ನೆಲಮಂಗಲ: ರಾಜಧಾನಿಗೆ ಹತ್ತಿರವಾಗಿರುವುದರಿಂದ ಹೊಸ ಬಡಾವಣೆಗಳಿಗೆ ಮೂಲ ಸೌಕರ್ಯ ಅಭಿವೃದ್ಧಿ ಪಡಿಸುವ ಹೊಣೆಗಾರಿಕೆ ಇದೆ ಎಂದು ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ತಿಮ್ಮರಾಯಪ್ಪ ಹೇಳಿದರು. ತಾಲೂಕಿನ ಅರಿಶಿನಕುಂಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪರಿಮಳ ನಗರದಲ್ಲಿ ಸುಮಾರು 15.50 ಲಕ್ಷ ರೂ.ಗಳ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಸುಲಭ ಸಂಚಾರ ಕಲ್ಪಿಸುವ ದೃಷ್ಟಿಯಿಂದ ಉತ್ತಮ ರಸ್ತೆ ನಿರ್ಮಾಣ ಮಾಡುವ ಗುರಿ ಹೊಂದಿದ್ದು, ಅಭಿವೃದ್ಧಿ ಕಾರ್ಯಗಳಲ್ಲಿ ಸ್ಥಳೀಯ ಜನತೆ ಕಾಮಗಾರಿಗಳು ಕಳಪೆ ಆಗದಂತೆ ನಿಗಾ ವಹಿಸಬೇಕು ಎಂದು ತಿಳಿಸಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೃಷ್ಣಪ್ಪಮಾತನಾಡಿ, ಪಂಚಾಯ್ತಿ ವ್ಯಾಪ್ತಿಗೆ ಬರುವ ಪ್ರತಿ ಹಳ್ಳಿಗಳನ್ನು ಅಭಿವೃದ್ಧಿ ಪಡಿಸಲು ಪಂಚಾಯ್ತಿ ಎಲ್ಲಾ ಸದಸ್ಯರು ಶ್ರಮಿಸುತ್ತಿದ್ದು, ಸಮಸ್ಯೆಗಳಿರುವವರು ನೇರವಾಗಿ ಪಂಚಾಯ್ತಿಗೆ ಭೇಟಿ ನೀಡಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಸೂಕ್ತ ಮಾರ್ಗೋಪಾಯ ಕಂಡುಕೊಳ್ಳಬೇಕು ಎಂದರು.
ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಪಿ.ಹೇಮಂತ್ ಮಾತನಾಡಿ, ಉತ್ತಮ ರಸ್ತೆ ನಿರ್ಮಾಣದಿಂದ ಗ್ರಾಮೀಣ ಭಾಗದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಗ್ರಾಪಂ ಅಧ್ಯಕ್ಷ ರಾಮಕೃಷ್ಣಪ್ಪ, ಗ್ರಾಪಂ ಸದಸ್ಯರಾದ ಮಂಜುನಾಥ್, ಎಸ್.ಓ ಕುಮಾರ್, ಚಲನಚಿತ್ರ ನಟ ಕುಮಾರ್, ಗೋವಿಂದು, ಮುಖಂಡರಾದ ರಮೇಶ್, ರಾಮಾಂಜಿನಪ್ಪ, ಆಂಜಿನಪ್ಪ, ಶಿವಕುಮಾರ್, ಕೇಬಲ್ ಅಶೋಕ್, ಪ್ರಸಾದ್, ಮಂಜುನಾಥ್, ಶ್ರೀಕಾಂತ್, ಶರ್ಮಾ ಇದ್ದರು.