ವಿಟ್ಲ : ವಿದ್ಯಾರ್ಥಿಗಳನ್ನು ಸನ್ಮಾರ್ಗದಲ್ಲಿ ನಡೆಸುವ ಜವಾಬ್ದಾರಿ ಶಿಕ್ಷಕರದು ಮಾತ್ರವಲ್ಲ, ಅವರಿಗೆ ಸದ್ಬುದ್ಧಿಯನ್ನು ಕಲಿಸುವ ಕಾರ್ಯ ಹೆತ್ತವರದು ಆಗಿದೆ. ಶಾಲೆ ತಡೆಗೋಡೆ ನಿರ್ಮಾಣಕ್ಕಾಗಿ ಒಂದು ಲಕ್ಷ ರೂ. ಗಳ ಅನುದಾನ ಒದಗಿಸಲಾಗುವುದು ಎಂದು ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಭರವಸೆ ನೀಡಿದರು. ಅವರು ಗುರುವಾರ ವಿಟ್ಲ ಸಮೀಪದ ಪಡಿಬಾಗಿಲು ವಿದ್ಯಾಗಿರಿ ದ.ಕ.ಜಿ.ಪಂ. ಹಿ.ಪ್ರಾ. ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ, ಶಾಲಾ ವಾರ್ಷಿಕ ಸಂಚಿಕೆ ‘ಚಿಗುರು’ ಅನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಕೇಪು ಗ್ರಾ.ಪಂ. ಅಧ್ಯಕ್ಷ ತಾರಾನಾಥ ಆಳ್ವ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಿ, ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಬೇಕೆಂದರು.
ಜಿಲ್ಲಾ ಪಂಚಾಯತ್ ಸದಸ್ಯೆ ಜಯಶ್ರೀ ಕೋಡಂದೂರು, ತಾ.ಪಂ. ಸದಸ್ಯೆ ಕವಿತಾ ಸುಬ್ಬ ನಾಯ್ಕ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನವೀನ್ ಕುಮಾರ್ ಕೆ., ಸಂಗಮ ಯುವಕ ಮಂಡಲದ ಅಧ್ಯಕ್ಷ, ವಕೀಲ ಮಹೇಶ, ನಿವೃತ್ತ ಶಿಕ್ಷಕ ಲಿಂಗಪ್ಪ ಗೌಡ ಅಳಿಕೆ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ರೇಖಾ, ಮಾಜಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ದಂಬೆಕಾನ, ಜಿನಚಂದ್ರ ಜೈನ್ ಕುಕ್ಕೆಬೆಟ್ಟು, ನರಸಿಂಹ ಬಳ್ಳಾಲ್, ಮನೋಹರ ಆಚಾರ್ಯ, ಗಿರೀಶ ಆಚಾರ್ಯ, ಶಿಕ್ಷಕರು, ಹೆತ್ತವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳು ಮತ್ತು ಹಳೆ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್. ಬಾಲಕೃಷ್ಣ ಕಾರಂತ ಎರುಂಬು ಸ್ವಾಗತಿಸಿದರು. ಶಿಕ್ಷಕಿ ಪುಷ್ಪಾವತಿ ಕಾರ್ಯಕ್ರಮ ನಿರ್ವಹಿಸಿದರು. ಮುಖ್ಯೋಪಾಧ್ಯಾಯಿನಿ ಶಶಿಕಲಾ ಎನ್. ವರದಿ ಮಂಡಿಸಿದರು. ಮಲ್ಲಿಕಾ ಲಿಂಗಪ್ಪ ಗೌಡ ವಂದಿಸಿದರು.