Advertisement

ಅತಿವೃಷ್ಟಿ: ರಾಜ್ಯಕ್ಕೆ 1869.85 ಕೋಟಿ ರೂ. ಎರಡನೇ ಕಂತಿನ ಪರಿಹಾರ

10:15 AM Jan 07, 2020 | sudhir |

ಬೆಂಗಳೂರು:ರಾಜ್ಯದಲ್ಲಿ ಪ್ರವಾಹದಿಂದ ತೀವ್ರ ನಷ್ಟವುಂಟಾಗಿದ್ದು ಐವತ್ತು ಸಾವಿರ ಕೋಟಿ ರೂ. ವಿಶೇಷ ಅನುದಾನ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕೋರಿದ ಬೆನ್ನಲ್ಲೇ ಕೇಂದ್ರ ಸರ್ಕಾರವು ರಾಜ್ಯಕ್ಕೆ 1869.85 ಕೋಟಿ ರೂ. ನೆರವು ಬಿಡುಗಡೆ ಮಾಡಿದೆ.

Advertisement

ನೆರೆ ಪರಿಹಾರದ ಮೊದಲ ಕಂತಿನ ಪರಿಹಾರವಾಗಿ 1200 ಕೋಟಿ ರೂ. ಬಿಡುಗಡೆ ಮಾಡಿದ್ದ ಕೇಂದ್ರ ಸರ್ಕಾರ ಇದೀಗ ಎರಡನೇ ಕಂತು 1869.85 ಕೋಟಿ ರೂ. ಬಿಡುಗಡೆಗೊಳಿಸಲು ನಿರ್ಧರಿಸಿದೆ.

ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ದೇಶದ ವಿವಿಧ ರಾಜ್ಯಗಳಿಗೆ 2019 ನೇ ಸಾಲಿನ ಬರ ಹಾಗೂ ಅತಿವೃಷ್ಟಿ ಪರಿಹಾರ ಬಿಡುಗಡೆ ಮಾಡಲಾಗಿದ್ದು ಅದರಂತೆ ಕರ್ನಾಟಕಕ್ಕೂ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ.

ರಾಜ್ಯದಲ್ಲಿ ಆಗಸ್ಟ್‌ ಹಾಗೂ ಸೆಪ್ಟೆಂಬರ್‌ ತಿಂಗಳಿನಲ್ಲಿ ಉಂಟಾಗಿದ್ದ ಪ್ರವಾಹದಿಂದ ಸುಮಾರು 30 ಸಾವಿರ ಕೋಟಿ ರೂ. ನಷ್ಟವಾಗಿತ್ತು. ವಿಶೇಷ ಪರಿಹಾರ ನೀಡುವಂತೆ ಹಲವು ಬಾರಿ ರಾಜ್ಯ ಸರ್ಕಾರ ಮನವಿ ಮಾಡಿತ್ತು.
ಆದರೆ, ಎನ್‌ಡಿಆರ್‌ಎಫ್ನಡಿ ಕೇಂದ್ರ ಸರ್ಕಾರವು ಮೊದಲ ಕಂತಿನಲ್ಲಿ ನಾಲ್ಕು ರಾಜ್ಯಗಳಿಗೆ 3200 ಕೋಟಿ ರೂ. ಬಿಡುಗಡೆ ಮಾಡಿತ್ತು. ಅದರಲ್ಲಿ ಕರ್ನಾಟಕಕ್ಕೆ 1200 ಕೋಟಿ ರೂ. ದೊರೆತಿತ್ತು. ಇದೀಗ ಎರಡನೇ ಕಂತಿನ ಹಣ ಬಿಡುಗಡೆ ಮಾಡಿದೆ. ಇದರಿಂದಾಗಿ ಒಟ್ಟಾರೆ ರಾಜ್ಯಕ್ಕೆ 3069.85 ಕೋಟಿ ರೂ. ಪರಿಹಾರ ಬಂದಂತಾಗಿದೆ. ಎನ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರ ಒಟ್ಟಾರೆ ನಷ್ಟದ ಶೇ.10 ಮೊತ್ತ ಮಾತ್ರ 6ರಷ್ಟು ಬಂದಿದೆ.

ಅಸ್ಸಾಂಗೆ 616.63 ಕೋಟಿ ರೂ., ಹಿಮಾಚಲ ಪ್ರದೇಶಕ್ಕೆ 284.93 ಕೋಟಿ ರೂ., ಮಧ್ಯಪ್ರದೇಶಕ್ಕೆ 1749.73 ಕೋಟಿ ರೂ., ಮಹಾರಾಷ್ಟ್ರಕ್ಕೆ 956.93 ಕೋಟಿ ರೂ., ತ್ರಿಪುರಗೆ 63.32 ಕೋಟಿ ರೂ., ಉತ್ತರ ಪ್ರದೇಶಕ್ಕೆ 367.17 ಕೋಟಿ ರೂ. ಸೇರಿ ಏಳು ರಾಜ್ಯಗಳಿಗೆ 5,908 ಕೋಟಿ ರೂ. ಬಿಡಗಡೆ ಮಾಡಿದೆ. ಪರಿಹಾರ ಬಿಡುಗಡೆ ಮಾಡಲಾಗಿದೆ.

Advertisement

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಪ್ರಕೃತಿ ವಿಕೋಪ ನಿರ್ವಹಣೆ ನಿಟ್ಟಿನಲ್ಲಿ ಎಲ್ಲ ರೀತಿಯ ನೆರವು ಕಲ್ಪಿಸಿದೆ ಎಂದು ಕೇಂದ್ರ ಗೃಹ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ತುಮಕೂರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬಂದಿದ್ದಾಗ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬಹಿರಂಗ ಭಾಷಣದಲ್ಲಿ ಪ್ರಧಾನಿಯವರ ಸಮ್ಮುಖದಲ್ಲೇ ರಾಜ್ಯದಲ್ಲಿ ಪ್ರವಾಹದಿಂದ ಸಾಕಷ್ಟು ಹಾನಿಯಾಗಿದ್ದು ಕೇಂದ್ರ ಸರ್ಕಾರ 50 ಸಾವಿರ ಕೋಟಿ ರೂ. ವಿಶೇಷ ಅನುದಾನ ನೀಡಬೇಕು ಎಂದು ಕೋರಿಕೆ ಸಲ್ಲಿಸಿದ್ದರು.

ಯಡಿಯೂರಪ್ಪ ಅವರ ಮನವಿ ಕುರಿತು ಸಾಕಷ್ಟು ವ್ಯಾಖ್ಯಾನಗಳು ಕೇಳಿಬಂದಿದ್ದವು. ಮುಖ್ಯಮಂತ್ರಿಯವರು ಕೇಂದ್ರದ ನೆರವು ಕೇಳುವಲ್ಲಿ ವಿಫ‌ಲವಾದರು ಎಂದು ತಮ್ಮ ಮೇಲೆ ಆರೋಪ ಬರುವುದು ತಪ್ಪಿಸಲು ಬಹಿರಂಗ ಸಭೆಯಲ್ಲೇ ವಿಶೇಷ ಅನುದಾನ ಕೇಳಿದರು. ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ತಂತ್ರ ಎಂಬೆಲ್ಲಾ ಮಾತುಗಳು ಕೇಳಿಬಂದಿದ್ದವು.

ಕೇಂದ್ರ ಸರ್ಕಾರ ಅಳೆದು ತೂಗಿ ಕೊನೆಗೂ ರಾಜ್ಯಕ್ಕೆ ನೆರೆ ಪರಿಹಾರದ ಹಣ ಕೊಟ್ಟಿದೆ. ಬಹುಶಃ ಶಿವಕುಮಾರ ಶ್ರೀಗಳು ಮೆಟ್ಟಿದ ಭೂಮಿ ಮೋದಿ ಅವರಿಗೆ ಜ್ಞಾನೋದಯ ಮಾಡಿಸಿರಬಹುದು. ಪರಿಹಾರ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು. ನೆರೆ ಪರಿಹಾರವಲ್ಲದೇ ರಾಜ್ಯಕ್ಕೆ ನ್ಯಾಯೋಚಿತವಾಗಿ ಬರಬೇಕಾದ ಅನುದಾನ ಸಾಕಷ್ಟಿದೆ. ತೆರಿಗೆ ಪಾಲು, ನರೇಗಾ ಅನುದಾನ ಇವುಗಳೆನ್ನೆಲ್ಲಾ ಯಾವಾಗ ಕೊಡುತ್ತೀರಿ ಮೋದಿ ಅವರೇ?
– ಎಚ್‌.ಡಿ.ಕುಮಾರಸ್ವಾಮಿ , ಮಾಜಿ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next