ಚೆನ್ನೈ : ಕಾಮಾಂಧ ಯುವಕನೊಬ್ಬ ಮಹಿಳಾ ಬೋಗಿಗೆ ನುಗ್ಗಿ ಮಹಿಳೆಯೊಬ್ಬಳ ಮೇಲೆ ಹಲ್ಲೆ ನಡೆಸಿ ಅತ್ಯಾಚಾರ ಯತ್ನಿಸಿದ್ದು, ಆರ್‌ಪಿಎಫ್ ಪೊಲೀಸ್ ಓರ್ವರ ಸಮಯ ಪ್ರಜ್ಞೆ ಮತ್ತು ಸಾಹಸದಿಂದ ಯುವತಿಯ ಪ್ರಾಣ ಮತ್ತು ಮಾನ ಉಳಿದಿದೆ. ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಚಿಂತಾದ್ರಿ ಪೇಟ್ ಮತ್ತು ಪಾರ್ಕ್ ನಡುವೆ ಚಲಿಸುತ್ತಿದ್ದ ರೈಲಿನ ಮಹಿಳಾ ಬೋಗಿಯಲ್ಲಿ ರಾತ್ರಿ 11
.45 ರ ವೇಳೆ ಸತ್ಯರಾಜ್ ಎಂಬ 26 ರ ಹರೆಯದ ಕಾಮಾಂಧ ಯುವಕ ಯುವತಿಯ ಮೇಲೆ ಎರಗಿ ಹೇಯ ಕೃತ್ಯಕ್ಕೆ ಮುಂದಾಗಿದ್ದ, ಈ ವೇಳೆ ಯುವತಿ ಕಿರುಚಿಕೊಂಡಿದ್ದಾರೆ.
ಪಕ್ಕದ ಬೋಗಿಯಲ್ಲಿ ಆರ್‌ಪಿಎಫ್ ಪೊಲೀಸ್ ಕೆ.ಶಿವಾಜಿ ಅವರು ಕೂಗು ಕೇಳಿಸಿಕೊಂಡಿದ್ದಾರೆ. ಅದಾಗಲೇ ರೈಲು ಚಲಿಸುತ್ತಿತ್ತು. ಕಂಪಾರ್ಟ್ ಮೆಂಟ್ ದಾಟುವುದು ಅಸಾಧ್ಯವಾಗಿತ್ತು. ಆದರೂ ಪ್ರಾಣ ಪಣಕ್ಕಿಟ್ಟು ಕೆಳಗೆ ಜಿಗಿದ ಶಿವಾಜಿ ಅವರು ಪಕ್ಕದ ಬೋಗಿಗೆ ನುಗ್ಗಿ ಹೇಯ ಕೃತ್ಯ ತಡೆದಿದ್ದಾರೆ.
ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಶಿವಾಜಿ ಅವರು ಸಮಯಪ್ರಜ್ಞೆ ಮೆರೆಯದಿದ್ದರೆ ಯುವತಿಯ ಮೇಲೆ ಹೇಯ ಕೃತ್ಯ ನಡೆದೇ ಹೋಗುತ್ತಿತ್ತು.
ಯುವತಿಯ ತುಟಿಗಳಲ್ಲಿ ರಕ್ತ ಸೋರುತ್ತಿತ್ತು ಮತ್ತು ಬಟ್ಟೆಗಳು ಹರಿದ ಸ್ಥಿತಿಯಲ್ಲಿದ್ದವು . ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿ ಆರೋಪಿಯ ವಿರುದ್ಧ ದೂರು ದಾಖಲಿಸಿದ್ದು, ಪೊಲೀಸರು ಬಂಧಿತ ಸತ್ಯರಾಜ್‌ನ ವಿಚಾರಣೆ ನಡೆಸುತ್ತಿದ್ದಾರೆ.
ಸತ್ಯರಾಜ್ ಕೃತ್ಯ ಎಸಗುವ ವೇಳೆ ಮದ್ಯ ಸೇವನೆ ಮಾಡಿದ್ದ ಎಂದು ಪೊಲೀಸರು ತಿಳಸಿದ್ದು, ಆತ ವಾಚ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದ.
25 ರ ಹರೆಯದ ಯುವತಿ ರಾತ್ರಿ ಕೆಲಸ ಮುಗಿಸಿ ಮನೆಗೆ ರೈಲಿನಲ್ಲಿ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.
ಸಾಹಸ ತೋರಿದ ಆರ್‌ಪಿಎಫ್ ಸಿಬಂದಿ ಶಿವಾಜಿ ಅವರಿಗೆ ಇಲಾಖೆ 5 ಸಾವಿರ ರೂಪಾಯಿ ಬಹುಮಾನ ನೀಡಿದೆ.