Advertisement

ಬಂಡೆ, ಚಪ್ಪಡಿಕಲ್ಲು ಬೇಕಿಲ್ಲ: ಅಶೋಕ್‌

11:39 AM Oct 28, 2020 | Suhan S |

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಕೆಂಗಲ್‌ ಹನುಮಂತಯ್ಯನವರು ಆ ಕಾಲದಲ್ಲೇ ವಿಧಾನಸೌಧಕ್ಕೆ ಎಷ್ಟು ಬೇಕೋ ಅಷ್ಟು ಚಪ್ಪಡಿ, ಕಲ್ಲುಗಳನ್ನು ಹಾಕಿದ್ದಾರೆ. ಹಾಗಾಗಿ ಡಿ.ಕೆ. ಶಿವಕುಮಾರ್‌ ನಿನ್ನ ಅವಶ್ಯಕತೆ ಇಲ್ಲ ಎಂದು ಸಚಿವ ಆರ್‌. ಅಶೋಕ್‌ ವಾಗ್ಧಾಳಿ ನಡೆಸಿದರು.

Advertisement

ರಾಜರಾಜೇಶ್ವರಿನಗರ ಕ್ಷೇತ್ರದ ಲಗ್ಗೆರೆ ವಾರ್ಡ್‌ನಲ್ಲಿ ಮಂಗಳವಾರ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ರೋಡ್‌ ಶೋ ನಡೆಸಿದ ಅವರು, ವಿಧಾನಸೌಧಕ್ಕೆ ಚಪ್ಪಡಿ ಕಲ್ಲು ಆಗುತ್ತಾರಂತೆ ಡಿ.ಕೆ. ಅಣ್ಣ. ನಮ್ಮ ಕೆಂಗಲ್‌ ಹನುಮಂತಯ್ಯ ಅವರು ಎಷ್ಟು ಬೇಕೋ ಅಷ್ಟು ಮೆಟ್ಟಿಲು, ಚಪ್ಪಡಿಗಳನ್ನು ಹಾಕಿದ್ದಾರೆ. ನಿನ್ನ ಅವಶ್ಯಕತೆ ಇಲ್ಲ. ನೀನು ಬೇಡವೂ ಬೇಡ. ನಿನ್ನ ಬಂಡೆ, ಚಪ್ಪಡಿ,ಕಲ್ಲು ಬೇಡ. ಅವರು ಜಲ್ಲಿ ಕಲ್ಲು ಆಗುತ್ತಾರಂತೆ. ಯಾರಿಗಾದರೂ ಒಡೆಯುವುದಕ್ಕೋ? ಸದ್ಯ ಕಾಂಗ್ರೆಸ್‌ನವರೇ ಹೊಡೆ ದಾಡಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಅವರ ಮನೆಗೆ ಎರಡು ಲೋಡ್‌ ಕಲ್ಲು ಕಳುಹಿಸಲಿ ಕಾರ್ಯಕರ್ತರಿಗಾಗಿ ಎಂದು ವ್ಯಂಗ್ಯವಾಡಿದರು.

ಇನ್ನೂ ಕೂಸೇ ಹುಟ್ಟಿಲ್ಲ. ಆಗಲೇ ಮುಖ್ಯಮಂತ್ರಿಯ ಕನಸು ಕಾಣುತ್ತಿದ್ದಾರೆ. ಇನ್ನು 15 ವರ್ಷ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದಿಲ್ಲ. ಹಾಗಿದ್ದರೂ ನಾನು ಮುಖ್ಯಮಂತ್ರಿ, ನೀನು ಮುಖ್ಯಮಂತ್ರಿ ಎಂದು ಹೇಳಿಕೊಳ್ಳಲಾರಂಭಿಸಿದ್ದಾರೆ. ಇದೆಲ್ಲಾ ತಿರುಕನ ಕನಸು ಎಂದು ಲೇವಡಿ ಮಾಡಿದರು.

ಮಂಡ್ಯ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕರ್ನಾಟಕದ ನಿಜವಾದ ಜೋಡೆತ್ತುಗಳು ಎಂದು ಇಬ್ಬರು ಹೇಳಿಕೊಂಡಿದ್ದರು. ಅವರಿಬ್ಬರೂ ಈಗ ಲಗ್ಗೆರೆಯಲ್ಲೇ ಬಿದ್ದಿದ್ದಾರೆ. ಜೋಡೆತ್ತುಗಳು ಕುಂಟೆತ್ತು ಆಗೋಯ್ತು. ಪಕ್ಕದಲ್ಲಿದ್ದುಕೊಂಡೇ ಚೂರಿ ಹಾಕಿದ್ದಾಗಿದೆ. ಉಪಚುನಾವಣೆ ಬಳಿಕ ಜನರೇ ಆ ಜೋಡೆತ್ತುಗಳ ಕೊಂಬನ್ನು ತೆಗೆಯುತ್ತಾರೆ. ಅಭಿವೃದ್ಧಿಗಾಗಿ ಮುನಿರತ್ನ ಅವರನ್ನು ಬೆಂಬಲಿಸಬೇಕು. ತಿರುಕನ ಕನಸು ಕಾಣುತ್ತಿರುವ ಡಿ.ಕೆ.ಗಲ್ಲ. ನಿಜವಾದ ಕುರುಕ್ಷೇತ್ರದ ಹೀರೋ ಮುನಿರತ್ನಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಕೋವಿಡ್ ವೇಳೆ ಮುನಿರತ್ನ ಅವರು ಜನರಿಗೆ ದಿನಸಿ, ಅಗತ್ಯ ವಸ್ತು ಪೂರೈಸಿ ಸ್ಪಂದಿಸಿದರು. ಆದರೆ ದೊಡ್ಡ ಬಂಡೆ (ಡಿ.ಕೆ. ಶಿವಕುಮಾರ್‌), ಚಿಕ್ಕ ಬಂಡೆ (ಡಿ.ಕೆ. ಸುರೇಶ್‌) ಏನಾದರೂ ಕೊಟ್ಟಿದ್ದಾರೆಯೇ. ಅಕ್ಕಿ, ಬೇಳೆ ಇರಲಿ, ನೀರು ಕೊಡಲು ಯೋಗ್ಯತೆ ಇಲ್ಲದವರು ಯಾವ ಮುಖ ಹೊತ್ತುಕೊಂಡು ಮತ ಕೇಳಲು ಬರುತ್ತಾರೆ ಎಂದು ಕಿಡಿಕಾರಿದರು. ಸಚಿವ ಕೆ.ಗೋಪಾಲಯ್ಯ, ಕೆ.ಸಿ.ನಾರಾಯಣ  ಗೌಡ, ನಟಿ ಶ್ರುತಿ ಇತರರು ರೋಡ್‌ ಶೋನಲ್ಲಿ ಪಾಲ್ಗೊಂಡಿದ್ದರು.

Advertisement

ಸ್ಥಿರ ಸರ್ಕಾರ ಸದೃಢ ನಾಯಕತ್ವ :  ಉಪಚುನಾವಣೆ ಹಿನ್ನೆಲೆಯಲ್ಲಿ ವಕೀಲರೊಂದಿಗೆ ಮಂಗಳವಾರ ಸಂವಾದ ನಡೆಸಿದ ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ, ರಾಜ್ಯದಲ್ಲಿ ಸ್ಥಿರ ಸರ್ಕಾರ ಹಾಗೂ ಸದೃಢ ನಾಯಕತ್ವ ನೀಡುವ ಶಕ್ತಿ ಬಿಜೆಪಿಗೆ ಮಾತ್ರ ಇದೆ. ಸ್ವಾರ್ಥ ರಾಜಕಾರಣ ಮಾಡುವ ಜಗಳಗಂಟ ಸಮ್ಮಿಶ್ರ ಸರ್ಕಾರಗಳಿಂದ ರಾಜ್ಯಕ್ಕೆ ಒಳ್ಳೆಯದಾಗದು ಎಂದು ಹೇಳಿದರು. ಸಮ್ಮಿಶ್ರ ಸರ್ಕಾರವಿದ್ದಾಗ ರಾಜ್ಯದಲ್ಲಿ ರಾಜಕೀಯ ಮತ್ತು ನಾಯಕತ್ವದ ಶೂನ್ಯತೆ ಉಂಟಾಗಿತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸುಧಾರಣೆಗಳ ಪರ್ವ ಶುರುವಾಗಿದೆ. ಭೂ ಸುಧಾರಣೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಕೈಗಾರಿಕೆ ಸ್ಥಾಪನೆಗಿದ್ದ ಅಡ್ಡಿಗಳ ನಿವಾರಣೆ, ಕೌಶಲ್ಯಾಧಾರಿತ ಉದ್ಯೋಗ ಸೃಷ್ಟಿಗೆ ಒತ್ತು, ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಸೇರಿದಂತೆ ಹಲವು ಸುಧಾರಣಾ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next