ಟಿ.ದಾಸರಹಳ್ಳಿ/ಕೆಂಗೇರಿ; ಇದೊಂದೆ ಜನ್ಮದಲ್ಲಲ್ಲ ಏಳೇಳು ಜನ್ಮದಲ್ಲೂ ಡಿ.ಕೆ ಶಿವಕುಮಾರ್ ಅವರಿಗೆ ನಾನು ಸರಿಸಾಟಿಯಾಗಲು ಸಾಧ್ಯವೇ ಇಲ್ಲ ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಲೇವಡಿ ಮಾಡಿದರು.
ಕ್ಷೇತ್ರದ ಜಾಲಹಳ್ಳಿ, ಗೊರಗುಂಟೆಪಾಳ್ಯ ಸೇರಿ ವಿವಿಧೆಡೆ ಮನೆ ಮನೆ ಪ್ರಚಾರ ನಡೆಸುವ ವೇಳೆ ಸುದ್ದಿಗಾರರ ಜತೆ ಮಾತನಾಡಿ, ಡಿಕೆಶಿ ಅವರ ಮಾತು ಸತ್ಯ. ದೇವರು ನನಗೆ ಏಳು ಜನ್ಮ ಕರುಣಿಸಿದರೂ ಅವರಿಗೆ ನಾನು ಸರಿ ಸಮನಾಗಲು ಸಾಧ್ಯವಿಲ್ಲ. ಅವರೆಷ್ಟು ದೊಡ್ಡವರು, ಅವರ ಮುಂದೆ ನಾನು ತೀರಾ ಸಣ್ಣವನು. ಇಂದು ಅವರು ಯಾವ ಮಟ್ಟದಲ್ಲಿದ್ದಾರೆ. ಆ ಮಟ್ಟಕ್ಕೆ ತಲುಪಲು ನನ್ನಿಂದ ಎಂದಿಗೂ ಸಾಧ್ಯವಿಲ್ಲ. ಅವರೊಂದಿಗೆ ನನ್ನನ್ನೂ ಹೋಲಿಕೆ ಮಾಡುವುದೇ ತಪ್ಪು ಎಂದು ಡಿಕೆಶಿಗೆ ಟಾಂಗ್ ಕೊಟ್ಟರು.
ಜೋಡೆತ್ತುಗಳು ಬೇರೆ ಬೇರೆ: ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ ಅಂತೆಯೇ ಮಿತ್ರರೂ ಇಲ್ಲ. ಇದಕ್ಕೆ ಎಚ್.ಡಿ.ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಉದಾಹರಣೆ ಎಂದರು. ಜೋಡೆತ್ತುಗಳಂತೆ ಮಂಡ್ಯ ಲೋಕಸಭಾ ಚುನಾವಣೆ ಹಾಗೂ ಸಮ್ಮಿಶ್ರ ಸರ್ಕಾರದಲ್ಲಿ ಕಾರ್ಯನಿರ್ವಹಿಸಿದ್ದ ಎಚ್ ಡಿಕೆ ಡಿಕೆಶಿ ಸದ್ಯ ಬೇರೆಯಾಗಿದ್ದಾರೆ. ವಿರೋಧಿಗಳು ನನ್ನ ಬಗ್ಗೆ ಎಷ್ಟೇ ಅಪಪ್ರಚಾರ ಮಾಡಿದರೂ ಕ್ಷೇತ್ರದ ಪ್ರಜ್ಞಾವಂತ ಮತದಾರರು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪಾಲಿಕೆ ಮಾಜಿ ಸದಸ್ಯೆ ಆಶಾ ಸುರೇಶ್, ಬಿಜೆಪಿ ನಾಯಕಿ ಮಂಜುಳ ಇತರರಿದ್ದರು.
ಸ್ವಾಭಿಮಾನಕ್ಕೆ ಧಕ್ಕೆಯಾಗಿ ರಾಜಿನಾಮೆ ನೀಡಿದೆ : ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಿಎಂ ಬಳಿ ಹಲವು ಬಾರಿ ಕ್ಷೇತ್ರದ ಅಭಿವೃದ್ಧಿ, ಯೋಜನೆಗಳ ಮಂಜೂರಾತಿಗಾಗಿ ಮನವಿ ಮಾಡಿದಾಗ ಅನುಮತಿ ಸಿಗದಿದ್ದಾಗ ಸ್ವಾಭಿಮಾನಕ್ಕೆ ದಕ್ಕೆಯುಂಟಾಗಿ ರಾಜೀನಾಮೆ ನೀಡಬೇಕಾಯಿತು. ಬಿಜೆಪಿ ಸೇರ್ಪಡೆಯಿಂದ ಮುಖ್ಯಮಂತ್ರಿ ಯಡಿಯೂರಪ್ಪನವರು ಕ್ಷೇತ್ರದ ಅಭಿವೃದ್ಧಿಗಾಗಿ ಸುಮಾರು 680 ಕೋಟಿ ಅನುದಾನವನ್ನು ನೀಡಿದ್ದಾರೆ. ಗೊರಗುಂಟೆಪಾಳ್ಯದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಯೋಜನೆಗೆ ಅನುಮತಿ ನೀಡಿದ್ದು, ಹಲವಾರು ಅಭಿವೃದ್ಧಿ ಕಾಮಗಾರಿಗೆ ಅನುಮತಿ ಸಿಕ್ಕಿದೆ ಎಂದು ಮುನಿರತ್ನ ತಿಳಿಸಿದರು.