ಲಕ್ನೋ : ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣಾ ಕಾವು ಏರಿದ್ದು, ಪ್ರಮುಖ ನಾಯಕರ ಪಕ್ಷಾಂತರ ಮುಂದುವರೆದಿದ್ದು, ಮಾಜಿ ಕೇಂದ್ರ ಸಚಿವ ಮತ್ತು ಉತ್ತರ ಪ್ರದೇಶದ ಕಾಂಗ್ರೆಸ್ ಹಿರಿಯ ನಾಯಕ
ರತನ್‌ಜಿತ್ ಪ್ರತಾಪ್ ನಾರಾಯಣ್ ಸಿಂಗ್ ಅವರು ಮಂಗಳವಾರ ಬಿಜೆಪಿಗೆ ಸೇರ್ಪಡೆಯಾಗಿರುವುದಾಗಿ ಘೋಷಿಸಿದ್ದಾರೆ
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಕೆಲಸ ಮಾಡುವುದಾಗಿ ಆರ್‌ಪಿಎನ್ ಸಿಂಗ್ ಹೇಳಿಕೆ ನೀಡಿದ್ದಾರೆ.
ಆರ್‌ಪಿಎನ್ ಸಿಂಗ್ ಅವರ ತವರು ನೆಲ ಪದ್ರೌನಾ ಕ್ಷೇತ್ರವಾಗಿದ್ದು, ಇತ್ತೀಚೆಗಷ್ಟೇ ಬಿಜೆಪಿಯಿಂದ ಸಮಾಜವಾದಿ ಪಕ್ಷಕ್ಕೆ ಜಿಗಿದ ಸ್ವಾಮಿ ಪ್ರಸಾದ್ ಮೌರ್ಯ ವಿರುದ್ಧ ಪ್ರಬಲ ಅಭ್ಯರ್ಥಿಯಾಗುವ ಸಾಧ್ಯತೆಯಿದೆ. ಸಿಂಗ್ ಅವರು ಇಂದು ಬೆಳಿಗ್ಗೆ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರು. ಹಲವಾರು ವರ್ಷಗಳ ಕಾಲ ಪಕ್ಷಕ್ಕೆ ದುಡಿದಿದ್ದ ಸಿಂಗ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದರು.
ಕುಶಿನಗರದ ಸೈಂತ್ವಾರ್ ರಾಜಮನೆತನದ ವಂಶಸ್ಥರಾದ ಆರ್‌ಪಿಎನ್ ಸಿಂಗ್ ಕಳೆದ ಚುನಾವಣೆಯಲ್ಲಿ ಯುಪಿಯ ಪದ್ರೌನಾ ಕ್ಷೇತ್ರದಿಂದ ಸೋತಿದ್ದರು. ಇತ್ತೀಚೆಗಷ್ಟೇ ಬಿಜೆಪಿಯಿಂದ ಜಿಗಿದಿದ್ದ ಎಸ್‌ಪಿಯ ಸ್ವಾಮಿ ಪ್ರಸಾದ್ ಮೌರ್ಯ ವಿರುದ್ಧ ಇದೇ ಕ್ಷೇತ್ರದಿಂದ ಕಣಕ್ಕಿಳಿಯುವ ಎಲ್ಲಾ ಸಾಧ್ಯತೆ ಇದೆ.
ಕುಶಿನಗರ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಸಿಂಗ್ ಅವರನ್ನು ಸೆಪ್ಟೆಂಬರ್ 2020 ರಲ್ಲಿ,ಎಐಸಿಸಿ ಜಾರ್ಖಂಡ್ ಉಸ್ತುವಾರಿಯಾಗಿ ನೇಮಕ ಮಾಡಿತ್ತು.