Advertisement

ಇಂಗ್ಲೆಂಡನ್ನು ಮಣಿಸಿದ ರಹಾನೆ ಪಡೆ

03:45 AM Jan 13, 2017 | Team Udayavani |

ಮುಂಬಯಿ: ಅಮೋಘ ಚೇಸಿಂಗ್‌ ನಡೆಸಿದ ಅಜಿಂಕ್ಯ ರಹಾನೆ ನೇತೃತ್ವದ ಭಾರತ “ಎ’ ತಂಡ ದ್ವಿತೀಯ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್‌ ಇಲೆವೆನ್‌ ವಿರುದ್ಧ 6 ವಿಕೆಟ್‌ ಅಂತರದ ಭರ್ಜರಿ ಜಯ ಸಾಧಿಸಿದೆ. 

Advertisement

ಗುರುವಾರ “ಬ್ರೆಬೋರ್ನ್ ಸ್ಟೇಡಿಯಂ’ನಲ್ಲಿ ನಡೆದ ಈ ಮುಖಾಮುಖೀಯಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಇಂಗ್ಲೆಂಡ್‌ ಇಲೆವೆನ್‌ 48.5 ಓವರ್‌ಗಳಲ್ಲಿ 282 ರನ್ನುಗಳ ದೊಡ್ಡ ಮೊತ್ತವನ್ನೇ ಪೇರಿಸಿತು. ಆದರೆ ಯುವ ಆಟಗಾರರಿಂದಲೇ ಕೂಡಿದ ಆತಿಥೇಯ ಪಡೆ ಇನ್ನೂ 62 ಎಸೆತ ಬಾಕಿ ಇರುವಾಗಲೇ, 39.4 ಓವರ್‌ಗಳಲ್ಲಿ ನಾಲ್ಕೇ ವಿಕೆಟಿಗೆ 283 ರನ್‌ ಪೇರಿಸಿ ಗೆದ್ದು ಬಂದಿತು.

ಮಂಗಳವಾರ ನಡೆದ ಮೊದಲ ಅಭ್ಯಾಸ ಪಂದ್ಯದಲ್ಲಿ ಧೋನಿ ಪಡೆ 3 ವಿಕೆಟ್‌ಗಳ ಸೋಲುಂಡಿತ್ತು. ಇದಕ್ಕೀಗ ರಹಾನೆ ಬಳಗ ಸೇಡು ತೀರಿಸಿಕೊಂಡಿದೆ. ಭಾರತ- ಇಂಗ್ಲೆಂಡ್‌ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯ ಜ. 15ರಂದು ಪುಣೆಯಲ್ಲಿ ನಡೆಯಲಿದೆ.

ಅಗ್ರ ಕ್ರಮಾಂಕದ ಅಮೋಘ ಆಟ
ಭಾರತದ ಚೇಸಿಂಗ್‌ನಲ್ಲಿ ಆರಂಭಿಕನಾಗಿ ಇಳಿದ ನಾಯಕ ಅಜಿಂಕ್ಯ ರಹಾನೆ 91 ರನ್‌ ಬಾರಿಸಿ ಮುಂಚೂಣಿಯಲ್ಲಿ ಕಾಣಿಸಿಕೊಂಡರು. ಜತೆಗಾರ ಶೆಲ್ಡನ್‌ ಜಾಕ್ಸನ್‌ ಮತ್ತು ವನ್‌ಡೌನ್‌ನಲ್ಲಿ ಆಡಲಿಳಿದ ಭರವಸೆಯ ಕೀಪರ್‌ ರಿಷಬ್‌ ಪಂತ್‌ ತಲಾ 59 ರನ್‌ ಬಾರಿಸಿದರು. ಎಡಗೈ ಆಟಗಾರ ಸುರೇಶ್‌ ರೈನಾ ಬ್ಯಾಟಿನಿಂದ 45 ರನ್‌ ಸಿಡಿಯಿತು. ದೀಪಕ್‌ ಹೂಡಾ ಔಟಾಗದೆ 23 ರನ್‌ ಹೊಡೆದರು.

ರಹಾನೆ-ಜಾಕ್ಸನ್‌ ಇಂಗ್ಲೆಂಡ್‌ ದಾಳಿಯನ್ನು ದಿಟ್ಟ ರೀತಿಯಲ್ಲಿ ನಿಭಾಯಿಸಿ 18.5 ಓವರ್‌ಗಳಿಂದ 119 ರನ್‌ ಒಟ್ಟುಗೂಡಿಸುವ ಮೂಲಕ ಭಾರತದ ಚೇಸಿಂಗಿಗೆ ಬಲ ತುಂಬಿದರು. ಬಳಿಕ ರಹಾನೆ-ಪಂತ್‌ 2ನೇ ವಿಕೆಟಿಗೆ 78 ರನ್‌ ರಾಶಿ ಹಾಕಿದರು. ಶತಕ ಸಮೀಪಿಸಿದ್ದ ರಹಾನೆ ಕೇವಲ 9 ರನ್‌ ಕೊರತೆಯಿಂದ ಈ ಅವಕಾಶ ಕಳೆದುಕೊಳ್ಳಬೇಕಾಯಿತು. 33ನೇ ಓವರ್‌ ತನಕ ನಿಂತ ಅವರು 83 ಎಸೆತ ನಿಭಾಯಿಸಿದರು; 10 ಬೌಂಡರಿ, ಒಂದು ಸಿಕ್ಸರ್‌ ಬಾರಿಸಿದರು.

Advertisement

ಸೌರಾಷ್ಟ್ರದ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಜಾಕ್ಸನ್‌ 59 ರನ್ನಿಗೆ 56 ಎಸೆತ ಎದುರಿಸಿದರು (7 ಬೌಂಡರಿ). ಪಂತ್‌ ಆಟ ಅತ್ಯಂತ ಆಕ್ರಮಣಕಾರಿಯಾಗಿತ್ತು. ಅವರ 59 ರನ್‌ ಕೇವಲ 36 ಎಸೆತಗಳಲ್ಲಿ ಬಂತು. ಸಿಡಿಸಿದ್ದು 8 ಬೌಂಡರಿ, 2 ಸಿಕ್ಸರ್‌.

ಬೆಳೆಯಿತು ಇಂಗ್ಲೆಂಡ್‌ ಬಾಲ!
ಇಂಗ್ಲೆಂಡಿನ ಮೊತ್ತ 280ರ ಗಡಿ ದಾಟಿದ್ದೇ ಬಾಲಂಗೋಚಿಗಳಾದ ಆದಿಲ್‌ ರಶೀದ್‌ (39)-ಡೇವಿಡ್‌ ವಿಲ್ಲಿ (ಔಟಾಗದೆ 38) ಸಾಹಸದಿಂದ. 211 ರನ್ನಿಗೆ 9 ವಿಕೆಟ್‌ ಉದುರಿಸಿಕೊಂಡಿದ್ದ ಆಂಗ್ಲರ ಪಡೆ, ಇವರಿಬ್ಬರ ಜತೆಯಾಟದಿಂದ ಅಂತಿಮ ವಿಕೆಟಿಗೆ 71 ರನ್‌ ಸೂರೆಗೈದಿತು. ಆದರೂ ಈ ಮೊತ್ತವನ್ನು ಉಳಿಸಿಕೊಳ್ಳಲು ಪ್ರವಾಸಿಗರಿಗೆ ಸಾಧ್ಯವಾಗಲಿಲ್ಲ.

ಇಂಗ್ಲೆಂಡ್‌ ಸರದಿಯ ಪ್ರಮುಖ ಸ್ಕೋರರ್‌ಗಳೆಂದರೆ ಬೇರ್‌ಸ್ಟೊ (64), ಹೇಲ್ಸ್‌ (51) ಮತ್ತು ಸ್ಟೋಕ್ಸ್‌ (38). ನಾಯಕ ಮಾರ್ಗನ್‌ ಖಾತೆಯನ್ನೇ ತೆರೆಯಲಿಲ್ಲ. ಹೇಲ್ಸ್‌ ಮತ್ತು ಮಾರ್ಗನ್‌ ಅವರನ್ನು ಶಾಬಾಜ್‌ ನದೀಂ ಸತತ ಎಸೆತಗಳಲ್ಲಿ ಕೆಡವಿದರು. 

38ಕ್ಕೆ 3 ವಿಕೆಟ್‌ ಕಿತ್ತ ಪರ್ವೇಜ್‌ ರಸೂಲ್‌ ಭಾರತದ ಯಶಸ್ವಿ ಬೌಲರ್‌. ಪ್ರದೀಪ್‌ ಸಂಗ್ವಾನ್‌, ಅಶೋಕ್‌ ದಿಂಡ ಕೂಡ 2 ವಿಕೆಟ್‌ ಕಿತ್ತರು.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌ ಇಲೆವೆನ್‌-48.5 ಓವರ್‌ಗಳಲ್ಲಿ 282 (ಬೇರ್‌ಸ್ಟೊ 64, ಹೇಲ್ಸ್‌ 51, ರಶೀದ್‌ 39, ರಸೂಲ್‌ 38ಕ್ಕೆ 3, ನದೀಂ 41ಕ್ಕೆ 2, ದಿಂಡ 55ಕ್ಕೆ 2, ಸಂಗ್ವಾನ್‌ 64ಕ್ಕೆ 2). ಭಾರತ “ಎ’-39.4 ಓವರ್‌ಗಳಲ್ಲಿ 4 ವಿಕೆಟಿಗೆ 283 (ರಹಾನೆ 91, ಜಾಕ್ಸನ್‌ 59, ಪಂತ್‌ 59, ರೈನಾ 45, ವಿಲ್ಲಿ 32ಕ್ಕೆ 1). 

Advertisement

Udayavani is now on Telegram. Click here to join our channel and stay updated with the latest news.

Next