Advertisement

ಕನ್ನಡ ವಿವಿ ಅಭಿವೃದ್ಧಿಗೆ 20 ಕೋಟಿ ರೂ.

05:06 PM Apr 17, 2022 | Team Udayavani |

ಹೊಸಪೇಟೆ: ಸಾಂಪ್ರದಾಯಿಕ ವಿವಿಗಳಿಗಿಂತ ಭಿನ್ನವಾಗಿರುವ ಕನ್ನಡ ಭಾಷೆ ಸಮೃದ್ಧಿಗೆ ಶ್ರಮಿಸುತ್ತಿರುವ ಕನ್ನಡ ವಿಶ್ವವಿದ್ಯಾಲಯಕ್ಕೆ ಅಗತ್ಯ ಮೂಲಸೌಕರ್ಯ ಹಾಗೂ ಇತರೆ ಚಟುವಟಿಕೆಗಳಿಗಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಮೂಲಕ ಮುಖ್ಯಮಂತ್ರಿ ವಿವೇಚನಾ ಅನುದಾನದಡಿ 20 ಕೋಟಿ ರೂ. ಗಳನ್ನು ತಕ್ಷಣ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಹಂಪಿ ಬಳಿಯ ಕನ್ನಡ ವಿವಿಯಲ್ಲಿ ಶನಿವಾರ ನೂತನ ಐದು ಕಟ್ಟಡಗಳ ಉದ್ಘಾಟನೆ, 128 ಪುಸ್ತಕಗಳ ಬಿಡುಗಡೆ ಹಾಗೂ ಸಂಚಾರಿ ವಿವಿ ಪುಸ್ತಕ ಮಾರಾಟ ವಾಹನ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ವಿವಿಗೆ ಈಗ ಒದಗಿಸಲಾಗುವ ಅನುದಾನವನ್ನು ವಿದ್ಯಾರ್ಥಿಗಳ ಶಿಷ್ಯವೇತನ, ಹೊರಗುತ್ತಿಗೆ ಸಿಬ್ಬಂದಿ ಬಾಕಿ ವೇತನ ಪಾವತಿ ಹಾಗೂ ತುರ್ತು ಅಗತ್ಯ ಕೆಲಸಗಳಿಗೆ ಬಳಸಿಕೊಳ್ಳುವಂತೆ ನಿರ್ದೇಶನ ನೀಡಿದರು.

ಕನ್ನಡ ವಿಶ್ವವಿದ್ಯಾಲಯಕ್ಕೆ ಅಗತ್ಯ ಮೂಲಸೌಕರ್ಯ ಹಾಗೂ ಇನ್ನಿತರ ಚಟುವಟಿಕೆಗಾಗಿ ಕುಲಪತಿ ಡಾ|ಸ.ಚಿ.ರಮೇಶ ಅವರು ತುರ್ತಾಗಿ 80 ಕೋಟಿ ರೂ.ಗಳನ್ನು ಒದಗಿಸುವಂತೆ ಬೇಡಿಕೆ ಇಟ್ಟಿದ್ದು, ಈ ಅನುದಾನವನ್ನು ಹಂತಹಂತವಾಗಿ ಜಿಲ್ಲಾ ಖನಿಜ ನಿಧಿ ಮತ್ತು ಸರಕಾರದ ಅನುದಾನಡಿ ಬಿಡುಗಡೆ ಮಾಡಲಾಗುವುದು. ತಲಾ ಮೂರು ಜಿಲ್ಲೆಗಳನ್ನುಕಾರ್ಯಕ್ಷೇತ್ರವಾಗಿಸಿ ತಲಾ ಒಂದೊಂದು ವಿಸ್ತರಣಾ ಕೇಂದ್ರಗಳು ಕನ್ನಡ ಪಸರಿಸುವ, ಕನ್ನಡದ ವಿವಿಧ ಆಯಾಮಗಳಲ್ಲಿ ಸಂಶೋಧನೆ ಮತ್ತು ಅಧ್ಯಯನ ನಡೆಸುವ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.

ಡಾ|ಪ್ರಕಾಶ ಅಧ್ಯಯನ ಪೀಠ

ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆಗೆ ಶ್ರಮಿಸಿದ ಹಾಗೂ ಕನ್ನಡ-ಕನ್ನಡ ಸಂಸ್ಕೃತಿಗೆ ಸದಾ ದುಡಿಯುತ್ತಿದ್ದ ಮಾಜಿ ಉಪಮುಖ್ಯಮಂತ್ರಿ ದಿ| ಎಂ.ಪಿ.ಪ್ರಕಾಶ ಅವರ ಹೆಸರಿನಲ್ಲಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಸ್ಥಾಪಿಸಲಾಗುವುದು ಎಂದು ಬೊಮ್ಮಾಯಿ ಅವರು ಘೋಷಿಸಿದರು.

Advertisement

ಈ ಅಧ್ಯಯನ ಪೀಠ ಹೇಗಿರಬೇಕು ಮತ್ತು ಯಾವ ರೀತಿ ಕಾರ್ಯನಿರ್ವಹಿಸಬೇಕು ಎಂಬುದರ ಯೋಜನಾ ರೂಪುರೇಷೆಗಳನ್ನು ಸಿದ್ಧಪಡಿಸುವಂತೆ ಕುಲಪತಿಗಳಿಗೆ ಸೂಚಿಸಿದರು. ವಿಶ್ವ ಭೂಪಟದಲ್ಲಿ ಕನ್ನಡ ಎಲ್ಲಿರಬೇಕು. ಕನ್ನಡಿಗರು ಎಲ್ಲಿ ನಿಲ್ಲಬೇಕು ಅನ್ನುವುದನ್ನು ನಿರ್ಧರಿಸುವ ಕೆಲಸ ಕನ್ನಡ ವಿವಿ ಮಾಡಬೇಕು. ಪದವಿಗಾಗಿ ಕಟ್‌ ಆ್ಯಂಡ್‌ ಪೇಸ್ಟ್‌ ಮಾಡುವ ಕೆಲಸ ಬೇಡ ಎಂದು ಅವರು ಹೇಳಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ, ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್. ಅಶ್ವಥ್‌ ನಾರಾಯಣ ಅವರು ಮಾತನಾಡಿದರು. ಸಂಚಾರಿ ಪುಸ್ತಕ ಮಾರಾಟ ವಾಹನವನ್ನು ವಿವಿಗೆ ದೇಣಿಗೆಯಾಗಿ ನೀಡಿದ ಬಲ್ಡೋಟ ಗ್ರೂಪ್‌ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ|ನರೇಂದ್ರಕುಮಾರ್‌ ಬಲ್ಡೋಟ ಅವರನ್ನು ಮುಖ್ಯಮಂತ್ರಿಗಳು ಸನ್ಮಾನಿಸಿ ಗೌರವಿಸಿದರು.

ಸಾರಿಗೆ ಸಚಿವ ಬಿ.ಶ್ರೀರಾಮುಲು, ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕರಾದ ಸೋಮಶೇಖರ್‌ ರೆಡ್ಡಿ, ವೈ.ಎಂ.ಸತೀಶ್‌, ಕುಲಪತಿ ಡಾ| ಸ.ಚಿ. ರಮೇಶ, ವಿಜಯನಗರ ಜಿಲ್ಲಾ ಧಿಕಾರಿ ಅನಿರುದ್ಧ್ ಶ್ರವಣ್‌, ಎಸ್ಪಿ ಡಾ| ಅರುಣ್‌ ಎಸ್.ಕೆ, ಕುಲಸಚಿವ ಡಾ| ಎ. ಸುಬ್ಬಣ್ಣ ರೈ, ಪ್ರಸಾರಂಗ ವಿಭಾಗದ ನಿರ್ದೇಶಕಿ ಡಾ| ಶೈಲಜಾ ಎಂ. ಹಿರೇಮಠ, ವಿವಿಯ ತಾಂತ್ರಿಕ ವಿಭಾಗದ ಮುಖ್ಯಸ್ಥ ಜೆ.ಎಸ್. ನಂಜಯ್ಯನವರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next