ಅರಸೀಕೆರೆ: ಸತತ ಮಳೆಯ ಅಭಾವ, ವಿವಿಧ ರೋಗ ಬಾಧೆಗಳಿಂದ ತೆಂಗಿನಮರ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರಕ್ಕೆ ಒತ್ತಾಯಿಸಿ ತಾವು ರೈತರ ಜೊತೆಗೆ ನಡೆಸಿದ ಅಹೋರಾತ್ರಿ ಹೋರಾಟಕ್ಕೆ ನಡೆಸಿದ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಎಚ್.ಡಿ. ದೇವೇಗೌಡರು ಮತ್ತು ಎಚ್.ಡಿ.ರೇವಣ್ಣ ಅವರು ತಮಗೆ ನೀಡಿದ ಭರವಸೆಯಂತೆ ತೆಂಗು ಬೆಳೆಗಾರರ ಪರಿಹಾರಕ್ಕೆ ರಾಜ್ಯ ಸರ್ಕಾರ 200 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಿರುವುದಕ್ಕೆ ತೆಂಗು ಬೆಳೆಗಾರರ ಪರವಾಗಿ ಅಭಿನಂದಿಸುತ್ತೇನೆ ಎಂದು ಶಾಸಕ ಕೆ ಎಂ ಶಿವಲಿಂಗೇಗೌಡ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿರುವ ಶಾಸಕರ ಕಚೇರಿಯಲ್ಲಿ ಸುದ್ದಿಗಾರ ಜೊತೆ ಗುರುವಾರ ಮಾತನಾಡಿದ ಅವರು ಸತತ ಬರಗಾಲ ಪೀಡಿತ ಪ್ರದೇಶವಾದ ತಾಲೂಕಿನಲ್ಲಿ ಮಳೆ ಅಭಾವ ಹಾಗೂ ವಿವಿಧ ರೋಗ ಬಾಧೆಗಳಿಗೆ ತುತ್ತಾಗಿ ತೆಂಗಿನ ಮರಗಳು ನಾಶವಾಗಿದೆ.
ರಾಜ್ಯದ ತೆಂಗು ಬೆಳೆಗಾರರ ನೆರವಿಗೆ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ 200 ಕೋಟಿ ರೂ. ಸಹಾಯ ಧನವನ್ನು ಈಗಾಗಲೇ ಬಿಡುಗಡೆ ಮಾಡಿದ್ದು ಈ ಯೋಜನೆಯಡಿ ತಾಲೂಕಿಗೆ 32 ಕೋಟಿ ರೂ. ಅನುದಾನ ಸಂದಾಯವಾಗಿದೆ. ಈ ಪೈಕಿ 40,021 ಫಲಾನುಭವಿಗಳಿಗೆ ತೆಂಗಿನ ಮರ ಒಂದಕ್ಕೆ 400 ರೂ. ನಂತೆ ನೇರವಾಗಿ ಆರ್‌ಬಿಐ ನಿಂದ ರೈತನ ಖಾತೆಗೆ ಹಣ ಜಮಾ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ತೋಟಗಾರಿಕಾ ಬೆಳೆಗೆ ಪ್ರೋತ್ಸಾಹ: ಉದ್ಯೋಗ ಖಾತ್ರಿ ಯೋಜನೆಯ ಸಹ ಭಾಗಿತ್ವದಲ್ಲಿ ತೆಂಗು ಬೆಳೆ ಅಥವಾ ಬಹು ವಾರ್ಷಿಕ ಬೆಳೆಗಳಾದ ಸಪೋಟ, ದಾಳಿಂಬೆ ಗೋಡಂಬಿ ಮತ್ತಿತರ ತೋಟಗಾರಿಕೆ ಬೆಳೆಗಳನ್ನು ರೈತರು ಬೆಳೆಯಲು ಎಕರೆಗೆ 17 ಸಾವಿರ ಪ್ರೋತ್ಸಾಹ ಧನ ನೀಡುವ ಯೋಜನೆಗೆ ಈಗಾಗಲೇ ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಾಲೂಕಿನಾದ್ಯಂತ ಸರ್ವೇ ಕಾರ್ಯ ಮುಗಿಸಿದ್ದು ಯೋಜನೆ ಅನುಷ್ಠಾನಕ್ಕೆ ತಾಲೂಕಿಗೆ 65 ಕೋಟಿ ರೂ. ಅನುದಾನ ಕೋರಿದ್ದಾರೆ, ಈ ಸಂಬಂದ ಮಂತ್ರಿ ಹಾಗೂ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿದ್ದು, ಸದ್ಯದಲ್ಲೇ 65 ಕೋಟಿ ಅನುದಾನ ಬಿಡುಗಡೆಯಾಗಲಿದೆ ಎಂದರು.
ಹೆಸರು ನೋಂದಾಯಿಸಿ: ತೆಂಗಿನ ಮರ ಕಳೆದುಕೊಂಡಿರುವ ತೆಂಗು ಬೆಳೆಗಾರರು ಹಾಗೂ ಪುನಶ್ಚೇತನ ಯೋಜನೆಯಡಿ ಬಹುವಾರ್ಷಿಕ ಬೆಳೆ ಬೆಳೆಯುವ ಆಸಕ್ತಿ ಹೊಂದಿರುವ ರೈತರು ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಸೂಕ್ತ ದಾಖಲಾತಿಗಳನ್ನು ನೀಡುವ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳುವಂತೆ ಹೇಳಿದರು.
ತಾಲೂಕಿನ ಯಾವ ಒಬ್ಬ ತೆಂಗು ಬೆಳೆಗಾರರಿಗೂ ಅನ್ಯಾಯವಾಗಲು ತಾವು ಬಿಡುವುದಿಲ್ಲ ಇನ್ನೂ ಎಷ್ಟೇ ಅನುದಾನ ಬೇಕಾದರು ಸರ್ಕಾರದಿಂದ ಮಂಜೂರು ಮಾಡಿಸಿಕೊಂಡು ತಂದು ತಾಲೂಕಿನ ರೈತರ ಋಣ ತೀರಿಸುತ್ತೇನೆ ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹಾರನಹಳ್ಳಿ ಶಿವಮೂರ್ತಿ ಜೆಡಿಎಸ್ ಮುಖಂಡರಾದ ಮೈಲೇನಹಳ್ಳಿ ಜಗದೀಶ್, ಲಿಂಗರಾಜು, ರಂಗರಾಜ್, ಚಿಕ್ಕಬಾಣಾವಾರ ವೆಂಕಟೇಶ್ ಉಪಸ್ಥಿತರಿದ್ದರು.