Advertisement

ರಾಜಸ್ಥಾನ್‌- ಹೈದರಾಬಾದ್‌ ಕಾದಾಟ

09:06 AM Apr 28, 2019 | keerthan |

ಜೈಪುರ: ಗುರುವಾರದ ಪಂದ್ಯದಲ್ಲಿ ಕೆಕೆಆರ್‌ ವಿರುದ್ಧ ರೋಚಕ 3 ವಿಕೆಟ್‌ಗಳ ಗೆಲುವು ಸಾಧಿಸಿದ ರಾಜಸ್ಥಾನ್‌ ರಾಯಲ್ಸ್‌ ತಂಡವು ಸನ್‌ರೈಸರ್ ಹೈದರಾಬಾದ್‌ ವಿರುದ್ಧ ಮರು ಪಂದ್ಯಕ್ಕೆ ಸಜ್ಜಾಗಿದೆ. ಶನಿವಾರ ಜೈಪುರದಲ್ಲಿ ಇತ್ತಂಡಗಳು ಸೆಣಸಲಿದೆ.

Advertisement

ಕೂಟದ ಮೊದಲ ಮುಖಾಮುಖೀಯಲ್ಲಿ ಹೈದರಾಬಾದ್‌ ತಂಡ ರಾಜಸ್ಥಾನ್‌ ವಿರುದ್ಧ 5 ವಿಕೆಟ್‌ಗಳ ಗೆಲುವು ಸಾಧಿಸಿತ್ತು. ಈ ಸೋಲಿನ ಸೇಡನ್ನು ತವರಿನಲ್ಲಿ ತೀರಿಸಿಕೊಳ್ಳಲು ರಾಜಸ್ಥಾನ್‌ ಕಾದು ಕುಳಿತಿದೆ. ಆದರೆ ಇತ್ತಂಡಗಳಲ್ಲಿ ಕಾಡುತ್ತಿರುವ ಸಮಸ್ಯೆ ಎಂದರೆ ಆಂಗ್ಲ ಆಟಗಾರರ ಅಲಭ್ಯತೆ. ರಾಜಸ್ಥಾನ್‌ ತಂಡದಲ್ಲಿ 3 ಆಂಗ್ಲ ಆಟಗಾರರು ಮತ್ತು ಹೈದರಾಬಾದ್‌ನಲ್ಲಿ ಓರ್ವ ಆಟಗಾರನ ಅಲಭ್ಯತೆಯಿಂದ ಪಂದ್ಯಕ್ಕೆ ಭಾರೀ ಹಿನ್ನಡೆ ಎದುರಾಗಲಿದೆ.

ಸಂಕಷ್ಟದಲ್ಲಿ ರಾಜಸ್ಥಾನ್‌
ನಾಯಕತ್ವದ ಬದಲಾವಣೆಯಿಂದ ಗೆಲುವಿನ ಹಳಿಯೇರಿರುವ ರಾಜಸ್ಥಾನ್‌ ತಂಡಕ್ಕೆ ಭಾರೀ ಆಘಾತ ಎದುರಾಗಿದೆ. ತಂಡದ ಪ್ರಮುಖ ಆಟಗಾರರಾದ ಜೋಫ್ರಾ ಆರ್ಚರ್‌, ಬೆನ್‌ ಸ್ಟೋಕ್ಸ್‌, ಜೋಸ್‌ ಬಟ್ಲರ್‌ ವಿಶ್ವಕಪ್‌ ತಯಾರಿಗಾಗಿ ಇಂಗ್ಲೆಂಡಿಗೆ ತೆರಳಲಿದ್ದಾರೆ. ಗುರುವಾರದ ಪಂದ್ಯದಲ್ಲಿ ಕೆಕೆಆರ್‌ ವಿರುದ್ಧ ಸೋಲುವ ಸ್ಥಿತಿ ವೇಳೆ ಭರ್ಜರಿ ಬ್ಯಾಟಿಂಗ್‌ ನಡೆಸಿದ ಆರ್ಚರ್‌ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಇವರ ಅನುಪಸ್ಥಿತಿ ತಂಡಕ್ಕೆ ಬಾರಿ ನಷ್ಟ ಉಂಟುಮಾಡಲಿದೆ. ಇನ್ನು ಇವರ ಸ್ಥಾನ ತುಂಬ ಬಲ್ಲ ಆಟಗಾರ ಯಾರು ಎಂಬುದೊಂದು ಪ್ರಶ್ನೆ.

ರಾಜಸ್ಥಾನ್‌ ಬ್ಯಾಟಿಂಗ್‌ನಲ್ಲಿ ಸ್ಥಿರ ಪ್ರದರ್ಶನವಿಲ್ಲ. ಪಂಜಾಬ್‌ ವಿರುದ್ಧದ ಮೊದಲ ಪಂದ್ಯದಲ್ಲಿ ಶತಕ ಬಾರಿಸಿ ಸಂಭ್ರಮಿಸಿದ್ದ ಸಂಜು ಸ್ಯಾಮ್ಸನ್‌ ಅನಂತರದ ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ನಾಯಕ ಸ್ಮಿತ್‌, ಆಶ್ಟನ್ ಟರ್ನರ್‌, ಸುವರ್ಟ್‌ ಬಿನ್ನಿ ಕ್ರೀಸ್‌ ಆಕ್ರಮಿಸಲು ಪರದಾಡುತ್ತಿದ್ದಾರೆ.

ಬೌಲಿಂಗ್‌ನಲ್ಲಿ ಈ ಬಾರಿಯ ದುಬಾರಿ ಬೆಲೆಯ ಬೌಲರ್‌ ಜಯ್‌ದೇವ್‌ ಉನಾದ್ಕತ್‌ ದುಬಾರಿ ಯಾಗುತ್ತಿರುವುದು ತಂಡಕ್ಕೆ ಹಿನ್ನಡೆಯಾಗಿದೆ. ಉಳಿದಂತೆ ಕನ್ನಡಿಗರಾದ ಶ್ರೇಯಸ್‌ ಗೋಪಾಲ್‌, ಕೆ. ಗೌತಮ್‌, ಧವಳ್‌ ಕುಲಕರ್ಣಿ ಅವರಿಂದಲೂ ಉತ್ತಮ ಪ್ರದರ್ಶನ ಕಂಡು ಬಂದಿಲ್ಲ. ಇವೆಲ್ಲವೂ ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ.

Advertisement

ಬೇರ್‌ಸ್ಟೋ ಅಲಭ್ಯ
ವಾರ್ನರ್‌- ಬೇರ್‌ ಸ್ಟೋ ಅವರ ಪ್ರಚಂಡ ಓಪನಿಂಗ್‌ ಹೈದರಾಬಾದ್‌ನ ಈ ವರೆಗಿನ ಆಟದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಆದರೀಗ ಬೇರ್‌ ಸ್ಟೊ ವಿಶ್ವಕಪ್‌ ತಯಾರಿಗಾಗಿ ಇಂಗ್ಲೆಂಡಿಗೆ ತೆರಳಲಿದ್ದು ವಾರ್ನರ್‌ಗೆ ತಕ್ಕ ಜತೆ ದೊರೆಯುವುದು ಕಷ್ಟವಾಗಿದೆ. ಕೆಲ ದಿನಗಳಲ್ಲಿ ವಾರ್ನರ್‌ ಕೂಡ ತವರಿಗೆ ಮರಳಲಿದ್ದು ತಂಡಕ್ಕೆ ತೀವ್ರ ಹೊಡೆತ ಬೀಳುವ ಲಕ್ಷಣಗಳಿವೆ. ಫ್ಲೇ ಆಫ್ಗೇರಲು ಹರಸಾಹಸ  ಪಡುತ್ತಿರುವ ಹೈದರಾಬಾದ್‌ಗೆ ಈ ಹಂತದಲ್ಲೇ ಇಬ್ಬರು ಆಟಗಾರರು ಹೊರನಡೆದಿರುವುದು ಆತ್ಮ ವಿಶ್ವಾಸ ಕುಗ್ಗಿಸಿದಂತಾಗಿದೆ.

ಹೈದರಾಬಾದ್‌ ಉತ್ತಮ ಓಪನಿಂಗ್‌ ಸಿಕ್ಕರೂ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಮೇಲೆ ಹೆಚ್ಚು ನಂಬಿಕೆ ಇರಿಸುವಂತಿಲ್ಲ. ಯಾಕೆಂದರೆ ಯಾರೊಬ್ಬರೂ ಹೆಚ್ಚು ಕಾಲ ಕ್ರಿಸ್‌ ಆಕ್ರಮಿಸುತ್ತಿಲ್ಲ. ವಿಜಯ್‌ ಶಂಕರ್‌, ಯೂಸುಫ್ ಪಠಾಣ್‌ ಇನ್ನೂ ಫಾರ್ಮ್ಗೆ ಮರಳದಿರುವುದು ತಂಡಕ್ಕೆ ಹಿನ್ನಡೆಯಾಗಿದೆ. ಬ್ಯಾಟಿಂಗ್‌ನಲ್ಲಿ ಸ್ಥಿರತೆಯಿಲ್ಲದಿದ್ದರೂ ಬೌಲಿಂಗ್‌ನಲ್ಲಿ ಹೈದರಾಬಾದ್‌ ಬಲಿಷ್ಠವಾಗಿದೆ. ರಶೀದ್‌ ಖಾನ್‌, ಮೊಹಮ್ಮದ್‌ ನಬಿ, ಸಂದೀಪ್‌ ಶರ್ಮ, ಭುವನೇಶ್ವರ್‌ ಕುಮಾರ್‌ ಅವರನ್ನೊಳಗೊಂಡ ಬೌಲಿಂಗ್‌ ಪಡೆ ಘಾತುಕವಾಗಿರುವುದು ತಂಡದ ಪ್ಲಸ್‌ ಪಾಯಿಂಟ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next