Advertisement

ನೆರೆ ಸಂತ್ರಸ್ತರ ಮನೆ ನಿರ್ಮಾಣಕ್ಕೆ 1,000 ಕೋ. ರೂ.ಬಿಡುಗಡೆ

08:44 AM Sep 19, 2019 | Sriram |

ಬೆಂಗಳೂರು: ನೆರೆಯಿಂದ ಸಂಪೂರ್ಣ ಮನೆ ಕಳೆದುಕೊಂಡವರು ತ್ವರಿತವಾಗಿ ಮನೆ ಕಟ್ಟಿಕೊಳ್ಳಲು ಅನುಕೂಲವಾಗುವಂತೆ ಆರ್ಥಿಕ ನೆರವಿಗೆ 1,000 ಕೋ. ರೂ. ಬಿಡುಗಡೆ ಮಾಡಲು ಸಚಿವ ಸಂಪುಟ ಮಹತ್ವದ ನಿರ್ಧಾರ ಕೈಗೊಂಡಿದೆ.

Advertisement

ಜತೆಗೆ ನೆರೆಯಿಂದಾಗಿ ಹಾನಿಗೀಡಾದ ರಸ್ತೆಗಳನ್ನು ಲೋಕೋಪಯೋಗಿ ಇಲಾಖೆಯಿಂದ ದುರಸ್ತಿಪಡಿಸಲು 500 ಕೋ. ರೂ. ಬಿಡುಗಡೆಗೆ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಕೇಂದ್ರ ಸರಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆ ನಿರೀಕ್ಷೆಯಲ್ಲಿರುವ ರಾಜ್ಯ ಸರಕಾರ ನೆರೆಪೀಡಿತ ಪ್ರದೇಶದಲ್ಲಿ ಮನೆ ಕಳೆದುಕೊಂಡವರು ತ್ವರಿತವಾಗಿ ಸೂರು ಕಟ್ಟಿಕೊಳ್ಳಲು ಅನುಕೂಲವಾಗುವಂತೆ ರಾಜ್ಯ ಸರಕಾರದ ಖಜಾನೆಯಿಂದ 1,000 ಕೋ. ರೂ. ಬಿಡುಗಡೆಗೆ ಸಂಪುಟ ತೀಮಾನಿಸಿದೆ. 3-4 ದಿನಗಳಲ್ಲಿ ಸಂಬಂಧಪಟ್ಟ ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಗೆ ಹಣ ಬಿಡುಗಡೆಯಾಗಲಿದೆ.

ವಿಧಾನಸೌಧದಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಚಿವ ಜೆ.ಸಿ.ಮಾಧುಸ್ವಾಮಿ, ಪ್ರವಾಹದಿಂದ ಸಂಪೂರ್ಣ ಮನೆ ಕಳೆದುಕೊಂಡವರಿಗೆ 5 ಲ. ರೂ. ಪರಿಹಾರ ಘೋಷಿಸಲಾಗಿದೆ. ಮನೆ ನಿರ್ಮಾಣ ಆರಂಭಿಕ ವೆಚ್ಚಕ್ಕೆ ಒಂದು ಲ. ರೂ. ಬಿಡುಗಡೆಗೆ ನಿರ್ಧರಿಸಲಾಗಿದೆ. ಅದರಂತೆ ಸಂತ್ರಸ್ತರು ಮನೆ ನಿರ್ಮಿಸಿಕೊಳ್ಳಲು ಅನುಕೂಲವಾಗುವಂತೆ 1,000 ಕೋ. ರೂ.ಗಳನ್ನು ತತ್‌ಕ್ಷಣ ಬಿಡುಗಡೆಗೆ ಸಂಪುಟದಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಸೂಕ್ತ ದಾಖಲೆಗಳೊಂದಿಗೆ ಅರ್ಹ ಸಂತ್ರಸ್ತರು ಮನೆ ನಿರ್ಮಾಣಕ್ಕೆ ತತ್‌ಕ್ಷಣವೇ ನೆರವು ವಿತರಣೆ ಆರಂಭವಾಗಲಿದೆ. ಭಾಗಶಃ ಮನೆಗೆ ಹಾನಿಯಾಗಿರುವ ಕಡೆ ದುರಸ್ತಿ ಕಾರ್ಯಕ್ಕೆ 25,000 ರೂ. ನೀಡಲಾಗುತ್ತಿದ್ದು, ಈ ಸಂಬಂಧ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

Advertisement

ನೆರೆ ಪ್ರದೇಶದಲ್ಲಿ 30,000ದಿಂದ 40,000 ಮನೆಗಳು ಸಂಪೂರ್ಣ ಹಾನಿಯಾಗಿವೆ ಎಂದು ಅಂದಾಜಿಸಲಾಗಿದೆ. ಈಗಾಗಲೇ ಶೇ.50ರಷ್ಟು ಪ್ರಕರಣಗಳಲ್ಲಿ ದಾಖಲೆಗಳು ಸಲ್ಲಿಕೆಯಾಗಿರಬಹುದು. ಸರಕಾರ ಹಣ ಬಿಡುಗಡೆ ಮಾಡಿದ ಕೂಡಲೇ ಜಿಲ್ಲಾಧಿಕಾರಿಗಳು ಪರಿಶೀಲಿಸಿ ಆರಂಭಿಕ ಒಂದು ಲಕ್ಷ ರೂ. ಬಿಡುಗಡೆ ಮಾಡಲಿದ್ದಾರೆ. ಮನೆ ದುರಸ್ತಿಗೂ ನೆರವು ನೀಡಲಿದ್ದಾರೆ ಎಂದು ಹೇಳಿದರು.

ರಸ್ತೆ ದುರಸ್ತಿಗೆ 500 ಕೋ. ರೂ.
ಪ್ರವಾಹದಿಂದಾಗಿ ಸಾಕಷ್ಟು ಕಡೆ ರಸ್ತೆಗಳು ಹಾಳಾಗಿವೆ. ಈ ರಸ್ತೆಗಳನ್ನು ಲೋಕೋಪಯೋಗಿ ಇಲಾಖೆಯಿಂದ ದುರಸ್ತಿಪಡಿಸಲು 500 ಕೋ. ರೂ. ಬಿಡುಗಡೆಗೆ ಸಂಪುಟದಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಆಸೆ ಇಟ್ಟುಕೊಂಡಿದ್ದೇವೆ
ಕೇಂದ್ರ ಸರಕಾರ ಶೀಘ್ರವೇ ಅನುದಾನ ಬಿಡುಗಡೆ ಮಾಡಲಿದೆ ಎಂದು ಆಸೆ ಇಟ್ಟುಕೊಂಡಿದ್ದೇವೆ. ಈ ಸಂಬಂಧ ಮುಖ್ಯಮಂತ್ರಿಗಳು ದಿಲ್ಲಿಗೆ ಹೋಗಬೇಕಿತ್ತು. ಶುಕ್ರವಾರ ದಿಲ್ಲಿಗೆ ತೆರಳಲಿದ್ದಾರೆ. ಕೇಂದ್ರ ಸರಕಾರ ಅನುದಾನ ಬಿಡುಗಡೆ ಮಾಡುವ ವಿಶ್ವಾಸವಿದೆ. ಸದ್ಯಕ್ಕೆ ರಾಜ್ಯ ಸರಕಾರಕ್ಕೆ ಲಭ್ಯವಿರುವ ಹಣವನ್ನು ಪರಿಹಾರ ಕಾರ್ಯಕ್ಕೆ ಬಳಸಲಾಗುವುದು. ಯಾರೂ ಆತಂಕಪಡಬೇಕಿಲ್ಲ. ಮನೆ ಕಳೆದುಕೊಂಡವರಿಗೆ ನೆರವು ನೀಡಲಾಗುವುದು ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.

ಕಾಫಿ, ಸಂಬಾರ ಪದಾರ್ಥ ಬೆಳೆಯೂ ದೊಡ್ಡ ಪ್ರಮಾಣದಲ್ಲಿ ಹಾಳಾಗಿದ್ದು, ಮತ್ತೂಂದು ಪ್ಯಾಕೇಜ್‌ ಮಾಡಿ ಕೇಂದ್ರ ಸರಕಾರದ ಮುಂದೆ ಹೋಗಲು ಚಿಂತಿಸಲಾಗಿದೆ. ವಿಶೇಷ ಪ್ರಕರಣವೆಂದು ಪರಿಗಣಿಸಿ ಪರ್ಯಾಯ ಭೂಮಿ ನೀಡಿಕೆ ಇತರ ವಿಚಾರಗಳ ಬಗ್ಗೆ ಪ್ರಸ್ತಾವಿಸಲು ಚಿಂತನೆ ನಡೆದಿದೆ. ಜತೆಗೆ ದಾಖಲೆಗಳಲ್ಲಿ ವ್ಯತ್ಯಾಸವಾಗಿದ್ದರೂ ಆಹಾರ ಧಾನ್ಯ ನೀಡುವಂತೆಯೂ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು. ಒಟ್ಟಾರೆ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಕಾನೂನು ಅಭಿಪ್ರಾಯ ತಿಳಿಸಲಾಗುವುದು
ಮೋಟಾರು ವಾಹನ ಕಾಯ್ದೆ ತಿದ್ದುಪಡಿ, ದಂಡ ಪ್ರಮಾಣ ಸಂಬಂಧ ಕಾನೂನು ಇಲಾಖೆ ಸದ್ಯದಲ್ಲೇ ಸಾರಿಗೆ ಇಲಾಖೆಗೆ ಅಭಿಪ್ರಾಯ ತಿಳಿಸಲಿದ್ದು, ದಂಡ ಪ್ರಮಾಣದ ಪರಿಷ್ಕರಣೆಯು ಕಾನೂನು ಇಲಾಖೆ ಅಭಿಪ್ರಾಯದ ಮೇಲೆ ಅವಲಂಬಿತವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ, ಮೋಟಾರು ವಾಹನ ಕಾಯ್ದೆ ಸಂಬಂಧ ಸಾರಿಗೆ ಇಲಾಖೆಯು ಅಭಿಪ್ರಾಯ ಕೋರಿ ಕಡತ ಸಲ್ಲಿಸಿದೆ. ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರ ಪ್ರಸ್ತಾವವಾದಾಗ ಸಾರಿಗೆ ಸಚಿವರು ಕಡತ ಸಲ್ಲಿಸಿರುವುದಾಗಿ ತಿಳಿಸಿದರು. ಇದನ್ನು ಪರಿಶೀಲಿಸಿ ಶೀಘ್ರವಾಗಿ ಅಭಿಪ್ರಾಯ ತಿಳಿಸಲಾಗುವುದು. ಸದ್ಯ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next