿತ್ರಗಳಿಗೂ ಅನ್ವಯವಾಗಲಿದೆ.

Advertisement

ಆದರೆ, ಮಲ್ಟಿಫ್ಲೆಕ್ಸ್‌ಗಳಲ್ಲಿನ ಗೋಲ್ಡ್‌ಕ್ಲಾಸ್‌ ಸ್ಕ್ರೀನ್‌ಗಳು, ಐ-ಮ್ಯಾಕ್ಸ್‌ ಮತ್ತು 4ಡಿಎಕ್ಸ್‌ ಚಿತ್ರಮಂದಿರಗಳನ್ನೂ ಏಕದರ ನೀತಿಯಿಂದ ಹೊರಗಿಡಲಾಗಿದೆ. ಮಲ್ಟಿಫ್ಲೆಕ್ಸ್‌ಗಳಲ್ಲಿ ಒಂದು ಸ್ಕ್ರೀನ್‌ನ ಒಟ್ಟು ಸೀಟ್‌ ಗಳಲ್ಲಿ ಗೋಲ್ಡ್‌ಕ್ಲಾಸ್‌ ಸೀಟ್‌ಗಳು ಶೇ.10 ರಷ್ಟು ಮೀರದಂತೆ ಇರಬೇಕೆಂದು ಆದೇಶದಲ್ಲಿ ಸೂಚಿಸಲಾಗಿದೆ.

ರಾಜ್ಯ ಸರ್ಕಾರ ಬಜೆಟ್‌ ಘೋಷಣೆ ಮಾಡಿ  ತಿಂಗಳು ಕಳೆದರೂ, ಮಲ್ಟಿಫ್ಲೆಕ್ಸ್‌ಗಳಲ್ಲಿ ಏಕ ರೂಪ ದರ ನಿಗದಿ ಪಡಿಸುವ ಕುರಿತು ಯಾವ ಇಲಾಖೆ ಆದೇಶ ಮಾಡಬೇಕೆಂಬ ಗೊಂದಲದ ಬಗ್ಗೆ  ಸೋಮವಾರ “ಉದಯವಾಣಿ’ ವರದಿ ಮಾಡಿತ್ತು. ಈ ಬಗ್ಗೆ ತಕ್ಷಣ ಎಚ್ಚೆತ್ತುಕೊಂಡಿರುವ ಸರ್ಕಾರ ಕನ್ನಡ ಸಂಸ್ಕೃತಿ ಮತ್ತು ವಾರ್ತಾ ಇಲಾಖೆ ಮೂಲಕ ಆದೇಶ ಹೊರಡಿಸಿದೆ.

ಸೋಮವಾರವಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾಹುಬಲಿ-2 ಚಿತ್ರವನ್ನು ಓರಾಯನ್‌ ಮಾಲ್‌ನಲ್ಲಿ ದುಬಾರಿ ದರ ನೀಡಿ  ವೀಕ್ಷಿಸಿದ್ದರು. ಇದೂ ಸಹ ಚರ್ಚೆಗೆ ಗ್ರಾಸವಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಬಜೆಟ್‌ನಲ್ಲಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಟಿಕೆಟ್‌ನ ಗರಿಷ್ಠ ದರ 200 ರೂ. ನಿಗದಿ ಕುರಿತು ಘೋಷಿಸಿದ್ದರು.

ಆದೇಶದಲ್ಲಿ ಏನಿದೆ?
ರಾಜ್ಯದಲ್ಲಿನ ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳ ಒಂದು ಪರದೆಯಲ್ಲಿ ಮಧ್ಯಾನ್ನ 1.30 ರಿಂದ ಸಂಜೆ 7.30 ರವರೆಗಿನ ಪ್ರಮುಖ ಅವಧಿಯಲ್ಲಿ ಕನ್ನಡ ಹಾಗೂ ಪ್ರಾದೇಶಿಕ ಭಾಷೆಗಳ ಚಲನಚಿತ್ರಗಳ ಪ್ರದರ್ಶನ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ. ಕನ್ನಡ ಹೊರತುಪಡಿಸಿ ಪ್ರಾದೇಶಿಕ ಭಾಷೆ ಎಂದರೆ ತುಳು, ಕೊಂಕಣಿ, ಕೊಡವ ಭಾಷೆಗಳ ಚಿತ್ರಗಳು.

Advertisement

ಇದು ಕನ್ನಡಚಿತ್ರರಂಗದ ಬಹಳ ದಿನದ ಬೇಡಿಕೆಯಾಗಿದ್ದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕರ್ನಾಟಕ ಚಲನಚಿತ್ರ ಅಕಾಡೆಮಿ ಮತ್ತು ಕನ್ನಡ ಚಿತ್ರರಂಗ ಈ ಕುರಿತು ಮನವಿ ಮಾಡಿದ್ದವು. ನಮ್ಮ ಹೋರಾಟಕ್ಕೆ ಈಗ ಜಯ ಸಿಕ್ಕಿದೆ. ಇದೊಂದು ದೊಡ್ಡ ಹೆಜ್ಜೆ. ಇಂಥದ್ದೊಂದು ಮಾಡಿಕೊಟ್ಟ ಮುಖ್ಯಮಂತ್ರಿಗಳಿಗೆ ಧನ್ಯವಾದಗಳು.
– ಸಾ.ರಾ. ಗೋವಿಂದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next