ಕಮಲಾಪುರ: ನೂತನ ತಾಲೂಕಿನಲ್ಲಿ ವಿವಿಧ ಕಚೇರಿಗಳನ್ನು ಸ್ಥಾಪಿಸಲು ಮಿನಿ ವಿಧಾನ ಸೌಧ ನಿರ್ಮಾಣಕ್ಕಾಗಿ 20 ಕೋಟಿ ಪ್ರಸ್ತಾವನೆ ಸಲ್ಲಿಸಿದ್ದು, 10 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಶಾಸಕ ಬಸವರಾಜ ಮತ್ತಿಮೂಡ ತಿಳಿಸಿದರು.
ಪಟ್ಟಣದಲ್ಲಿ ಮಂಗಳವಾರ ಉಪ ಖಜಾನೆ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಮಿನಿ ವಿಧಾನ ಸೌಧ ಕಟ್ಟಡ ಕಾಮಗಾರಿ ಆರಂಭಿಸಲು ಸ್ಥಳ ಗುರುತಿಸುವಂತೆ ತಹಶೀಲ್ದಾರ್ ಅವರಿಗೆ ತಿಳಿಸಲಾಗಿದೆ. ಈ ಮುಂಚೆ ತಾಲೂಕು ಪಂಚಾಯಿತಿ ಕಚೇರಿಗೆ 10 ಕೋಟಿ, ಕಲಕುಟಗಿ, ಕುದಮೂಡ, ತಾಂಡಾ ರಸ್ತೆ ಕಾಮಗಾರಿಗೆ 5.50 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದರು.
ಸರ್ಕಾರಿ ನೌಕರರ ವಸತಿ ಗೃಹ ನಿರ್ಮಾಣಕ್ಕೆ 5 ಕೋಟಿ, ಲೋಕೋಪಯೋಗಿ ಉಪ ವಿಭಾಗ ಕಟ್ಟಡಕ್ಕೆ 3 ಕೋಟಿ, ಕಲ್ಮೂಡ ರಸ್ತೆ ಬಳಿ ಪ್ರವಾಸಿ ಮಂದಿರ ನಿರ್ಮಾಣಕ್ಕೆ 2 ಕೋಟಿ ರೂ. ಒದಗಿಸಲಾಗಿದೆ ಎಂದು ಶಾಸಕರು ವಿವರಿಸಿದರು.
ಜಿಲ್ಲಾ ಖಜಾನೆ ಉಪ ನಿರ್ದೇಶಕ ಅಶೋಕ ಮಾತನಾಡಿ, ಕಲ್ಯಾಣ ಕರ್ನಾಟಕ ವಿಭಾಗದ ಹೊಸ ತಾಲೂಕುಗಳಲ್ಲಿ ಮೊದಲ ಉಪ ಖಜಾನೆ ಕಮಲಾಪುರದಲ್ಲಿ ಸ್ಥಾಪನೆಯಾಗಿದೆ. ಇದಕ್ಕೆ ಶಾಸಕರ ಸತತ ಪ್ರಯತ್ನ ಕಾರಣವಾಗಿದೆ. ಬಹು ಮುಖ್ಯವಾಗಿ ಸರ್ಕಾರ ರೂಪಿಸಿದ ಎಲ್ಲ ಯೋಜನೆಗಳ ಹಣ ಫಲಾನುಭವಿಗಳ ಖಾತೆಗೆ ನೇರ ಜಮೆಯಾಗಲಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತ ಮಲಾಜಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸುಭಾಷ ಬಿರಾದಾರ, ಮಾಜಿ ಪ್ರಧಾನ ಕಾರ್ಯದರ್ಶಿ ರವಿ ಬಿರಾದಾರ, ತಾಪಂ ಅಧ್ಯಕ್ಷೆ ವೀಣಾ ಜಾಧವ್, ತಹಶೀಲ್ದಾರ್ ಅಂಜುಮ್ ತಬಸುಮ್, ಡಯಟ್ ಪ್ರಾಚಾರ್ಯ ಶಾಂತಗೌಡ ಪಾಟೀಲ, ನೌಕರರ ಸಂಘದ ಅಧ್ಯಕ್ಷ ಭರತರಾಜ ಸಾವಳಗಿ, ಶಶಿಕಲಾ ಮಾಲಿ ಪಾಟೀಲ, ಮುಖಂಡ ಶಿವಕುಮಾರ ದೋಶೆಟ್ಟಿ, ಶಶಿಧರ ಮಾಕಾ, ಪರಮೇಶ್ವರ ಓಕಳಿ, ಸಂಗಪ್ಪ ಮರಕುಂದಿ, ಬಾಬು ಜಾಲಳ್ಳಿ, ಪುಂಡಲೀಕರಾವ ಚಿರಡೆ, ಶಂಕರರಾವ ಬೇನೂರ, ಅಮೃತ ಗೌರೆ ಸೇರಿದಂತೆ ಮುಂತಾದವರಿದ್ದರು.