ಮೂಡುಬಿದಿರೆ: ಆಳ್ವಾಸ್ ನುಡಿಸಿರಿ ವಿರಾಸತ್ ಮಂಡ್ಯ ಘಟಕ ಹಾಗೂ ಮಂಡ್ಯ ನಾಗರಿಕರ ವೇದಿಕೆಯ ಸಹಯೋಗದಲ್ಲಿ ಶುಕ್ರವಾರ ಮಂಡ್ಯದ ಸರಕಾರಿ ಮೈದಾನದಲ್ಲಿ ಯೋಧ ನಮನ ಮತ್ತು ಆಳ್ವಾಸ್ ಸಾಂಸ್ಕೃತಿಕ ವೈಭವ ಜರಗಿದ್ದು, ಪುಲ್ವಾಮ ಘಟನೆಯಲ್ಲಿ ಹುತಾತ್ಮರಾದ ವೀರಯೋಧ ಮಂಡ್ಯದ ಗುರು ಅವರ ಪತ್ನಿ ಕಲಾವತಿ ಅವರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅವರು 10 ಲಕ್ಷ ರೂ. ಚೆಕ್ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಣ್ಣ ನೀರಾವರಿ ಸಚಿವ ಸಿ.ಎನ್. ಪುಟ್ಟರಾಜು ಮಾತನಾಡಿ, ಆಳ್ವಾಸ್ ಶಿಕ್ಷಣ ಪ್ರತಿ ಷ್ಠಾನದ ಕಾರ್ಯ ಶ್ಲಾಘನೀಯ. ಈ ಮೂಲಕ ಡಾ| ಮೋಹನ ಆಳ್ವ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.
ಗಾಯಕ ರಮೇಶ್ಚಂದ್ರ ತಂಡದಿಂದ ದೇಶ ಭಕ್ತಿಗೀತೆಗಳನ್ನು ಪ್ರಸ್ತುತ ಪಡಿಸಲಾಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪ್ರತಿಭಾವಂತ 325 ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು. ಆಳ್ವಾಸ್ ಕಾಲೇಜಿನ ಡಾ| ಮಂಜುನಾಥ ಅಡೇಮನೆ ನಿರೂಪಿಸಿದರು.
ಮಂಡ್ಯ ಶಾಸಕ ಎಂ. ಶ್ರೀನಿವಾಸ, ಮಾಜಿ ಶಾಸಕ ಹಾಗೂ ಜನತಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಡಾ| ಎಚ್.ಡಿ. ಚೌಡಯ್ಯ, ಮಂಡ್ಯ ನುಡಿಸಿರಿ ವಿರಾಸತ್ ಘಟಕದ ಅಧ್ಯಕ್ಷ ಜಯಪ್ರಕಾಶ ಗೌಡ, ಉದ್ಯಮಿ ಜಗನ್ನಾಥ ಶೆಟ್ಟಿ, ಕಸಾಪ ಮಾಜಿ ಅಧ್ಯಕ್ಷ ಎಚ್.ವಿ. ಜಯರಾಮ್ ಉಪಸ್ಥಿತರಿದ್ದರು.
ನಾವೆಲ್ಲರೂ ನಮ್ಮ ನಮ್ಮ ಕೆಲಸಗಳನ್ನು ನಿಶ್ಚಿಂತೆಯಿಂದ ಮಾಡಲು ಸಾಧ್ಯವಾಗಿರುವುದು ನಮ್ಮನ್ನು ರಕ್ಷಣೆ ಮಾಡುವ ಸೈನಿಕರಿಂದ. ಅವರಿಗೇನಾದರೂ ಸಮಸ್ಯೆಯಾದರೆ ಇಡೀ ದೇಶ ಯೋಧರ ಕುಟುಂಬದ ಜತೆಗಿರುತ್ತದೆ ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ.
ಡಾ| ಮೋಹನ ಆಳ್ವ