ಮಂಡ್ಯ: ಅಮೆರಿಕದ ಅಕ್ಕ ಸಂಸ್ಥೆ ವತಿಯಿಂದ 1.5 ಕೋಟಿ ರೂ. ವೆಚ್ಚದಲ್ಲಿ ಕಿದ್ವಾಯಿಗೆ ವಿಶೇಷ ಮಾದರಿಯ ಬಸ್‌ನ್ನು ಕೊಡುಗೆಯಾಗಿ ನೀಡಲಾಗುತ್ತಿದೆ ಎಂದು ಅನಿವಾಸಿ ಭಾರತೀಯ ಶಿವಮೂರ್ತಿ ಕೀಲಾರ ತಿಳಿಸಿದರು.
ತಾಲೂಕಿನ ಹಳೇ ಬೂದನೂರು ಗ್ರಾಮದ ಶ್ರೀ ವೆಂಕಟೇಶ್ವರ ವಿದ್ಯಾನಿಕೇತನ ಶಾಲೆಯಲ್ಲಿ ಅಮೆರಿಕ ಮತ್ತು ಇಂಗ್ಲೆಂಡ್ ಇತರೆ ದೇಶಗಳ ಭಾರತೀಯ ನುರಿತ ವೈದ್ಯರ ತಂಡದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.
ಬಸ್ ಸಿದ್ಧ: ಹಳ್ಳಿಗಳಿಗೆ ತೆರಳಿ ಕ್ಯಾನ್ಸರ್ ರೋಗಿಗಳ ತಪಾಸಣೆ ನಡೆಸಲು ಸಹಕಾರಿಯಾಗಲಿದೆ. ಅಮೆರಿಕದಿಂದ ಎಲ್ಲ ಯಂತ್ರೋಪಕರಣಗಳು ಬಂದಿದ್ದು, ದೆಹಲಿಯಲ್ಲಿ ಬಸ್‌ನ ಸಿದ್ಧತೆ ಮಾಡ ಲಾಗುತ್ತಿದೆ. ಫೆ.20ರೊಳಗೆ ಬಸ್ ಸಿದ್ಧವಾಗಲಿದ್ದು, ಆನಂತರ ಜನರ ಸೇವೆಗೆ ದೊರಕಲಿದೆ ಎಂದರು.
ಅಮೆರಿಕ ಮತ್ತು ಲಂಡನ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಸೇರಿದಂತೆ ಇತರೆ ರಾಷ್ಟ್ರಗಳ ವೈದ್ಯರು ಶಿಬಿರದಲ್ಲಿ ಪಾಲ್ಗೊಂಡು ತಪಾಸಣೆ ನಡೆಸುತ್ತಿದ್ದಾರೆ. ಭಾರತದ ವೈದ್ಯರು ವಿದೇಶಗಳಿಗೆ ತೆರಳಿ ಕೇವಲ ಐಷಾರಾಮಿ ಜೀವನ ನಡೆಸುತ್ತಿಲ್ಲ. ಬಡವರು, ಹಿಂದುಳಿದವರ ಆರೋಗ್ಯದ ಬಗ್ಗೆ ಅಪಾರ ಕಾಳಜಿ ಹೊಂದಿದ್ದು, ಇಂತಹ ಶಿಬಿರಗಳನ್ನು ಸಂಘಟಿಸಿ, ಉಚಿತ ಆರೋಗ್ಯ ತಪಾಸಣೆ ನಡೆಸುತ್ತಾ ಬಂದಿದ್ದಾರೆ ಎಂದು ಹೇಳಿದರು.
ಶಿಬಿರ: ದಿ ಅಸೋಸಿಯೇಷನ್ ಆಫ್ ರೆಸಿಡೆಂಟ್ ಓವರ್‌ಸೀಸ್, ಸಿಟಿಜನ್ ಅಫ್ ಇಂಡಿಯಾ ಆಂಡ್ ಫ್ಯಾಮಿಲೀಸ್, ಶ್ರೀವೆಂಕಟೇಶ್ವರ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಶಿಬಿರದಲ್ಲಿ ಸಾಮಾನ್ಯ ವೈದ್ಯಕೀಯ ತಪಾಸಣೆ, ಕಣ್ಣು, ಮೂಳೆ, ಮಕ್ಕಳ ಹಾಗೂ ಮಹಿಳಾ ವೈದ್ಯರಿಂದ ತಪಾಸಣೆ, ಕ್ಯಾನ್ಸರ್ ತಜ್ಞರಿಂದ ತಪಾಸಣೆ, ಸಕ್ಕರೆ ಕಾಯಿಲೆ, ಬಿಪಿ ತಪಾಸಣೆ ನಡೆಸಲಾಯಿತು.
ಶಾಲೆಯ ಸಂಸ್ಥಾಪಕ ಶ್ರೀ ಅನಂತಕುಮಾರ ಸ್ವಾಮೀಜಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕರಾದ ಆರ್.ರಾಜೇಶ್, ಹೊಳಲು ಶಾಖೆಯ ಮುಖ್ಯ ಶಿಕ್ಷಕ ಪ್ರಕಾಶ್, ವೈದ್ಯರಾದ ಡಾ.ಶ್ರೀಧರ್, ಡಾ.ಅಂಜನಾ, ಡಾ.ಶುಭಾ, ಡಾ.ವಂದನಾ, ಡಾ.ಶ್ರೀಲಕ್ಷ್ಮೀ, ಡಾ.ಮಾಧವ, ಡಾ.ಕಲ್ಪನಾ, ಡಾ.ಅನಂತಲಕ್ಷ್ಮೀ, ಡಾ.ಪ್ರಕಾಶ್ ರಾಮಚಂದ್ರ, ಡಾ.ರಾಜೀವಲೋಚನ ಇತರರು ಪಾಲ್ಗೊಂಡಿದ್ದರು.