Advertisement

ದಾವೂದ್‌ ಇಬ್ರಾಹಿಂ ಹೆಸರಲ್ಲಿ ಕೋಟಿ ರೂ. ಬೇಡಿಕೆ; ಕೊಲೆ ಬೆದರಿಕೆ

06:49 AM Jan 30, 2019 | Team Udayavani |

ಬೆಂಗಳೂರು: ದೇಶದ ಮೋಸ್ಟ್‌ ವಾಟೆಂಡ್‌ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಸಹಚರರು ಎಂದು ಹೇಳಿಕೊಂಡು ನಗರದ ಉದ್ಯಮಿಯೊಬ್ಬರಿಗೆ ದುಷ್ಕರ್ಮಿಗಳು ವಾಟ್ಸ್‌ಆ್ಯಪ್‌ ಸಂದೇಶ ಕಳುಹಿಸಿ ಒಂದು ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದು, ಒಂದು ವೇಳೆ ಹಣ ಕೊಡಲು ನಿರಾಕರಿಸಿದರೆ ಇಡೀ ಕುಟುಂಬ ಸದಸ್ಯರನ್ನು ಹತ್ಯೆಗೈಯುವುದಾಗಿ ಬೆದರಿಕೆ ಹಾಕಿದ್ದಾರೆ.

Advertisement

ಈ ಸಂಬಂಧ ವಿವೇಕನಗರದ ನಿವಾಸಿ, ಉದ್ಯಮಿ ಅಶ್ವಿ‌ನಿ ಅಗರ್‌ವಾಲ್‌ ಎಂಬುವರು ವಿವೇಕನಗರ ಠಾಣೆಗೆ ದೂರು ದಾಖಲಿಸಿದ್ದಾರೆ. 57 ವರ್ಷದ ಅಶ್ವಿ‌ನಿ ಅಗರ್‌ವಾಲ್‌ ಅವರ ಮೊಬೈಲ್‌ ನಂಬರ್‌ನ ವಾಟ್ಸ್‌ಆ್ಯಪ್‌ಗೆ ಸಂದೇಶ ಕಳುಹಿಸಿದ ದುಷ್ಕರ್ಮಿಗಳು, “ನಾವು ದಾವೂದ್‌ ಇಬ್ರಾಹಿಂ ತಂಡದವರಾಗಿದ್ದು, ಮೂರು ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದೇವೆ. ಒಂದು ಕೋಟಿ ರೂ. ಹಣ ಕೊಡಬೇಕು.

ಇಲ್ಲವಾದರೆ ನಿಮ್ಮ ಸಹೋದರ ಪವನ್‌ನನ್ನು ಹತ್ಯೆಗೈಯುತ್ತೇವೆ. ಬಳಿಕ ನಿಮ್ಮ ಕುಟುಂಬ ಸದಸ್ಯರನ್ನು ಕೊಲ್ಲುತ್ತೇವೆ’ ಎಂದು ಸಂದೇಶ ಕಳುಹಿಸಿದ್ದಾರೆ. ಜ.27ರಂದು ಮಧ್ಯಾಹ್ನ ಮತ್ತೂಂದು ಸಂದೇಶ ಕಳುಹಿಸಿದ ಆರೋಪಿಗಳು, “ನಮ್ಮ ತಂಡದ ಸದಸ್ಯರು ನಿಮ್ಮ ಮನೆ ಬಳಿಯಿದ್ದು, ಮೊದಲು ಯಾರನ್ನು ಕೊಲೆ ಮಾಡಬೇಕೆಂದು ಗಮನಿಸುತ್ತಿದ್ದೇವೆ ಎಂದು ಬೆದರಿಕೆ ಹಾಕಿದ್ದಾರೆ. ಆತಂಕಗೊಂಡ ಅಶ್ವಿ‌ನಿ ಕೂಡಲೇ ದೂರು ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ ಪೊಲೀಸರು, ಸಂದೇಶ ಬಂದ ಮೊಬೈಲ್‌ ನಂಬರ್‌ನ ನೆಟ್‌ವರ್ಕ್‌ ಪರಿಶೀಲಿಸಿದಾಗ ಬೇಗೂರು ಬಳಿ ಅಪರಿಚಿತ ವ್ಯಕ್ತಿ ಇರುವುದು ಗೊತ್ತಾಗಿದೆ. ಈ ಆಧಾರದ ಮೇಲೆ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತ ಬೇಸಿಕ್‌ ಮೊಬೈಲ್‌ ಬಳಕೆ ಮಾಡುತ್ತಿದ್ದು, ಆತನಿಗೆ ವಾಟ್ಸ್‌ಆ್ಯಪ್‌ ಕುರಿತು ಮಾಹಿತಿಯೇ ಇಲ್ಲ ಎಂಬುದು ತಿಳಿದು ಬಂದಿದೆ.

ಹೀಗಾಗಿ ಸಂದೇಶ ಕಳುಹಿಸಿದ ಆರೋಪಿ ಬೇರೆಯವರ ಹೆಸರಿನಲ್ಲಿ ವಾಟ್ಸ್‌ಆ್ಯಪ್‌ ರಚಸಿಕೊಂಡು ಜೀವ ಬೆದರಿಕೆಯೊಡ್ಡಿದ್ದಾನೆ ಎಂದು ಪೊಲೀಸರು ಹೇಳಿದರು. ಹೆಚ್ಚಿನ ತನಿಖೆ ವೇಳೆ ಆರೋಪಿ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ತಲೆಮರೆಸಿಕೊಂಡಿರುವ ಮಾಹಿತಿಯಿದ್ದು, ಒಂದು ತಂಡವನ್ನು ಚಿತ್ತೂರಿಗೆ ಕಳುಹಿಸಲಾಗಿದೆ ಎಂದು ವಿವೇಕನಗರ ಪೊಲೀಸರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next