ಮಾಗಡಿ: ತಾಲೂಕಿನ ಶಿಕ್ಷಣ ಕ್ಷೇತ್ರಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ 14 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಕ್ಷೇತ್ರದಲ್ಲಿ ಶಿಕ್ಷಣ ಕ್ರಾಂತಿ ನಡೆದಿದೆ ಎಂದು ಶಾಸಕ ಎ.ಮಂಜುನಾಥ ಸಂತಸ ವ್ಯಕ್ತಪಡಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಎಸ್‌ಎಸ್‌ಎಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಮುಖ್ಯಶಿಕ್ಷಕರಿಗೆ ನಡೆದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿಮ, ಎಲ್ಲಿ ಶ್ರಮವಿರುತ್ತದೆಯೋ ಅಲ್ಲಿ ಜಯವಿದ್ದೇ ಇರುತ್ತದೆ ಎಂಬುದಕ್ಕೆ ಈ ಮಕ್ಕಳೇ ಸಾಕ್ಷಿಯಾಗಿದ್ದಾರೆ. ತಾಲೂಕಿನ 22 ಪ್ರೌಢಶಾಲೆಯಲ್ಲಿ ಶೇ.100ರಷ್ಟು ಫಲಿತಾಂಶ ಸಾಧನೆ ದೊರಕಿದೆ. ಇದಕ್ಕೆ ಶಿಕ್ಷಕರ ಕೊಡುಗೆ ಅಪಾರವಿದೆ. ತಾಲೂಕಿಗೆ ಇನ್ನೂ 15 ಆಂಗ್ಲ ಮಾಧ್ಯಮ ಶಾಲೆ ಮಂಜೂರಾತಿಗೆ ಮುಖ್ಯಮಂತ್ರಿಗಳಲ್ಲಿ ಬೇಡಿಕೆ ಇಟ್ಟಿದ್ದೇನೆ ಎಂದು ತಿಳಿಸಿದರು.
ಸಾಧನೆ ಶಿಕ್ಷಕರ ತಪಸ್ಸಿನ ಫಲ: ರಾಜ್ಯದಲ್ಲಿಯೇ ರಾಮನಗರ ಜಿಲ್ಲೆ ಎಸ್‌ಎಸ್‌ಎಲ್ಸಿ ಫಲಿತಾಂಶದಲ್ಲಿ 2ನೇ ಸ್ಥಾನದಲ್ಲಿದೆ. ಅದರಲ್ಲೂ ತಾಲೂಕಿನ 7 ಮಂದಿ ವಿದ್ಯಾರ್ಥಿಗಳು ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಅವರಲ್ಲಿನ ಆಶಾಭಾವನೆ ಇಟ್ಟುಕೊಂಡಿದ್ದರು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲಡೆ ಸ್ಪರ್ಧೆ ಇರುತ್ತದೆ. ನಮ್ಮ ತಾಲೂಕಿನ ಮುಖ್ಯಶಿಕ್ಷಕರು, ಸಹ ಶಿಕ್ಷಕರ ಪ್ರಾಮಾಣಿಕ ಪ್ರಯತ್ನದ ಫಲದಿಂದ ಮಕ್ಕಳು ಸಾಧನೆಯ ಶಿಖರವೇರಲು ಸಾಧ್ಯವಾಗಿದೆ. ಶಿಕ್ಷಕರ ತಪಸ್ಸಿನ ಫಲವೇ ಈ ಸನ್ಮಾನ ಎಂದು ಹೇಳಿದರು.
ಭವಿಷ್ಯದ ಬುನಾದಿಗೆ ಶಿಕ್ಷಕರು ಶಕ್ತಿ: ಮಕ್ಕಳ ಭವಿಷ್ಯದ ಬುನಾದಿಗೆ ಶಿಕ್ಷಕರು ಶಕ್ತಿಯಾಗಿದ್ದಾರೆ. ಸ್ಫೂರ್ತಿಗೆ ಪೂರಕವಾಗಿ ಕೆಲಸ ಮಾಡಲು ಎಲ್ಲಾ ರೀತಿಯ ಸಹಕಾರ, ಪ್ರೋತ್ಸಾಹ ನೀಡಲಾಗುವುದು. ಸರ್ಕಾರಿ ಶಾಲೆಗಳಲ್ಲಿ ಸೌಕರ್ಯಗಳ ಕೊರತೆ ಇರಬಹುದು. ಅದನ್ನು ತುಂಬಲು ಶಿಕ್ಷಕರು ಪೋಷಕರೊಂದಿಗೆ ಬಾಂಧವ್ಯವನ್ನು ಬೆಳೆಸಿಕೊಂಡು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಇದರಿಂದ ಎಲ್ಲವನ್ನು ಸಮರ್ಪಕವಾಗಿ ನಿಭಾಯಿಸುವ ಶಕ್ತಿ ದೊರಕುತ್ತದೆ ಎಂದು ತಿಳಿಸಿದರು.
ಈ ವೇಳೆ ಎಸ್‌ಎಸ್‌ಎಲ್ಸಿ ಫಲಿತಾಂಶ ತಂದುಕೊಟ್ಟ ಶಾಲಾ ಮುಖ್ಯಶಿಕ್ಷಕರಿಗೆ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿದ 7 ಮಂದಿ ವಿದ್ಯಾರ್ಥಿಗಳ ಪೋಷಕರಿಗೆ ನಗದು 5 ಸಾವಿರ ರೂ. ನೀಡಿ ಅಭಿನಂದಿಸಲಾಯಿತು. 10.30ಕ್ಕೆ ಆಯೋಜನೆಯ ಕಾರ್ಯಕ್ರಮಕ್ಕೆ 2.30 ಗಂಟೆ ತಡವಾಗಿ ಆಗಮಿಸಿದ ಶಾಸಕರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಜಿಪಂ ಸದಸ್ಯೆ ಚಂದ್ರಮ್ಮ ನಂಜಯ್ಯ ಮಕ್ಕಳ ಸಾಧನೆಯ ಕುರಿತು ಮಾತನಾಡಿದರು. ಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಿರ್ದೇಶಕ ದೊಡ್ಡಸೋಮನಹಳ್ಳಿ ರಾಮಚಂದ್ರಯ್ಯ, ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಗೋಪಾಲ್, ಸಿ.ಬಿ.ಅಶೋಕ್ ಮಾತನಾಡಿದರು. ತಾಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಚಂದ್ರ, ಬಿಆರ್‌ಸಿ ಕೇಂದ್ರದ ಸಂಪನ್ಮೂಲಾಾಧಿಕಾರಿ ರೂಪಾಕ್ಷಾ, ಶಿಕ್ಷಕ ಗೌರೀಶ್, ಮಂಜಪ್ಪ, ಸಿಆರ್‌ಪಿ ಮುನಿಯಪ್ಪ, ವೆಂಕಟೇಶ್, ಅಕ್ಷರ ದಾಸೋಹ ಇಲಾಖೆಯ ಸಹಾಯಕ ನಿರ್ದೇಶಕ ಗಂಗಾಧರಯ್ಯ, ಹನುಮಂತೇಗೌಡ, ಮೂರ್ತಿ, ಕೆಂಪೇಗೌಡ ಶಾಲೆಯ ಪ್ರಾಂಶುಪಾಲ ಆರ್.ಶ್ರೀನಿವಾಸ್, ವಾಸವಿ ಶಾಲೆಯ ಪ್ರಾಂಶುಪಾಲ ವಸಂತ ಕುಮಾರ್, ನಾಗರಾಜು, ಮಲ್ಲೂರು ಲೋಕೇಶ್ ಹಾಜರಿದ್ದರು.