Advertisement

“ಕ್ಷೇತ್ರಕ್ಕೆ 16,520 ಕೋಟಿ ರೂಪಾಯಿ ಅನುದಾನ’

01:37 AM Apr 16, 2019 | Team Udayavani |

ಉಪ್ಪಿನಂಗಡಿ: ಕಳೆದ 2 ಅವಧಿಯ 10 ವರ್ಷ ತಾವು ಮಾಡಿರುವ ಆಶೀರ್ವಾದಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಕೆಲಸ ಮಾಡಿದ್ದೇನೆ. ಈ ಬಾರಿ ಇನ್ನೊಮ್ಮೆ ಅವಕಾಶ ಮಾಡಿ ಕೊಡಿ, ಅಭಿವೃದ್ಧಿಯ ಭರಪೂರದೊಂದಿಗೆ ಜಿಲ್ಲೆಯನ್ನು ರಾಜ್ಯದಲ್ಲಿ ನಂ. 1 ಮಾಡುತ್ತೇನೆ ಎಂದು ದ.ಕ.ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

ಉಪ್ಪಿನಂಗಡಿಯಲ್ಲಿ ಎ. 14ರಂದು ಬಿಜೆಪಿ ಚುನಾವಣ ಪ್ರಚಾರ ಸಭೆಯಲ್ಲಿ ಮಾತನಾಡಿ, ಯುಪಿಎ ಅವಧಿಯಲ್ಲಿ ಜಿಲ್ಲೆಗೆ ಕೇವಲ 4,500 ಕೋಟಿ ರೂಪಾಯಿ ಅನುದಾನ ಬಂದಿತ್ತು. ಆದರೆ ಈ ಬಾರಿ 16,520 ಕೋಟಿ ರೂ. ಅನುದಾನ ಬಂದಿದೆ. ರಾಷ್ಟ್ರೀಯ ಹೆದ್ದಾರಿ ಮೇಲ್ದರ್ಜೆಗೆ, ರೈಲ್ವೆ, ವಿಮಾನ ನಿಲ್ದಾಣ ಅಭಿವೃದ್ಧಿ, ಮೀನುಗಾರಿಕಾ ಜಟ್ಟಿ ನಿರ್ಮಾಣ, ಪ್ಲಾಸ್ಟಿಕ್‌ ಪಾರ್ಕ್‌ ಮೊದಲಾದ ನೂರಾರು ಯೋಜನೆಗಳು ಜಿಲ್ಲೆಗೆ ಬಂದಿದೆ ಎಂದು ಹೇಳಿದರು.

ಪ್ರಧಾನಿ ಮೋದಿ ಭಯೋತ್ಪಾದನೆ ಮಟ್ಟ ಹಾಕುವಲ್ಲಿ ಯಶಸ್ವಿ ಆಗಿದ್ದಾರೆ. ಜತೆಗೆ ಸೈನಿಕರಿಗೆ ರಕ್ಷಣೆ ದೊರೆಯುತ್ತಿದೆ. ಬಡವರಿಗೆ ಅಡುಗೆ ಅನಿಲ ವಿತರಣೆಯ ಯೋಜನೆ, ಆಯುಷ್ಮಾನ್‌ ಯೋಜನೆ, ವಿದ್ಯುದ್ಧೀಕರಣ ಯೋಜನೆಯೊಂದಿಗೆ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ದಾರೆ. ನನ್ನನ್ನು ಗೆಲ್ಲಿಸುವ ಮೂಲಕ ಮೋದಿ ಅವರನ್ನು ಮತ್ತೂಮ್ಮೆ ಪ್ರಧಾನಿ ಆಗಿ ಕಾಣಬೇಕು ಎಂದು ಹೇಳಿದರು.

ಭರವಸೆಯ ಕೆಲಸ
ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ, ಶಾಸಕ ಸಂಜೀವ ಮಠಂದೂರು ಮಾತನಾಡಿ, ಕಳೆದ ಚುನಾವಣೆಯಲ್ಲಿ ಮೋದಿ ನೀಡಿರುವ ಭರವಸೆಯ ಕೆಲಸವನ್ನು ಸಂಸದರಾಗಿ ನಳಿನ್‌ ಕುಮಾರ್‌ ಕಟೀಲು ಮಾಡಿ ತೋರಿಸಿದ್ದಾರೆ. ಜಿಲ್ಲೆಯ ಅಭಿವೃದ್ಧಿ ಮತ್ತು ಜನತೆಯ ಸಾಮರಸ್ಯದ ಬದುಕಿಗೆ ಪಣ ತೊಟ್ಟಿರುವ ಕಟೀಲು ಅವರನ್ನು ಮುಂದಿನ ಅವಧಿಗೂ ಗೆಲ್ಲಿಸಿ ಕೊಡಬೇಕು ಎಂದು ಮನವಿ ಮಾಡಿದರು.

ದ.ಕ. ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ ಮಾತನಾಡಿ, ರಾಷ್ಟ್ರೀಯ ಚಿಂತನೆ ಇಲ್ಲದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಮಾತು ಮಾತಿಗೂ ಮೋದಿ ಕಳ್ಳ ಎಂದು ಹೇಳುತ್ತಾರೆ. ನಿಜವಾಗಿಯೂ ಮೋದಿ ದೇಶದ 130 ಕೋಟಿ ಜನರ ಹೃದಯ ಗೆದ್ದ ಕಳ್ಳ ಎನ್ನುವುದನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದರು.

Advertisement

3 ಲಕ್ಷಕ್ಕೂ ಅಧಿಕ ಅಂತರ
ದ.ಕ. ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ಬಿ. ನಾಗರಾಜ ಶೆಟ್ಟಿ ಮಾತನಾಡಿ, ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ದೇಶದ ಚಿತ್ರಣವೇ ಬದಲಾಗಿದೆ. ಮೋದಿಯವರೇ ಮುಂದಿನ 10 ವರ್ಷ ಪ್ರಧಾನಿಯಾಗಲಿದ್ದಾರೆ. ಈ ಬಾರಿ ನಳಿನ್‌ ಕುಮಾರ್‌ ಕಟೀಲು ಮೂರು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಆರಿಸಿ ಬರಲಿದ್ದಾರೆ ಎಂದು ಹೇಳಿದರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ವಿಶ್ವೇಶ್ವರ ಭಟ್‌, ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಜಿ.ಪಂ. ಸದಸ್ಯೆ ಶಯನಾ ಜಯಾನಂದ, ತಾ.ಪಂ. ಮಾಜಿ ಅಧ್ಯಕ್ಷ ಜಯಾನಂದ, ಮಂಗಳೂರು ಗೋಕರ್ಣನಾಥೇಶ್ವರ ದೇವಸ್ಥಾನದ ಸದಸ್ಯ ರವಿಶಂಕರ ಮಿಜಾರು, ತಾ.ಪಂ. ಸದಸ್ಯ ಮುಕುಂದ ಗೌಡ, ಪ್ರಮುಖರಾದ ಯು. ರಾಮ, ಗೋಪಾಲ ಹೆಗ್ಡ, ಚಂದ್ರಶೇಖರ ಮಡಿವಾಳ, ಉಮೇಶ್‌ ಶೆಣೈ, ರಾಮಚಂದ್ರ ಮಣಿಯಾಣಿ, ಸದಾನಂದ ಕಾರುಕ್ಲಬ್‌, ಪ್ರಶಾಂತ್‌ ನೆಕ್ಕಿಲಾಡಿ, ಶೌಕತ್‌ ಅಲಿ, ಸತೀಶ ಕಾಮತ್‌, ಜಯಾನಂದ ಕಲ್ಲಾಪು ಉಪಸ್ಥಿತರಿದ್ದರು. ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಕೇಶವ ಗೌಡ ಬಜತ್ತೂರು ಸ್ವಾಗತಿಸಿ, ಯುವಮೋರ್ಚಾ ಅಧ್ಯಕ್ಷ ಸುನೀಲ್‌ ಕುಮಾರ್‌ ದಡ್ಡು ವಂದಿಸಿದರು. ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಸುರೇಶ್‌ ಅತ್ರಮಜಲು ನಿರೂಪಿಸಿದರು.

ರೋಡ್‌ ಶೋ
ಸಾರ್ವಜನಿಕ ಸಭೆಗೆ ಮುನ್ನ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಬಳಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಪೇಟೆಯ ಪ್ರಮುಖ ಬೀದಿಯಲ್ಲಿ ರೋಡ್‌ ಶೋ ನಡೆಸಿ, ಮತಯಾಚಿಸಿದರು. ಕಾಂಗ್ರೆಸ್‌ ಕಾರ್ಯಕರ್ತ ಸುರೇಶ್‌ ಬಿಜೆಪಿಗೆ ಸೇರ್ಪಡೆಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next