Advertisement

ರೈಲಿನಲ್ಲಿ 1.65 ಕೋ ಚಿನ್ನದ ಗಟ್ಟಿ ಮಾರಾಟಕ್ಕೆ ಸಂಬಂಧಿಸಿದ್ದು?

01:32 PM Nov 04, 2018 | Harsha Rao |

ಉಡುಪಿ: ಮುಂಬಯಿಯಿಂದ ಎರ್ನಾಕುಳಂಗೆ ತೆರಳುತ್ತಿದ್ದ ನೇತ್ರಾವತಿ ಎಕ್ಸ್‌ ಪ್ರಸ್‌ ರೈಲಿನಲ್ಲಿ ಉಡುಪಿಯ ರೈಲ್ವೇ ರಕ್ಷಣಾ ದಳದವರು ಶುಕ್ರವಾರ ಪತ್ತೆಹಚ್ಚಿ ವಶಕ್ಕೆ ಪಡೆದುಕೊಂಡ ಸುಮಾರು 1.65 ಕೋ.ರೂಪಾಯಿಯು ಹವಾಲಾ ಹಣವಲ್ಲ ಎಂಬುದು ಮೇಲ್ನೋ ಟಕ್ಕೆ ತಿಳಿದು ಬಂದಿದೆ. ಅದು ಜಸ್ವಂತ್‌ ಸಿಂಗ್‌ ಎಂಬಾತನು ಚಿನ್ನದ ಗಟ್ಟಿಗಳ ಮಾರಾಟ ವ್ಯವಹಾರದಿಂದ ಸಂಪಾದಿಸಿದ್ದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement

ಮೂಲತಃ ರಾಜಸ್ಥಾನದವನಾದ ಜಸ್ವಂತ್‌ ಸಿಂಗ್‌  ಸುಮಾರು 13 ವರ್ಷಗಳಿಂದ ಕಣ್ಣೂರಿನಲ್ಲಿ ನೆಲೆಸಿದ್ದು, ಹೋಮ್‌ ಅಪ್ಲಾಯನ್ಸಸ್‌ ಹಾಗೂ ಬಟ್ಟೆ ವ್ಯಾಪಾರ ನಡೆಸಿಕೊಂಡಿದ್ದ. ಸುಮಾರು 5 ವರ್ಷಗಳಿಂದ ಚಿನ್ನದ ಗಟ್ಟಿಯನ್ನು ಮಾರಾಟ ಮಾಡುವ ವ್ಯವಹಾರ ಮಾಡಿಕೊಂಡಿದ್ದ. ಹೆಚ್ಚಾಗಿ ಚಿನ್ನವನ್ನು ಹುಬ್ಬಳ್ಳಿ, ಬೆಳಗಾವಿ ಮೊದಲಾದೆಡೆ ಮಾರಾಟ ಮಾಡುತ್ತಿದ್ದ. ಅಲ್ಲಿ ಮಾರಾಟವಾದ ಹಣವನ್ನು ಅವರಿಗೆ ಬೆಳಗಾವಿಯ ವ್ಯಕ್ತಿ (ಈತನು ಜಸ್ವಂತ್‌ ಸಿಂಗ್‌ ಜತೆ ವ್ಯವಹಾರ ಪಾಲುದಾರ) ತಂದು ತಲುಪಿಸುತ್ತಿದ್ದ. ಆದರೆ ಶುಕ್ರವಾರದಂದು ಆತ ಜಸ್ವಂತ್‌ ಸಿಂಗ್‌ನಿಗೆ ಕರೆ ಮಾಡಿ ಹಣ ಪಡೆದುಕೊಂಡು ಹೋಗಲು ಜನ ಕಳುಹಿಸುವಂತೆ ಹೇಳಿದ್ದ. ತಾನು ಕೂಡ ಗಣೇಶ ಎಂಬಾತನನ್ನು ಕಳುಹಿಸಿದ್ದ. ಜಸ್ವಂತ್‌ ಕಡೆಯಿಂದ ಪ್ರಕಾಶ್‌ ಎಂಬಾತನನ್ನು ಹಣ ತಲುಪಿಸಲು ನಿಯೋಜಿಸಲಾಗಿತ್ತು. ಅದರಂತೆ ಗಣೇಶ ಮತ್ತು ಪ್ರಕಾಶ್‌ ಎರಡು ಬ್ಯಾಗ್‌ಗಳಲ್ಲಿ ಹಣ ಸಾಗಿಸುತ್ತಿದ್ದರು.

ಲೆಕ್ಕಕ್ಕೆ ಸಿಗದ ಹಣ?
ಶುಕ್ರವಾರ ಬೆಳಗ್ಗಿನಿಂದ ಮರುದಿನ ಮುಂಜಾನೆ 2 ಗಂಟೆಯವರೆಗೂ ಐಟಿ ಅಧಿಕಾರಿಗಳು ಇಂದ್ರಾಳಿ ರೈಲು ನಿಲ್ದಾಣದ ರೈಲ್ವೇ ರಕ್ಷಣಾ ದಳದ ಕಚೇರಿಯಲ್ಲಿಯೇ ಮೂವರನ್ನು ವಿಚಾರಣೆ ನಡೆಸಿದರು. ಹಣವನ್ನು  ಲೆಕ್ಕ ಹಾಕಲಾಗಿದ್ದು ಅದರಲ್ಲಿ ಒಟ್ಟು 1,64,96,500 ರೂ.ಗಳಿದ್ದವು ಎಂಬ ಮಾಹಿತಿ ದೊರೆತಿದೆ. ಇವೆಲ್ಲವೂ ಕಪ್ಪು ಹಣವಾಗಿರುವ ಸಾಧ್ಯತೆಗಳೇ ಹೆಚ್ಚು. ಕಣ್ಣೂರಿನಲ್ಲಿರುವ ಜಸ್ವಂತ್‌ ಮನೆಯನ್ನು ಕೂಡ ಜಾಲಾಡಿದ್ದಾರೆ ಎನ್ನಲಾಗಿದೆ. ಕಣ್ಣೂರು, ಕೋಯಿಕ್ಕೋಡ್‌ ಮೊದಲಾದೆಡೆ ಒಂದಷ್ಟು ಕಡಿಮೆ ಬೆಲೆಗೆ ಚಿನ್ನದ ಗಟ್ಟಿಗಳನ್ನು ಖರೀದಿಸಿ ಅದನ್ನು ಹುಬ್ಬಳ್ಳಿ, ಬೆಳಗಾವಿನಲ್ಲಿ ಮಾರಾಟ ಮಾಡುವ ವ್ಯವಹಾರವಿದು. ಜಸ್ವಂತ್‌ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದನಾದರೂ ಘೋಷಿತ ಆದಾಯಕ್ಕಿಂತ ಹೆಚ್ಚಿನ ವ್ಯವಹಾರ, ದಾಖಲೆಗಳಿಲ್ಲದೆ ಹಣ ಹೊಂದಿರುವುದು ಮತ್ತು ಸಾಗಾಟ ಮಾಡಿರುವುದು ಮೊದಲಾದವುಗಳಿಗೆ ಸಂಬಂಧಿಸಿ ಐಟಿ ಅಧಿಕಾರಿಗಳು ವಿಚಾರಣೆ ಮುಂದು ವರೆಸಿದ್ದಾರೆಂದು ಮೂಲಗಳು ತಿಳಿಸಿವೆ.

ಬೆಳಗಾವಿಯಿಂದ ಕುಮಟಾಕ್ಕೆ ಕಾರಿನಲ್ಲಿ ಸಾಗಾಟ?
ರೈಲಿನಲ್ಲಿ ಹಣ ರವಾನೆ ಆರಂಭಗೊಂಡಿರುವುದು ಕುಮಟಾದಿಂದ. ಬೆಳಗಾವಿಯ ಪಾಲುದಾರ ಕುಮಟಾವರೆಗೆ ಕಾರಿನಲ್ಲಿ ಹಣ ತುಂಬಿದ ಬ್ಯಾಗ್‌ ತಂದುಕೊಟ್ಟು ವಾಪಸಾಗಿದ್ದ. ಅನಂತರ ಗಣೇಶ ಆ ಎರಡು ಬ್ಯಾಗ್‌ನ್ನು ಹಿಡಿದುಕೊಂಡು ರೈಲಿನಲ್ಲಿ ಪ್ರಯಾಣ ಬೆಳೆಸಿದ್ದಾನೆ. ಮೊದಲೇ ನೀಡಿದ ಮಾಹಿತಿಯಂತೆ ಪ್ರಕಾಶ್‌ ಭಟ್ಕಳದಲ್ಲಿ ನಿಂತಿದ್ದ. ಅನಂತರ ಇಬ್ಬರು ಒಟ್ಟಿಗೆ ಕಣ್ಣೂರಿನತ್ತ ಪ್ರಯಾಣ ಬೆಳೆಸಿದ್ದರು. ಈ ನಡುವೆ ಉಡುಪಿ ಸಮೀಪ ಸಿಕ್ಕಿಬಿದ್ದಿದ್ದಾರೆ. ಬೆಳಗಾಂನಲ್ಲಿರುವ ಇನ್ನೋರ್ವ ಪಾಲುದಾರ ತಪ್ಪಿಸಿಕೊಂಡಿದ್ದಾನೆ ಎಂಬುದು ಗೊತ್ತಾಗಿದೆ.

ರೈಲ್ವೇ ಇಲಾಖೆಯಲ್ಲಿ ತಲ್ಲಣ
ರೈಲಿನಲ್ಲಿ ಮೊದಲ ಬಾರಿಗೆ ಇಷ್ಟು ದೊಡ್ಡ ಮೊತ್ತ ಪತ್ತೆ  ಯಾಗಿರುವುದು ರೈಲ್ವೇ ಇಲಾಖೆ ಅಧಿಕಾರಿಗಳಲ್ಲಿ ತಲ್ಲಣ ಮೂಡಿಸಿದೆ. ಈ ಬಗ್ಗೆ ಇಲಾಖಾಧಿಕಾರಿಗಳು ಶನಿವಾರ ಸಭೆ ನಡೆಸಿ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಚುನಾವಣೆಗೆ ಸಂಬಂಧಿಸಿದ್ದಲ್ಲ
ಹಣ ಪತ್ತೆಯಾದ ತತ್‌ಕ್ಷಣ ಇದು ಚುನಾ ವಣೆ ಹಿನ್ನೆಲೆಯಲ್ಲಿ ಸಾಗಾಟ ಮಾಡುತ್ತಿರ ಬಹುದು ಎಂಬ ಸಂದೇಹ ವ್ಯಕ್ತವಾಗಿ ಚುನಾವಣಾಧಿ ಕಾರಿಗಳು ಕೂಡ ವಿಚಾರಣೆಗೆ ಆಗಮಿಸಿದ್ದರು. ಈಗ ಇದು ಚಿನ್ನ ಮಾರಾಟದ ಹಣ ಎಂಬುದು ಬಹುತೇಕ ಖಚಿತವಾಗಿರುವುದರಿಂದ ಚುನಾವಣೆಗೂ ಈ ಹಣಕ್ಕೂ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ.

ಟಿ.ಸಿ.ಗೆ ಅನುಮಾನ
ಎಸಿ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಓರ್ವನ ಬಳಿ ಎರಡು ಬ್ಯಾಗ್‌ಗಳನ್ನು ಕಂಡು ಟಿ.ಸಿ.ಗೆ ಅನುಮಾನ ಬಂದಿತ್ತು. ಟಿ.ಸಿ. ಕೂಡಲೇ ರೈಲ್ವೇ ರಕ್ಷಣಾ ದಳದ ಸಬ್‌ ಇನ್ಸ್‌ ಪೆಕ್ಟರ್‌ ಸಂತೋಷ್‌ ಗಾಂವ್ಕರ್‌ ಅವರಿಗೆ ಮಾಹಿತಿ ನೀಡಿದ್ದು, ದಳದವರು ಕೂಡಲೇ ಕಾರ್ಯ ಪ್ರವೃತ್ತರಾಗಿದ್ದರು. ಅನಂತರ ರಕ್ಷಣಾ ದಳದವರು ಚಾಣಾಕ್ಷತನದಿಂದ ಪ್ರಕರಣ ಭೇದಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next