ಬೆಂಗಳೂರು: ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ವಂಚಿಸಿದ್ದ ತಮಿಳುನಾಡು ಮೂಲದ ವ್ಯಕ್ತಿಯನ್ನು ಶ್ರೀರಾಮಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಸುರೇಂದ್ರ ರಾಜ್ (29) ಬಂಧಿತ. ಆರೋಪಿಯು ನಗರದ ವೆಂಕಟ್‌ಪ್ರಸಾದ್, ಕಿರಣ್, ಮಹೇಶ್ ಹಾಗೂ ಪ್ರಶಾಂತ್ ಎಂಬುವರಿಗೆ 10 ಲಕ್ಷ ರೂ. ವಂಚಿಸಿದ್ದಾನೆ.
ನಾಲ್ವರು ಡಿಪ್ಲೋಮಾ ವ್ಯಾಸಂಗ ಮುಕ್ತಾಯಗೊಳಿಸಿದ್ದು, ಕೋರಮಂಗಲದ ಇಮಿಗ್ರೇಷನ್ ಕೋಚಿಂಗ್ ಸೆಂಟರ್‌ನಲ್ಲಿ ತರಬೇತಿ ಪಡೆದುಕೊಂಡಿದ್ದರು. ಆದರೆ, ಇತ್ತೀಚೆಗೆ ನಡೆದ ಪರೀಕ್ಷೆಯೊಂದರಲ್ಲಿ 10 ಅಂಕಗಳ ಅಂತರದಿಂದ ಅನುತ್ತೀರ್ಣಗೊಂಡಿದ್ದರು. ಈ ವೇಳೆ ಆರೋಪಿಯ ಪರಿಚಯವಾಗಿದೆ.
ಆಗ ಆರೋಪಿ ಸುರೇಂದ್ರ ರಾಜ್, ನಾಲ್ವರು ಯುವಕರಿಗೆ ಬ್ರಿಟನ್ ದೇಶದ ಆಯಿಲ್ ಕಂಪೆನಿಯೊಂದರಲ್ಲಿ ಕೆಲಸ ಕೊಡಿಸುತ್ತೇನೆ ಎಂದು ಆಸೆ ಹುಟ್ಟಿಸಿದ್ದ. ಈತನ ಸೂಚನೆಯಂತೆ ಮುಂಬೈಗೆ ಹೋದ ನಾಲ್ವರು ಯುವಕರು, ಆರೋಪಿ ಸ್ನೇಹಿತರಾದ ಸಿಂಗ್ ಮತ್ತು ಸಂತೋಷ್ ಎಂಬವರಿಗೆ ತಲಾ 2.5ಲಕ್ಷ ಎಂಬಂತೆ 10 ಲಕ್ಷ ಕೊಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ಆರೋಪಿ ನಾಲ್ವರಿಗೂ ನಕಲಿ ವೀಸಾ ಕೊಡಿಸಿ ವಿದೇಶ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಹೇಳಿದ್ದ. ಈತನ ಮಾತು ನಂಬಿ ಬೆಂಗಳೂರಿನಿಂದ ಚೆನ್ನೈಗೆ ಹೋದ ನಾಲ್ವರಿಗೆ ತಾವು ವಂಚನೆಗೊಳ್ಳಗಾಗಿರುವುದು ಗೊತ್ತಾಗಿದೆ. ಕೂಡಲೇ ಚೆನ್ನೈ ಪೊಲೀಸರಿಗೆ ದೂರು ನೀಡಿದ್ದರು. ಅನಂತರ ಬೆಂಗಳೂರಿಗೆ ಬಂದು ಶ್ರೀರಾಮಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.
ನಗರದಲ್ಲಿ ಸಿಕ್ಕಿಬಿದ್ದ ಆರೋಪಿ: ವಂಚನೆಗೊಳ್ಳಗಾದ ಯುವಕರಿಗೆ ನಾಲ್ಕೈದು ತಿಂಗಳ ಬಳಿಕ ಕರೆ ಮಾಡಿದ ಸುರೇಂದ್ರ ರಾಜ್, ತಾಂತ್ರಿಕವಾಗಿ ತಪ್ಪಾದ್ದರಿಂದ ವಿದೇಶದಲ್ಲಿ ಕೆಲಸ ಕೊಡಿಸಲು ಸಾಧ್ಯವಾಗಲಿಲ್ಲ. ಇದೀಗ ಮತ್ತೂಂದು ಹೊಸ ವ್ಯವಹಾರ ಆರಂಭಿಸಿದ್ದೇನೆ.
ತಲಾ 20 ಸಾವಿರ ರೂ. ಹೂಡಿಕೆ ಮಾಡಿದರೆ ಲಾಭ ಬರುತ್ತದೆ ಎಂದು ನಂಬಿಸಿ, ನಗರಕ್ಕೆ ಬರುವುದಾಗಿ ತಿಳಿಸಿದ್ದ. ಈ ಮಾಹಿತಿಯನ್ನು ನಾಲ್ವರು ಯುವಕರು ಶ್ರೀರಾಮಪುರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಸುರೇಂದ್ರ ರಾಜ್ ಡಿ.20ರಂದು ರಾಜಾಜಿನಗರಕ್ಕೆ ಬಂದಾಗ ಪೊಲೀಸರು ಬಂಧಿಸಿದ್ದಾರೆ.