Advertisement

ಕೆಎಸ್ಸಾರ್ಟಿಸಿ ಮಂಗಳೂರು-ಬೆಂಗಳೂರು ವಿಭಾಗಕ್ಕೆ  1.10 ಕೋಟಿ ರೂ. ನಷ್ಟ

09:46 AM Aug 19, 2018 | |

ಮಹಾನಗರ: ಕರಾವಳಿ, ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆ ಮತ್ತು ಶಿರಾಡಿ, ಸಂಪಾಜೆ ಘಾಟಿಗಳು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಬಸ್‌ ಸಂಚಾರ ವ್ಯತ್ಯಯಗೊಂಡಿತ್ತು. ನಾಲ್ಕು ದಿನಗಳಲ್ಲಿ ಕೆಎಸ್ಸಾರ್ಟಿಸಿ ಮಂಗಳೂರು ಮತ್ತು ಬೆಂಗಳೂರು ವಿಭಾಗಕ್ಕೆ ಒಟ್ಟಾರೆ 1.10 ಕೋಟಿ ರೂ.ಗೂ ಹೆಚ್ಚಿನ ನಷ್ಟ ಉಂಟಾಗಿದೆ.

Advertisement

ಮಂಗಳೂರು ವಿಭಾಗದಿಂದ ಬೆಂಗಳೂರು, ಮಡಿಕೇರಿ, ಮೈಸೂರಿಗೆ ತೆರಳುವ ಮತ್ತು ಬೆಂಗಳೂರು ವಿಭಾಗದಿಂದ ಮಂಗಳೂರು, ಉಡುಪಿ, ಕುಂದಾಪುರಕ್ಕೆ ತೆರಳುವ ಹೆಚ್ಚಿನ ಬಸ್‌ಗಳ ಟ್ರಿಪ್‌ ಕಡಿತಗೊಂಡಿವೆ. 4 ದಿನಗಳಲ್ಲಿ ಮಂಗಳೂರು ಕೆಎಎಸ್ಸಾರ್ಟಿಸಿ ವಿಭಾಗಕ್ಕೆ ಸುಮಾರು 70 ಲಕ್ಷ ರೂ., ಮತ್ತು ಬೆಂಗಳೂರು ವಿಭಾಗಕ್ಕೆ ಸುಮಾರು 50 ಲಕ್ಷ ರೂ. ನಷ್ಟ ಉಂಟಾಗಿದೆ. ಮುಂದಿನ ದಿನಗಳಲ್ಲಿ ನಷ್ಟದ ಪ್ರಮಾಣ ಮತ್ತಷ್ಟು ಏರಿಕೆಯಾಗಬಹುದು ಎನ್ನಲಾಗುತ್ತಿದೆ.

ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದಿಂದ ಬೆಂಗಳೂರಿಗೆ ಪ್ರತಿದಿನ 70 ಬಸ್‌ಗಳು ಹಾಗೂ ಮಡಿಕೇರಿ ಮಾರ್ಗವಾಗಿ ಮೈಸೂರಿಗೆ 55 ಬಸ್‌ಗಳು ಸಂಚರಿಸುತ್ತಿದ್ದವು. ಆದರೆ ಕೊಡಗಿನಲ್ಲಿ ಭಾರೀ ಮಳೆ ಮತ್ತು ಶಿರಾಡಿ, ಸಂಪಾಜೆ ಘಾಟಿ ಬಂದ್‌ ಆದ ಕಾರಣದಿಂದ ಆ.14 ರಿಂದ 17ರ ವೆರೆಗೆ ಬೆಂಗಳೂರು ಮತ್ತು ಮೈಸೂರಿಗೆ ತೆರಳುವ ಹೆಚ್ಚಿನ ಬಸ್‌ ಟ್ರಿಪ್‌ ಗಳು ರದ್ದಾಗಿದೆ.

ಪ್ರಯಾಣಿಕರು ಕ್ಷೀಣ 
ಈ ಹಿಂದೆ ಸಾಮಾನ್ಯ ದಿನಗಳಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಪ್ರತೀ ದಿನ ಸರಾಸರಿ 3,000ಕ್ಕೂ ಹೆಚ್ಚಿನ ಮಂದಿ ಕೆಎಸ್ಸಾರ್ಟಿಸಿ ಬಸ್‌ ಮೂಲಕ ಪ್ರಯಾಣಿಸುತ್ತಿದ್ದರು. ಆದರೆ ಸದ್ಯ ಪ್ರಯಾಣಿಕರ ಸಂಖ್ಯೆ 1,500ಕ್ಕೆ ಇಳಿದಿದೆ.

ಖಾಸಗಿ ಬಸ್‌ಗಳಲ್ಲೂ ನಷ್ಟ
ಮಂಗಳೂರಿನಿಂದ ಬೆಂಗಳೂರು -ಮೈಸೂರಿಗೆ ದಿನಂಪ್ರತಿ 400ಕ್ಕೂ ಹೆಚ್ಚಿನ ಖಾಸಗಿ ಬಸ್‌ಗಳು ಸಂಚರಿಸುತ್ತಿದ್ದು, ಆ.14 ರಿಂದ ಘಾಟಿ ಪ್ರದೇಶ ಬಂದ್‌ ಆದ ಕಾರಣ ಖಾಸಗಿ ವೋಲ್ವೊ ಬಸ್‌ ಸಂಚಾರ ಮತ್ತು ಕೆಲ ಸ್ಲೀಪರ್‌ ಕೋಚ್‌ ಬಸ್‌ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಈ ಹಿಂದೆ ಮಂಗಳೂರಿನಿಂದ ಮೈಸೂರಿಗೆ ತೆರಳುವ ಖಾಸಗಿ ಬಸ್‌ ಗಳು ಮಡಿಕೇರಿ ಮೂಲಕ ಸಾಗುತ್ತಿತ್ತು. ಆದರೆ ಸಂಪಾಜೆ ಘಾಟಿ ಬಂದ್‌ ಆದ ಕಾರಣ ದಿಂದ ಚಾರ್ಮಾಡಿ-ಹಾಸನ ಮೂಲಕ ಮೈಸೂರಿಗೆ ತೆರಳುತ್ತಿದೆ. ಇದರಿಂದ ಮಡಿಕೇರಿ ಸಂಪರ್ಕ ಕಡಿತಗೊಂಡಿದೆ.

Advertisement

ಮಡಿಕೇರಿಗೆ ಯಾವುದೇ ಟ್ರಿಪ್‌ ಇಲ್ಲ
ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದಿಂದ ಮಡಿಕೇರಿ ಮಾರ್ಗವಾಗಿ ಮೈಸೂರಿಗೆ 55 ಬಸ್‌ ಗಳು ಸಂಚರಿಸುತ್ತಿದ್ದವು. ಆದರೆ ಸಂಪಾಜೆ ಘಾಟಿ ಪ್ರದೇಶದಲ್ಲಿ ಗುಡ್ಡ ಕುಸಿತದ ಕಾರಣದಿಂದಾಗಿ ಇಲ್ಲಿಂದ ತೆರಳುವ ಎಲ್ಲ ಬಸ್‌ ಟ್ರಿಪ್‌ ಗಳನ್ನು ಸ್ಥಗಿತಗೊಳಿಸಲಾಗಿದೆ. ಸದ್ಯ ಮಂಗಳೂರಿನಿಂದ ಮಡಿಕೇರಿಗೆ ತೆರಳುವ ಪ್ರಯಾಣಿಕರು ಚಾರ್ಮಾಡಿ- ಹಾಸನ- ಮೈಸೂರು ಮೂಲಕ ಮಡಿಕೇರಿ ಸಂಪರ್ಕಿಸಬೇಕಿದೆ.

ದಿನಂಪ್ರತಿ 15 ಲಕ್ಷ ರೂ. ನಷ್ಟ
ಮಂಗಳೂರು ಕೆಎಸ್ಸಾರ್ಟಿಸಿ ಡಿಪೋದಿಂದ ಬೆಂಗಳೂರು, ಮೈಸೂರಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಜತೆಗೆ ಕೆಲ ಟ್ರಿಪ್‌ ಗಳನ್ನು ರದ್ದುಗೊಳಿಸಲಾಗಿದೆ. ಮಂಗಳೂರು ವಿಭಾಗಕ್ಕೆ ದಿನಂಪ್ರತಿ ಸರಾಸರಿ 15 ಲಕ್ಷ ರೂ. ನಷ್ಟ ಉಂಟಾಗಿದೆ. 
– ದೀಪಕ್‌ ಕುಮಾರ್‌
ಕೆಎಸ್ಸಾರ್ಟಿಸಿ ಮಂಗಳೂರು
ವಿಭಾಗಾಧಿಕಾರಿ

ನವೀನ್‌ ಭಟ್‌, ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next