ಚೆನ್ನೈ: ಆದಾಯ ತೆರಿಗೆ ಅಧಿಕಾರಿಗಳು ಚೆನ್ನೈನಲ್ಲಿ ಹೆದ್ದಾರಿ ನಿರ್ಮಾಣ ಕಂಪನಿಗೆ ಸೇರಿದ 20ಕ್ಕೂ ಅಧಿಕ ಸ್ಥಳಗಳಲ್ಲಿ ಶೋಧ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಬರೋಬ್ಬರಿ 160 ಕೋಟಿ ರೂ. ನಗದು ಮತ್ತು 100 ಕೆಜಿ ಚಿನ್ನ ವಶಪಡಿಸಿಕೊಂಡಿದ್ದಾರೆ.
ತಮಿಳುನಾಡು ರಾಜ್ಯ ಪೊಲೀಸರ ಬಿಗಿ ಬಂದೋಬಸ್ತ್ನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸೋಮವಾರ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಕಂಪನಿ ಮತ್ತು ಅದರ ಸಹವರ್ತಿ ಸಂಸ್ಥೆಗಳು ತೆರಿಗೆ ವಂಚನೆ ನಡೆಸಿದ್ದಾರೆ.
ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನಗದು ಸಾಗಣೆ ಮಾಡಲಾಗಿದೆ ಎಂಬ ಬಗ್ಗೆ ಖಚಿತ ವರ್ತಮಾನ ಸಿಕ್ಕಿದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆಯ ಚೆನ್ನೈ ವಿಭಾಗ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ.
ದಾಖಲೆಗಳ ಪರಿಶೀಲನೆ ವೇಳೆ ಹೆದ್ದಾರಿ ನಿರ್ಮಾಣ ಸಂಸ್ಥೆ ತೆರಿಗೆ ವಂಚನೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ಸುದ್ದಿ ಸಂಸ್ಥೆಗೆ ದೃಢಪಡಿಸಿವೆ. ಮದುರೆ, ವೆಲ್ಲೂರು ಸೇರಿದಂತೆ 22 ಸ್ಥಳಗಳಲ್ಲಿ ಸೋಮವಾರ ಬೆಳಗ್ಗಿನಿಂದಲೇ ಶೋಧ
ನಡೆಸಲಾಗಿತ್ತು. ಈ ಸಂಸ್ಥೆಗೆ ರಾಜಕೀಯವಾಗಿಯೂ ಅತ್ಯಂತ ಪ್ರಭಾವ ಇದೆ ಎಂದು ಹೇಳಲಾಗಿದೆ.