Advertisement

ಕೊಲ್ಲೂರು ದೇಗುಲ 1.10 ಕೋಟಿ ರೂ. ಕಾಣಿಕೆ ಸಂಗ್ರಹ

06:00 AM Oct 25, 2017 | Team Udayavani |

ಕೊಲ್ಲೂರು: ರಾಜ್ಯದ ಶ್ರೀಮಂತ ದೇವಸ್ಥಾನಗಳ ಪೈಕಿ ಒಂದಾದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಇತಿಹಾಸದಲ್ಲೇ ಮೊದಲ ಬಾರಿಗೆ ಕಾಣಿಕೆ ಹುಂಡಿಯಲ್ಲಿ 1.10 ಕೋಟಿ ರೂ.ಗೂ ಮಿಕ್ಕಿ ಹಣ ಸಂಗ್ರಹವಾಗಿದೆ. ಅ. 24ರಂದು ಕಾಣಿಕೆ ಹಣ ಎಣಿಕೆ ಮಾಡಿದ್ದು, ಈ ವೇಳೆ 1,10,66,278 ಕೋ. ರೂ. ದೊರೆತಿದೆ. ಇದು ಒಂದು ತಿಂಗಳಿನಲ್ಲಿನ  ಸಾರ್ವಕಾಲಿಕ ದಾಖಲೆಯಾಗಿದೆ.  

Advertisement

ತಿಂಗಳಿಗೊಮ್ಮೆ ಹಣ ಎಣಿಕೆ : ದೇಗುಲದಲ್ಲಿ ಸಾಮಾನ್ಯವಾಗಿ ತಿಂಗಳಿ ಗೊಮ್ಮೆ ಹುಂಡಿಯ ಹಣವನ್ನು ಎಣಿಕೆ ಮಾಡ ಲಾಗುತ್ತದೆ. ಸರಿಸುಮಾರು 70ರಿಂದ 80 ಲಕ್ಷ ರೂ. ವರೆಗೆ ಸಂಗ್ರಹವಾಗುತ್ತದೆ. ಒಂದೂವರೆ ವರ್ಷದ ಹಿಂದೆ ಗರಿಷ್ಠ 1.6 ಕೋಟಿ ರೂ. ಸಂಗ್ರಹವಾಗಿತ್ತು. ಅದೇ ಈವರೆಗಿನ ಹಣ ಸಂಗ್ರಹದ ದಾಖಲಾಗಿತ್ತು. ಆದರೆ ಈ ಬಾರಿ ಹಣ ಸಂಗ್ರಹಣ ಹಳೆಯ ದಾಖಲೆಗಳನ್ನು ಅಳಿಸಿ ಹಾಕಿದೆ. ಇದರಲ್ಲಿ 1 ಲಕ್ಷ ರೂ.ಗೂ ಮಿಕ್ಕಿ ವಿದೇಶಿ ಕರೆನ್ಸಿಗಳೂ ಸಂಗ್ರವಾಗಿದ್ದು, ಇದೇ ಮೊದಲ ಬಾರಿಯಾಗಿದೆ. ಪ್ರಸ್ತುತ ತಿಂಗಳ ಅವಧಿಯಲ್ಲಿ ಆಯುಧ ಪೂಜೆ, ವಿಜಯ ದಶಮಿ, ದೀಪಾವಳಿ ಹಬ್ಬಗಳಲ್ಲದೆ ಹೆಚ್ಚಿನ ಸಂಖ್ಯೆಯ ಸರಕಾರಿ ರಜೆಗಳು, ಶಾಲಾ ಕಾಲೇಜುಗಳಿಗೆ ರಜೆಯೂ ಇದ್ದುದರಿಂದ ಯಾತ್ರಿಗಳ ಸಂಖ್ಯೆಯೂ ಹೆಚ್ಚಾಗಿತ್ತು.

ಕೊಲ್ಲೂರು ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್‌ ಕುಮಾರ್‌ ಶೆಟ್ಟಿ ಅವರು ಹೇಳುವಂತೆ, ಮೂಕಾಂಬಿಕಾ ದೇಗುಲಕ್ಕೆ ದಾಖಲೆ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ಕಾಣಿಕೆ ಸಮರ್ಪಿಸಿದ್ದಾರೆ. ಹುಂಡಿಯಲ್ಲಿ ಸಂಗ್ರಹವಾದ ವಿದೇಶಿ ಕರೆನ್ಸಿಗಳಲ್ಲಿ ಇಂಗ್ಲೆಂಡ್‌, ಆಸ್ಟ್ರೇಲಿಯಾ, ಅಮೆರಿಕ ಹಾಗೂ ಅರಬ್‌ ರಾಷ್ಟ್ರಗಳ ಕರೆನ್ಸಿ ದೊರೆತಿದ್ದು ಗಮನಾರ್ಹವಾಗಿದೆ.
ಭಕ್ತರ ಭೇಟಿ ಹೆಚ್ಚಾಗುತ್ತಿದೆ. ಸೇವೆಗಳನ್ನು ನಡೆಸುತ್ತಿರು ವುದೂ ಹೆಚ್ಚಾಗಿದೆ ಎಂದು ಅರ್ಚಕರು ತಿಳಿಸಿದ್ದಾರೆ.

ಹುಂಡಿಯಲ್ಲಿ ಸಿಕ್ಕಿದ್ದೇನು? 
1 ಕೋಟಿ ರೂ. ಮಿಕ್ಕಿ ನಗದಿನೊಂದಿಗೆ ಹುಂಡಿಯಲ್ಲಿ  870 ಗ್ರಾಂ ಚಿನ್ನ ಮತ್ತು 3.2 ಕೆ.ಜಿ. ಬೆಳ್ಳಿ ದೊರೆತಿದೆ. ಜತೆಗೆ ವಿವಿಧ ದೇಶಗಳ ಸುಮಾರು 1 ಲಕ್ಷ ರೂ.ಗಳಷ್ಟು ಮೊತ್ತದ ಕರೆನ್ಸಿಯೂ ದೊರಕಿದೆ.

Advertisement

Udayavani is now on Telegram. Click here to join our channel and stay updated with the latest news.

Next