ರಾಂಚಿ: ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಆಟಗಾರ ರೋಹಿತ್ ಶರ್ಮಾ ಶತಕ ಬಾರಿಸಿ ಭಾರತ ತಂಡವನ್ನು ಆಧರಿಸಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾದ ಲೆಕ್ಕಚಾರ ತಲೆಕೆಳಗಾಗುವಂತೆ ಮಾಡಿದ್ದು ಆಫ್ರಿಕನ್ ವೇಗಿಗಳು. ಕಾಗಿಸೋ ರಬಾಡ ಆರಂಭದಲ್ಲಿ ಮಯಾಂಕ್ ಅಗರ್ವಾಲ್ ಮತ್ತು ಚೇತೇಶ್ವರ್ ಪೂಜಾರ ವಿಕೆಟ್ ಪಡೆದರು. ನಾಯಕ ಕೊಹ್ಲಿ ಕೂಡಾ ಕೇವಲ 12 ರನ್ ಗಳಿಸಿ ನೋರ್ಜೆಗೆ ವಿಕೆಟ್ ಒಪ್ಪಿಸಿದರು.
39 ರನ್ ಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾವನ್ನು ಆಧರಿಸಿದ್ದು ರೋಹಿತ್ ಶರ್ಮಾ ಮತ್ತು ಉಪನಾಯಕ ಅಜಿಂಕ್ಯ ರಹಾನೆ. ಆರಂಭದಲ್ಲಿ ನಿಧಾನವಾಗಿ ಇನ್ನಿಂಗ್ಸ್ ಕಟ್ಟಿದ ರೋಹಿತ್ ನಂತರ ಸಿಡಿದರು. ಡೇನ್ ಪೀಟ್ ಎಸೆತವನ್ನು ಲಾಂಗ್ ಆಫ್ ಗೆ ಸಿಕ್ಸ್ ಅಟ್ಟಿ ಶತಕದ ಸಂಭ್ರಮ ಪಟ್ಟರು.
ರೋಹಿತ್ ಗೆ ಉತ್ತಮ ಸಾಥ್ ನೀಡಿದ ಅಜಿಂಕ್ಯ ರಹಾನೆ ಮತ್ತೊಂದು ಅರ್ಧಶತಕ ಬಾರಿಸಿದರು.
48 ಓವರ್ ಆಟದ ಬಳಿಕ ತಂಡದ ಮೊತ್ತ ಮೂರು ವಿಕೆಟ್ ನಷ್ಟಕ್ಕೆ 195 ರನ್ ಆಗಿದ್ದು, ರಹಾನೆ 69 ಮತ್ತು ರೋಹಿತ್ 103 ರನ್ ಗಳಿಸಿ ಆಡುತ್ತಿದ್ದಾರೆ.