ಬೆಂಗಳೂರು: ತೆಲಂಗಾಣ ಮೂಲದ ವೈದ್ಯರೊಬ್ಬರ ಪತ್ನಿಗೆ ವೈದ್ಯಕೀಯ ಸೀಟು ಕೊಡಿಸುವುದಾಗಿ 17 ಲಕ್ಷ ರೂ. ಹಣ ಪಡೆದ ವ್ಯಕ್ತಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ತೆಲಂಗಾಣ ಮೂಲದ ಡಾ.ಶ್ರೀಧರ್ ಚಟ್ಲ ಎಂಬುವರು ಎಂ.ಜಿ.ರಸ್ತೆ ನಿವಾಸಿ ವಿಜಯ್ ಸೇರಿ ಮೂವರ ವಿರುದ್ಧ ಕಬ್ಬನ್‌ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ವೈದ್ಯ ಶ್ರೀಧರ್ 2017-18ನೇ ಸಾಲಿನಲ್ಲಿ ತಮ್ಮ ಪತ್ನಿ ಸುನಿತಾ ಅವರಿಗೆ ವೈದ್ಯಕೀಯ ಸೀಟು ಕೊಡಿಸಲು ಪ್ರಯತ್ನಿಸುತ್ತಿದ್ದರು. ಇದೇ ವೇಳೆ ಶ್ರೀಧರ್‌ರ ಸ್ನೇಹಿತೆ ಶ್ರಾವಣಿ ಎಂಬುವವರು ವಿಜಯ್ ಎಂಬಾತ ಮೊಬೈಲ್ ನಂಬರ್ ಕೊಟ್ಟು ಸಂಪರ್ಕಿಸುವಂತೆ ಹೇಳಿದ್ದರು. ನಂತರ ಕಾರ್ಯನಿಮಿತ್ತ ಬೆಂಗಳೂರಿಗೆ ಬಂದಿದ್ದ ವೈದ್ಯ, ಆರೋಪಿ ವಿಜಯ್‌ನನ್ನು ಎಂ.ಜಿ.ರಸ್ತೆಯಲ್ಲಿರುವ ಖಾಸಗಿ ಕಂಪನಿಯೊಂದರಲ್ಲಿ ಭೇಟಿ ಮಾಡಿದ್ದರು.
ಭೇಟಿ ವೇಳೆ ಆರೋಪಿ ವಿಜಯ್, ಕೋಲಾರದ ದೇವರಾಜ ಅರಸು ಕಾಲೇಜಿನಲ್ಲಿ ಸೀಟು ಕೊಡಿಸುವುದಾಗಿ ಹೇಳಿ ಐದು ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ. ಅದರಂತೆ ವೈದ್ಯ ಶ್ರೀಧರ್, ಆರೋಪಿ ಖಾತೆಗೆ ಒಂದು ಲಕ್ಷ ರೂ. ಹಾಗೂ ಎನ್.ಬಿ.ಚಾರಿ ಎಂಬುವವರ ಖಾತೆಗೆ ನಾಲ್ಕು ಲಕ್ಷ ರೂ. ಹಣ ವರ್ಗಾವಣೆ ಮಾಡಿದ್ದಾರೆ.
ಹಣ ವರ್ಗಾವಣೆಯಾದ ಕೆಲ ದಿನಗಳ ಬಳಿಕ ಶ್ರೀಧರ್ ಅವರಿಗೆ ಕರೆ ಮಾಡಿದ ಆರೋಪಿ, ನಿಮ್ಮ ಪತ್ನಿಗೆ ವೈದ್ಯಕೀಯ ಸೀಟು ಖಾತರಿಯಾಗಿದೆ. ಬಾಕಿ ಹಣ ತೆಗೆದುಕೊಂಡು ಬನ್ನಿ ಎಂದು ಹೇಳಿದ್ದ. ಈ ಹಿನ್ನೆಲೆಯಲ್ಲಿ ಶ್ರೀಧರ್, ಆರೋಪಿಗೆ ಆರು ಲಕ್ಷ ರೂ. ಮೊತ್ತದ ಡಿಡಿ ಕೊಟ್ಟಿದ್ದರು. ಹಲವು ತಿಂಗಳು ಕಳೆದರೂ ಸೀಟು ಸಿಕ್ಕಿರಲಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ಕೋಲಾರದಲ್ಲಿ ಸೀಟಿಲ್ಲ,
ಬದಲಿಗೆ ಆದಿಚುಂಚನಗಿರಿ ಸಂಸ್ಥೆಯಲ್ಲಿ ಕೊಡಿಸುತ್ತೇನೆ ಎಂದು ಮತ್ತೆ ಆರು ಲಕ್ಷ ನಗದು ಸೇರಿ ಸೇರಿದಂತೆ ವಿವಿಧ ಹಂತಗಳಲ್ಲಿ ಒಟ್ಟು 17 ಲಕ್ಷ ರೂ. ಪಡೆದುಕೊಂಡಿದ್ದ. ಬಳಿಕ ಎಲ್ಲಿಯೂ ಸೀಟು ಕೊಡಿಸದೇ ವಂಚನೆ ಮಾಡಿದ್ದಾನೆ. ಈ ಸಂಬಂಧ ವೈದ್ಯ ಶ್ರೀಧರ್ ಫೆ.15ರಂದು ಪ್ರಕರಣ ದಾಖಲಿಸಿದ್ದಾರೆ ಎಂದು ಕಬ್ಬನ್‌ಪಾರ್ಕ್ ಪೊಲೀಸರು ಹೇಳಿದರು.