ಬೆಂಗಳೂರು: ಅಂತಾ ರಾಷ್ಟ್ರೀಯ, ರಾಷ್ಟ್ರೀಯ ಮಟ್ಟದ ವಿವಿಧ ಕೂಟಗಳಲ್ಲಿ ಭಾಗವಹಿಸಿ ಪದಕ ಗೆದ್ದ ರಾಜ್ಯದ ಕ್ರೀಡಾಪಟುಗಳಿಗೆ ಇನ್ನೊಂದು ತಿಂಗಳಲ್ಲಿ ನಗದು ಬಹುಮಾನ ಕೈಸೇರಲಿದೆ. ಹೀಗೆಂದು ಕ್ರೀಡಾ ಇಲಾಖೆ ಮೂಲಗಳು ಉದಯವಾಣಿಗೆ ಸ್ಪಷ್ಟಪಡಿಸಿವೆ.
ಕ್ರೀಡಾ ಇಲಾಖೆ ಈ ಹಿಂದೆ ಕಳುಹಿಸಿದ್ದ ಪಟ್ಟಿಯಲ್ಲಿನ ತಪ್ಪು ತಿದ್ದಿ ಕಳುಹಿಸಲು ಹಣಕಾಸು ಇಲಾಖೆ ಸೂಚಿಸಿದ್ದು, ಸದ್ಯದಲ್ಲೇ ಒಟ್ಟಾರೆ 14.50 ಕೋಟಿ ರೂ. ಕ್ರೀಡಾಪಟುಗಳಿಗೆ ವಿತರಣೆಯಾಗಲಿದೆ.
“ಪದಕ ಗೆದ್ದರೂ ರಾಜ್ಯದ ಕ್ರೀಡಾಪಟುಗಳಿಗೆ ಕಾಸು ಸಿಕ್ಕಿಲ್ಲ’ ಎಂಬ ವರದಿ ಪ್ರಕಟಗೊಂಡ ಬೆನ್ನಲ್ಲೇ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹಣಕಾಸು ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಬಿ.ಎನ್.ಎಸ್. ಪ್ರಸಾದ್ ಜತೆಗೆ ತುರ್ತು ಸಭೆ ನಡೆಸಿದ್ದರು. ಪದಕ ವಿಜೇತರಿಗೆ ನೀಡಲು ಬಾಕಿ ಇರುವ ಒಟ್ಟು 14.50 ಕೋಟಿ ರೂ. ನಗದು ಬಹುಮಾನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದ್ದರು. ಸಚಿವರ ಮನವಿಗೆ ಸ್ಪಂದಿಸಿದ ಹೆಚ್ಚುವರಿ ಕಾರ್ಯದರ್ಶಿಗಳು ಅರ್ಹ ಕ್ರೀಡಾಪಟುಗಳ ಪಟ್ಟಿ ಕಳುಹಿಸಿಕೊಡುವಂತೆ ಸೂಚಿಸಿದ್ದರು.
ಕ್ರೀಡಾ ಇಲಾಖೆಯಿಂದ ಪರಿಷ್ಕೃತ ಪಟ್ಟಿ
ಕ್ರೀಡಾ ಇಲಾಖೆಯಿಂದ ಒಂದು ಪಟ್ಟಿಯನ್ನು ಕಳುಹಿಸಿ ಕೊಡ ಲಾಗಿತ್ತು. ಆದರೆ ಕೆಲ ಪದಕ ವಿಜೇತರ ಹೆಸರು ಎರಡೆರಡು ಬಾರಿ ನಮೂದಿಸಲ್ಪಟ್ಟಿದೆ. ಕೆಲವೊಂದು ತಪ್ಪಾಗಿ ನಮೂದಾಗಿದೆ. ಇದರಿಂದ ಹಣಕಾಸು ಇಲಾಖೆ ಸ್ಪಷ್ಟನೆ ಕೋರಿದೆ.
ಹೀಗಾಗಿ ಕ್ರೀಡಾ ಇಲಾಖೆ ಮತ್ತೂಂದು ಬಾರಿಗೆ ಅರ್ಜಿಯನ್ನು ಪರಿಶೀಲಿಸುವ ಕೆಲಸ ಆರಂಭಿಸಿದೆ. ಅರ್ಹರಿಗೆ ಮಾತ್ರ ಹಣ ದೊರೆಯಲಿದೆ.
ಇನ್ನೊಂದು ತಿಂಗಳೊಳಗೆ ಎಲ್ಲ ಪದಕ ವಿಜೇತ ಕ್ರೀಡಾಪಟುಗಳಿಗೂ ನಗದು ಪುರಸ್ಕಾರ ತಲುಪಲಿದೆ ಎಂದು ಕ್ರೀಡಾ ಇಲಾಖೆ ಮೂಲಗಳು ಸ್ಪಷ್ಟಪಡಿಸಿವೆ. 2014ರಿಂದಲೇ ಅನುದಾನವಿಲ್ಲದೆ ಪದಕ ಗೆದ್ದ ಕ್ರೀಡಾಪಟುಗಳಿಗೆ ನಿಯಮಾನುಸಾರ ನಗದು ಪುರಸ್ಕಾರ ನೀಡಲು ಸಾಧ್ಯವಾಗಿರಲಿಲ್ಲ.