ಬೆಂಗಳೂರು: ವಿಧಾನಸೌಧ ಆವರಣದಲ್ಲಿ ವಕೀಲ ಎಚ್.ಎಂ.ಸಿದ್ದಾರ್ಥ ಅವರ ಕಾರಿನಲ್ಲಿ 1.97 ಕೋಟಿ ರೂ. ಪತ್ತೆಯಾದ ಪ್ರಕರಣ ಹೊಸ ತಿರುವು ಪಡೆದಿದ್ದು, ಆ ಹಣವನ್ನು ಆದಾಯ ತೆರಿಗೆ ಇಲಾಖೆ ವಶಕ್ಕೆ ಒಪ್ಪಿಸುವಂತೆ ಹೈಕೋರ್ಟ್ ಬುಧವಾರ ಪೊಲೀಸರಿಗೆ ನಿರ್ದೇಶನ ನೀಡಿದೆ.
ಆದಾಯ ತೆರಿಗೆ ಇಲಾಖೆಯ ತನಿಖಾ ವಿಭಾಗದ ಉಪ ನಿರ್ದೇಶಕ ಎಸ್.ಜನಾರ್ಧನ್, “ಕಾರಿನಲ್ಲಿ ಸಿಕ್ಕಿದ್ದ ಹಣದ ಮೂಲದ ಕುರಿತು ತನಿಖೆ ನಡೆಸುತ್ತೇವೆ. ಆ ಹಣಕ್ಕೆ ಸೂಕ್ತ ದಾಖಲೆಗಳಿಲ್ಲ. ಅಲ್ಲದೇ ಅಷ್ಟು ದೊಡ್ಡ ಮೊತ್ತಕ್ಕೆ ಆದಾಯ ತೆರಿಗೆ ಪಾವತಿಸಿದ್ದಾರೆಯೇ? ಇಲ್ಲವೇ ಎಂಬ ಕುರಿತು ಪರಿಶೀಲನೆ ನಡೆಸಬೇಕಿದ್ದು, ಹಣವನ್ನು ತಮ್ಮ ವಶಕ್ಕೆ ನೀಡಬೇಕು’ ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಬುಧವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಕೆ.ಎನ್.ಫಣೀಂದ್ರ ಅವರಿದ್ದ ಏಕಸದಸ್ಯ ಪೀಠ, ಸಿದ್ಧಾರ್ಥ ಕಾರಿನಲ್ಲಿ ದೊರೆತಿರುವ 1.97 ಕೋಟಿ ರು.ವನ್ನು ಐಟಿ ಇಲಾಖೆ ವಶಕ್ಕೆ ಒಪ್ಪಿಸಬೇಕು ಎಂದು ವಿಧಾನಸೌಧ ಠಾಣೆ ಪೊಲೀಸರಿಗೆ ನಿರ್ದೇಶಿಸಿತು. ಇದಕ್ಕೂ ಮುನ್ನ ಸಿದ್ಧಾರ್ಥ ಪರ ವಕೀಲರು ಸಹ ಹಣವನ್ನು ಐಟಿ ಇಲಾಖೆಯ ವಶಕ್ಕೆ ನೀಡಲು ಒಪ್ಪಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ಧಾರ್ಥ ವಿರುದ್ಧ ದಾಖಲಿಸಿರುವ ಆರೋಪಗಳನ್ನು ಸಾಬೀತಪಡಿಸುವಲ್ಲಿ ವಿಧಾನಸೌಧ ಠಾಣಾ ಪೊಲೀಸರು ಸಫಲವಾದರೆ, ಐಟಿ ಇಲಾಖೆಯು ಕಾರಿನಲ್ಲಿ ಸಿಕ್ಕಿದ 1.97 ಕೋಟಿ ರೂ.ಗಳನ್ನು ಪೊಲೀಸರಿಗೆ ಬಡ್ಡಿ ಸಮೇತ ನೀಡಬೇಕು. ಈ ಕುರಿತು ಪೊಲೀಸರು ಹಾಗೂ ಐಟಿ ಇಲಾಖೆ ಒಪ್ಪಂದ (ಇಂಡೆಮೆನಿಟಿ ಬಾಂಡ್) ಮಾಡಿಕೊಳ್ಳಬೇಕು ಎಂದು ನ್ಯಾಯಪೀಠ ಇದೇ ವೇಳೆ ಸೂಚಿಸಿತು.
ಪ್ರಕರಣವೇನು?: 2016ರ ಅ.21ರಂದು ವಿಧಾನಸೌಧದ ಪಶ್ಚಿಮ ದ್ವಾರದ ಮೂಲಕ ವೋಕ್ಸ್ ವ್ಯಾಗನ್ ಕಾರಿನಲ್ಲಿ ಒಳಪ್ರವೇಶಿಸುವ ವೇಳೆ ಸ್ಥಳದಲ್ಲಿದ್ದ ಭದ್ರತಾ ಪೊಲೀಸರು ತಪಾಸಣೆಗೊಳಪಡಿಸಿದ್ದರು. ಈ ಸಂದರ್ಭದಲ್ಲಿ ಕಾರಿನ ಡಿಕ್ಕಿಯಲ್ಲಿ ಸುಮಾರು 1.97 ಕೋಟಿ ನಗದು ಪತ್ತೆಯಾಗಿತ್ತು. ಈ ಸಂಬಂಧ ವಿಧಾನಸೌಧ ಠಾಣಾ ಪೊಲೀಸರು ಕಾರು ಹಾಗೂ ಹಣ ಜಪ್ತಿ ಮಾಡಿ ತನಿಖೆ ಕೈಗೊಂಡಿದ್ದರು.
ಹಣದ ಮೂಲ ಪತ್ತೆ ಮಾಡುವ ಉದ್ದೇಶದಿಂದ ಸಿದ್ದಾರ್ಥ ಅಗತ್ಯ ದಾಖಲೆ ನೀಡಿದರೂ, ಹಣ ಹಿಂದಿರುಗಿಸದಂತೆ ಐಟಿ ಇಲಾಖೆ, ನಗರದ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಅದನ್ನು ಎಸಿಎಂಎಂ ನ್ಯಾಯಾಲಯ ವಜಾಗೊಳಿಸಿದ್ದರಿಂದ ಐಟಿ ಇಲಾಖೆ ಹೈಕೋರ್ಟ್ ಮೆಟ್ಟಿಲೇರಿತ್ತು.