Advertisement

ಎಚ್‌ಕೆಆರ್‌ಡಿಬಿಗೆ 1500 ಕೋಟಿ ಅನುದಾನ

03:05 PM Jul 18, 2017 | |

ಲಿಂಗಸುಗೂರು: ಹೈದರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಪ್ರಸಕ್ತ ಸಾಲಿನಲ್ಲಿ 1500 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಎಚ್‌ಕೆಆರ್‌ಡಿಬಿ ಕಾರ್ಯದರ್ಶಿ ಹಾಗೂ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ ಹೇಳಿದರು.

Advertisement

ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ಎಚ್‌ ಕೆಆರ್‌ಡಿಬಿಗೆ ಬಿಡುಗಡೆಯಾಗಿರುವ 1500 ಕೋಟಿ ರೂ. ಅನುದಾನಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಶಿಕ್ಷಣ, ಆರೋಗ್ಯ, ಗ್ರಾಮೀಣ ಕುಡಿಯುವ ನೀರು, ಲೋಕೋಪಯೋಗಿ ರಸ್ತೆ ಸೇರಿ ಇನ್ನಿತರ ಇಲಾಖೆಗಳ ಕೆಲಸಗಳ ಬಗ್ಗೆ ಹೆಚ್ಚಿನ ಒತ್ತು ನೀಡಲಾಗಿದೆ. ಹೈ.ಕ. ಭಾಗದಲ್ಲಿ 50 ಪ್ರೌಢಶಾಲೆ ಹಾಗೂ 50 ಪಿಯು ಹೊಸ ಕಾಲೇಜುಗಳಿಗೆ ಅನುಮೋದನೆ ನೀಡಲಾಗಿದೆ. ಖಾಸಗಿ ಅನುದಾನ ರಹಿತ ಶಾಲೆಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಶಿಕ್ಷಕರಿಗೆ ತರಬೇತಿ ನೀಡಲಾಗುವುದು ಎಂದರು.

ಶೀಘ್ರ ಪಡಿತರ ಚೀಟಿ: ಇನ್ನು 15-20 ದಿನಗಳಲ್ಲಿ ಅರ್ಜಿದಾರರ ಮೊಬೈಲ್‌ಗೆ ಸಂದೇಶ ಬಂದ ನಂತರ ಸ್ಪೀಡ್‌ ಪೋಸ್ಟ್‌ ಮೂಲಕ ಪಡಿತರ ಕಾರ್ಡ್‌ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಪಡಿತರ ಚೀಟಿ ಅರ್ಜಿದಾರರಲ್ಲಿ ಗೊಂದಲ ಬೇಡ ಎಂದರು.

ರಿಂಗ್‌ ರೋಡ್‌: ಹೈ.ಕ. ಭಾಗದ ಪ್ರಮುಖ ನಗರ ಹಾಗೂ ಪ್ರತಿ ತಾಲೂಕು ಕೇಂದ್ರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ
ಎಚ್‌ಕೆಆರ್‌ಡಿಬಿ ಅನುದಾನದಲ್ಲಿ ವರ್ತುಲ ರಸ್ತೆ ನಿರ್ಮಿಸಲಾಗುವುದು. ಮಾಸ್ಟರ್‌ ಪ್ಲಾನ್‌ ಪ್ರಕಾರವೇ ಮಾಡಲಾಗುವುದು ಎಂದರು.

ಲಿಂಗಸುಗೂರು ಪಟ್ಟಣದ ಬೈಪಾಸ್‌ ರಸ್ತೆಯ ಅಗಲೀಕರಣ ಕಾರ್ಯ ಅಪೂರ್ಣ ಕುರಿತು ಪ್ರಶ್ನೆ ಯೊಂದಕ್ಕೆ ಉತ್ತರಿಸಿದ ಅವರು, ಪಟ್ಟಣದ ಹಳೆ ಎಸ್‌ಬಿಐ ಕಟ್ಟಡದ ಮಾಲೀಕರು ನ್ಯಾಯಾಲಯ ದಿಂದ ತಡೆಯಾಜ್ಞೆ ತಂದಿದ್ದರಿಂದ ತೆರವು ಕಾರ್ಯ ವಿಳಂಬವಾಗಿದೆ. ಆದರೂ ಕಲುಬುರಗಿ ನ್ಯಾಯಾಲಯದಲ್ಲಿ ಪ್ರಕರಣ ಐದಾರು ವರ್ಷಗಟ್ಟಲೇ ವಿಳಂಬವಾಗಲು ಸಾಧ್ಯವಿಲ್ಲ. ಕೂಡಲೇ ಈ ಬಗ್ಗೆ ಪರಿಶೀಲಿಸಿ ತಡೆಯಾಜ್ಞೆ ತೆರವು ಆಗಿದ್ದರೆ ಕಟ್ಟಡವನ್ನು ಕೂಡಲೇ ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿ ಎಂದು ಸಹಾಯಕ
ಆಯುಕ್ತರಿಗೆ ಸೂಚಿಸಿದರು. ಹೊನ್ನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಶೌಚಾಲಯ ನಿರ್ಮಾಣದಲ್ಲಾದ ಅವ್ಯವಹಾರ ಕುರಿತು ಖುದ್ದು ಪರಿಶೀಲಿಸುವುದಾಗಿ ಹೇಳಿದರು.

Advertisement

ಕೃಷಿ ಜಂಟಿ ನಿರ್ದೇಶಕ ವೀರೇಶ, ಸಹಾಯಕ  ಆಯುಕ್ತೆ ದಿವ್ಯಾ ಪ್ರಭು, ಶಿರಸ್ತೇದಾರ ವಾಣಿ,ಕಂದಾಯ ನಿರೀಕ್ಷಕ ತಿಪ್ಪಣ್ಣ, ಗ್ರಾಮಲೆಕ್ಕಿಗ ಮಾಳಿಂಗರಾಯ ಇತರರು ಇದ್ದರು. 

ಸರ್ವೇಗೆ ಲಂಚ ಕೇಳಿದರೆ ದೂರು ಕೊಡಿ
ಸರ್ವೇ ಇಲಾಖೆಯಲ್ಲಿ ನಡೆಯುತ್ತಿರುವ ಶೋಷಣೆ ಕುರಿತು ರೈತರು ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಅವರು, ಸರ್ವೇ ಇಲಾಖೆಯಲ್ಲಿ ರೈತರು ಲಂಚ ನೀಡಬೇಕಾಗಿಲ್ಲ. ಯಾರೇ ಲಂಚ ಕೇಳಿದರೂ ನಮಗೆ ದೂರು ನೀಡಿದರೆ, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.  

Advertisement

Udayavani is now on Telegram. Click here to join our channel and stay updated with the latest news.

Next