Advertisement

ವಿದೇಶದಲ್ಲಿ ವ್ಯಾಸಂಗಕ್ಕೆ 1 ಕೋಟಿ ರೂ. ಸಾಲ

11:58 AM Jan 11, 2017 | Team Udayavani |

ಬೆಂಗಳೂರು: ಸರ್ಕಾರದ ಸವಲತ್ತು ಪಡೆದು ವಿದೇಶದಲ್ಲಿ ವ್ಯಾಸಂಗ ಮಾಡುವವರು ಶಿಕ್ಷಣ ಮುಗಿದ ಬಳಿಕ ವಾಪಸಾಗಿ ತಾಯ್ನಾಡಿನ ಅಭಿವೃದ್ಧಿಗೆ ಸೇವೆ ಸಲ್ಲಿಸುವಂತೆ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಜೆ.ಹುಚ್ಚಪ್ಪ ಕಿವಿಮಾತು ಹೇಳಿದರು. ವಸಂತನಗರದ ಡಿ.ದೇವರಾಜ ಅರಸು ಭವನದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದೇಶದಲ್ಲಿ ವ್ಯಾಸಂಗಕ್ಕೆ ತೆರಳಲಿದ್ದ ಎಂಟು ಮಂದಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ನಿಗಮದಿಂದ ಸಾಲದ ಚೆಕ್‌ ವಿತರಿಸಿ ಅವರು ಮಾತನಾಡಿದರು. 

Advertisement

ಹಿಂದುಳಿದ ವರ್ಗಗಳ ಬಡ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ವ್ಯಾಸಂಗ ಮಾಡುವುದು ಕನಸಾಗಿತ್ತು. ಕಾಂಗ್ರೆಸ್‌ ಸರ್ಕಾರ ಬಂದ ಬಳಿಕ ಅರಿವು ಶಿಕ್ಷಣ ಯೋಜನೆಯಡಿ ಬಡ ಮಕ್ಕಳೂ ಕೂಡ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಲು ಅವಕಾಶ ಕಲ್ಪಿಸಿದೆ. ಈ ಯೋಜನೆಯಡಿ ಅವರ ವಿದ್ಯಾಭ್ಯಾಸಕ್ಕೆ ತಗಲುವ ಹಣಕಾಸಿನ ನೆರವು ನೀಡಲಾಗುತ್ತಿದೆ. ಶೇ.1 ರಿಂದ 2ರ ಬಡ್ಡಿದರಲ್ಲಿ ವಿದ್ಯಾರ್ಥಿಗಳಿಗೆ ಈ ಸಾಲ ನೀಡಲಾಗುತ್ತದೆ. ವಿದ್ಯಾರ್ಥಿಗಳು ವಿದೇಶದಲ್ಲಿ ಶಿಕ್ಷಣ ಮುಗಿಸಿ ಉದ್ಯೋಗಕ್ಕೆ ಸೇರಿದ ಬಳಿಕ ಅವರು ಸಾಲ ಮರುಪಾವತಿ ಮಾಡುತ್ತಾ ಹೋಗಬೇಕಾಗುತ್ತದೆ ಎಂದರು.  

ಸರ್ಕಾರದ ಸವಲತ್ತು ಪಡೆದು ವಿದೇಶದಲ್ಲಿ ವ್ಯಾಸಂಗಕ್ಕೆ ಹೋದವರು ಅಲ್ಲೇ ಉಳಿಯಬಾರದು. ಶಿಕ್ಷಣ ಮುಗಿಸಿ ಮಾತೃಭೂಮಿಗೆ ವಾಪಸ್ಸಾಗಿ ಸೇವೆ ಸಲ್ಲಿಸಬೇಕು. ಸರ್ಕಾರದ ಅರಿವು ಶಿಕ್ಷಣ ಯೋಜನೆಯನ್ನು ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಒಟ್ಟು 8 ವಿದ್ಯಾರ್ಥಿಗಳಿಗೆ ತಲಾ ಒಂದು ಕೋಟಿ ರೂ. ಸಾಲದ ಚೆಕ್‌ಗಳನ್ನು ವಿತರಿಸಲಾಯಿತು. ಈ ವೇಳೆ ನಿಗಮದ ಸದಸ್ಯರಾದ ಶಿವಕುಮಾರ್‌, ವೆಂಕಟರಮಣ, ಮುನಿರಾಜು, ಸಿದ್ದರಾಮಪ್ಪ, ಎಂ.ಸಿ ಏಕಾಂತಪ್ಪ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next