ಕಾಸರಗೋಡು: ಕೇರಳದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್, ಬೀಡಿ ಸೇವನೆ ನಿಷೇಧಿಸಿದ ಹಿನ್ನೆಲೆಯಲ್ಲಿ ಕಳೆದ ವರ್ಷ ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್, ಬೀಡಿ ಸೇವಿಸಿದ ನಿಮಿತ್ತ ದಂಡದ ರೂಪದಲ್ಲಿ ಪೊಲೀಸರು ಒಟ್ಟು 2.12 ಕೋಟಿ ರೂ. ವಸೂಲು ಮಾಡಿದ್ದಾರೆ.
2017ಕ್ಕೆ ಹೋಲಿಸಿದರೆ 2018ರಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್ ಮತ್ತು ಬೀಡಿ ಸೇವಿಸಿದ ಪ್ರಕರಣಕ್ಕೆ ಸಂಬಂಧಿಸಿ ಮೊಕದ್ದಮೆಗಳು ಮತ್ತು ಈ ಸಂಬಂಧ ವಸೂಲಿ ಮಾಡಿರುವ ದಂಡ ಕಡಿಮೆಯಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್, ಬೀಡಿ ಮೊದಲಾದವುಗಳ ಸೇವನೆಯನ್ನು ನಿಯಂತ್ರಿಸಲು ಜಾರಿಗೆ ತಂದ “ಸಿಗರೇಟ್ ಆ್ಯಂಡ್ ಅದರ್ ಟೊಬೆಕೋ ಪ್ರಾಡಕ್ಟ್Õ’ (ಕೊಟ್³) ಕಾನೂನಿನಂತೆ ಕೇಸು ದಾಖಲಿಸಿ ದಂಡ ವಸೂಲಿ ಮಾಡಲಾಗಿದೆ.
2018 ರಲ್ಲಿ 1,10,028 ಮಂದಿಯಿಂದಾಗಿ 2,12,77,150 ರೂ. ದಂಡ ವಸೂಲಿ ಮಾಡಲಾಗಿದೆ. 2017ರಲ್ಲಿ 1,62,606 ಮಂದಿಯಿಂದ 3,33,89,900 ರೂ. ದಂಡ ವಸೂಲಿ ಮಾಡಲಾಗಿದೆ. ಈ ಎರಡು ವರ್ಷಗಳ ದಂಡವನ್ನು ತುಲನೆ ಮಾಡಿದರೆ 2017 ನೇ ವರ್ಷಕ್ಕಿಂತ 2018ರಲ್ಲಿ ವಸೂಲಿ ಮಾಡಿದ ದಂಡದಲ್ಲಿ 1.26 ಕೋಟಿ ರೂ. ಕಡಿಮೆಯಾಗಿದೆ.
2016ನೇ ವರ್ಷದಲ್ಲಿ 2,01,085 ಮಂದಿಯಿಂದ 4,17,00,800 ರೂ. ದಂಡ ವಸೂಲಿ ಮಾಡಲಾಗಿತ್ತು. ಕೇರಳದ 19 ಪೊಲೀಸ್ ಜಿಲ್ಲೆಗಳಲ್ಲೂ, ರೈಲ್ವೇ ಪೊಲೀಸರು ದಾಖಲಿಸಿದ ಕೇಸುಗಳಾಗಿವೆ ಇವು. ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್, ಬೀಡಿ ಮೊದಲಾದವುಗಳನ್ನು ಸೇದುವುದು ಅಪರಾಧವಾಗಿದೆ. ಸಿಗರೇಟ್, ಬೀಡಿ ಸೇವನೆಗೆ ಪ್ರೋತ್ಸಾಹ ನೀಡುವುದೂ ಕೂಡಾ ಅಪರಾಧವಾಗಿದೆ. ಜಾಹೀರಾತು ಮೂಲಕ ಪ್ರೋತ್ಸಾಹಿಸುವುದು, 18 ವರ್ಷಕ್ಕಿಂತ ಕೆಳಗಿನ ಹರೆಯದವರಿಗೆ ಹೊಗೆಸೊಪ್ಪು ಉತ್ಪನ್ನಗಳನ್ನು ಮಾರಾಟ ಮಾಡುವುದೂ ಕೂಡ “ಕೊಟ್³’ (ಸಿಗರೇಟ್ ಆ್ಯಂಡ್ ಅದರ್ ಟೊಬೆಕೋ ಪ್ರೊಡೆಕ್ಟ್) ಪ್ರಕಾರ ಅಪರಾಧವಾಗಿದೆ. ಹಿಂದೆಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಬೀಡಿ, ಸಿಗರೇಟ್ ಮೊದಲಾದವುಗಳನ್ನು ಸೇವಿಸಿದರೆ ನ್ಯಾಯಾಲಯಗಳಲ್ಲಿ ದಂಡ ಪಾವತಿಸಬೇಕಾಗಿತ್ತು. ಇದೀಗ ಪೊಲೀಸರೆ ದಂಡ ವಸೂಲು ಮಾಡುತ್ತಿದ್ದಾರೆ.
2018ರಲ್ಲಿ ಎರ್ನಾಕುಳಂ ಸಿಟಿ ಪೊಲೀಸ್ ವ್ಯಾಪ್ತಿ ಯಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ದಂಡ ವಸೂಲಿ ಮಾಡಲಾಗಿದೆ. 14,893 ಮಂದಿಯಿಂದ 25.80 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ತಿರುವನಂತಪುರ ದ್ವಿತೀಯ ಸ್ಥಾನದಲ್ಲಿದೆ. ಇಲ್ಲಿ 11,017 ಮಂದಿಯಿಂದ 21.56 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ಕಣ್ಣೂರಿನಿಂದ 10,551 ಮಂದಿಯಿಂದ 21.10 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. 2016ರ ಮತ್ತು 2017ರಲ್ಲಿ ಕಣ್ಣೂರಿನಲ್ಲಿ ಅತ್ಯಧಿಕ ದಂಡ ವಸೂಲಿ ಮಾಡಲಾಗಿತ್ತು. ಈ ಬಾರಿ ಅತ್ಯಂತ ಕಡಿಮೆ ದಂಡ ವಸೂಲಿ ಮಾಡಿದ ಯಾದಿಯಲ್ಲಿ ತಿರುವನಂತಪುರ ಮತ್ತು ಕೊಲ್ಲಂ ರೂರಲ್ ಜಿಲ್ಲೆಗಳು ಸೇರ್ಪಡೆಗೊಂಡಿದೆ.