ತಿರುವನಂತಪುರಂ: ಕೋವಿಡ್ 19 ಲಸಿಕೆ ಪ್ರಮಾಣಪತ್ರದಲ್ಲಿ ಇರುವ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೊವನ್ನು ತೆಗೆದುಹಾಕಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಕೇರಳ ಹೈಕೋರ್ಟ್, ಅರ್ಜಿದಾರರಿಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ. ಅಲ್ಲದೇ ಇದೊಂದು ರಾಜಕೀಯ ಪ್ರೇರಿತ ಮತ್ತು ಪ್ರಚಾರದ ಹಿತಾಸಕ್ತಿಯನ್ನೊಳಗೊಂಡ ಅರ್ಜಿಯಾಗಿದೆ ಎಂದು ಹೈಕೋರ್ಟ್ ಹೇಳಿದೆ.
ಇದನ್ನೂ ಓದಿ:ಪಾಕಿಸ್ಥಾನದಲ್ಲಿ ಹಿಂದೂ ದೇವಾಲಯಕ್ಕೆ ದಾಳಿ:ದುಷ್ಕರ್ಮಿಯನ್ನು ಹಿಡಿದು ಪ್ರತಿಭಟನೆ
ಯಾರೊಬ್ಬರು ಪ್ರಧಾನಿಯನ್ನು ಕಾಂಗ್ರೆಸ್ ಪಕ್ಷದ ಪ್ರಧಾನಿ ಅಥವಾ ಬಿಜೆಪಿ ಪ್ರಧಾನಿ ಅಥವಾ ಯಾವುದೇ ಪಕ್ಷದ ಪ್ರಧಾನಿ ಎಂದು ಹೇಳಲಾರರು. ಆದರೆ ಸಂವಿಧಾನದ ಪ್ರಕಾರ ಒಂದು ಬಾರಿ ಪ್ರಧಾನಿಯಾಗಿ ಆಯ್ಕೆಯಾದ ಮೇಲೆ ಅವರು ನಮ್ಮ ದೇಶದ ಪ್ರಧಾನಿ. ಅವರ ಹುದ್ದೆಗೆ ಪ್ರತಿಯೊಬ್ಬ ಪ್ರಜೆಯೂ ಗೌರವ ಹೊಂದಿರಬೇಕು ಎಂದು ಜಸ್ಟೀಸ್ ಪಿ.ವಿ.ಕುಂಞ್ ಕೃಷ್ಣನ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಅವರ ಸರ್ಕಾರದ ನೀತಿಗಳು ಮತ್ತು ಪ್ರಧಾನಿಯವರ ರಾಜಕೀಯ ನಿಲುವು ಭಿನ್ನವಾಗಿರಬಹುದು. ಆದರೆ ಇಂತಹ ಸಂದರ್ಭದಲ್ಲಿ ಜನರಲ್ಲಿ ನೈತಿಕ ಸ್ಥೈರ್ಯವನ್ನು ತುಂಬುವ ಸಂದೇಶ ನೀಡುವ ನಿಟ್ಟಿನಲ್ಲಿ ಲಸಿಕೆ ಪ್ರಮಾಣಪತ್ರಕ್ಕೆ ಪ್ರಧಾನಿಯವರ ಭಾವಚಿತ್ರವನ್ನು ಹಾಕಿರುವುದಕ್ಕೆ ಯಾರೊಬ್ಬರು ನಾಚಿಕೆಪಡಬೇಕಾಗಿಲ್ಲ ಎಂದು ಜಡ್ಜ್ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಈ ಅರ್ಜಿ ರಾಜಕೀಯ ಪ್ರೇರಿತವಾಗಿದೆ. ಇದೊಂದು ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯಲ್ಲ, ಬದಲಾಗಿ ಇದೊಂದು ಪ್ರಚಾರದ ಹಿನ್ನೆಲೆಯ ಅರ್ಜಿಯಾಗಿದೆ ಎಂದಿರುವ ಕೇರಳ ಹೈಕೋರ್ಟ್, ಅರ್ಜಿದಾರರು ಆರು ವಾರಗಳೊಳಗೆ ಕೇರಳ ಸ್ಟೇಟ್ ಲೀಗಲ್ ಸರ್ವೀಸಸ್ ಅಥಾರಿಟಿಗೆ ಒಂದು ಲಕ್ಷ ರೂಪಾಯಿಯನ್ನು ಠೇವಣಿ ಇಡಬೇಕು. ಕಾಲಮಿತಿಯೊಳಗೆ ದಂಡ ಪಾವತಿಸಲು ವಿಫಲರಾದರೆ ಅರ್ಜಿದಾರರ ಆಸ್ತಿಯನ್ನು ಮಾರಾಟ ಮಾಡಿ ಹಣವನ್ನು ಪಡೆಯಬೇಕು ಎಂದು ಕೋರ್ಟ್ ಆದೇಶ ನೀಡಿದೆ.