ರಾಯಲ್ ಎನ್ ಫೀಲ್ಡ್
– ಬೈಕ್ ಗಳ ರಾಜ ಎಂದೇ ಕರೆಯಲ್ಪಡುವ, ಪ್ರಪಂಚದಲ್ಲೇ ಅತ್ಯಂತ ಹಳೆಯದಾದ ಮತ್ತು ಈಗಲೂ ನಡೆಯುತ್ತಿರುವ ಮೋಟಾರ್ ಸೈಕಲ್ ಕಂಪೆನಿ. ಜಗತ್ತಿನ 50ಕ್ಕಿಂತ ಹೆಚ್ಚು ರಾಷ್ಟ್ರಗಳಿಗೆ ಬೈಕ್ ಗಳನ್ನು ರಫ್ತು ಮಾಡುತ್ತಿರುವ ಭಾರತೀಯ ಏಕೈಕ ಕಂಪೆನಿ. ರಾಯಲ್ ಎನ್ ಫೀಲ್ಡ್ ಬುಲೆಟ್ ಗಳನ್ನು ಖರೀದಿಸುವುದು ಪ್ರತಿಯೊಬ್ಬನ ಕನಸಾಗಿರುತ್ತದೆ. ಇದು ನನಸಾಗದಿದ್ದಲ್ಲಿ ಒಮ್ಮೆಯಾದರೂ ಇದನ್ನು ಓಡಿಸಬೇಕೆಂಬ ಕನಸನ್ನು ಹಲವರು ಕಟ್ಟಿಕೊಂಡಿರುತ್ತಾರೆ. ಭಾರತೀಯ ಮಾರುಕಟ್ಟೆಯಲ್ಲಿ ಈ ಬೈಕ್ ಐತಿಹಾಸಿಕ ಇತಿಹಾಸವನ್ನು ಹೊಂದಿದೆ. ದೂರದಿಂದಲೇ ಬರುವಾಗ ಕಿವಿಯಲ್ಲಿ ಕೇಳಿಸುವ ಗಡ ಗಡ ಶಬ್ದ ಯಾರಿಂದಲೂ ಮರೆಯಲು ಸಾಧ್ಯವಿಲ್ಲ.
ಯುವಕರಿಗೆ ಈ ಬೈಕ್ ಅಂದರೆ ಅದೆನೋ ಆಕರ್ಷಣೆ. ರಾಯಲ್ ಎನ್ ಫೀಲ್ಡ್ ಕಂಪೆನಿಯನ್ನು ಆಲ್ಬರ್ಟ್ ಎಡಿ ಮತ್ತು ರಾಬರ್ಟ್ ವಾಕರ್ ಸ್ಮಿತ್ ಇಂಗ್ಲೆಂಡ್ ನಲ್ಲಿ ಹುಟ್ಟು ಹಾಕಿದರು. 1901ರಲ್ಲಿ ರಾಯಲ್ ಎನ್ ಫೀಲ್ಡ್ ಕಂಪೆನಿ ‘ದ ಇಂಗ್ಲೆಂಡ್ ಸೈಕಲ್ ಕಂಪೆನಿಯ’ ಹೆಸರಿನಿಂದ ಮೊಟ್ಟ ಮೊದಲ ಮೋಟಾರ್ ಸೈಕಲ್ ಅನ್ನು ತಯಾರಿಸುತ್ತದೆ. ಮೊದಲನೇ ಮಹಾಯುದ್ದದ ಸಮಯದಲ್ಲಿ ಈ ಕಂಪೆನಿ ರಷ್ಯನ್ ಸೈನಿಕರಿಗೆ ಯುದ್ದೋಪಕರಣಗಳನ್ನು ಸುಲಭವಾಗಿ ತೆಗೆದುಕೊಂಡು ಹೋಗಲು ಬೈಕ್ ಗಳನ್ನು ತಯಾರು ಮಾಡುವ ಮೂಲಕ ಸಹಾಯಹಸ್ತ ಚಾಚುತ್ತದೆ. ಎರಡನೇ ಪ್ರಪಂಚ ಯುದ್ದದ ಸಮಯದಲ್ಲಿ ರಾಯಲ್ ಎನ್ ಫೀಲ್ಡ್ ‘ಪ್ಲೇಯಿಂಗ್ ಪ್ಲೇ’ ಎಂಬ ಹೆಸರಿನಲ್ಲಿ ಒಂದು ಕಡಿಮೆ ತೂಕದ ಮೋಟಾರ್ ಸೈಕಲ್ ಅನ್ನು ತಯಾರು ಮಾಡುತ್ತದೆ. ಯುದ್ದದ ಸಮಯದಲ್ಲಿ ಬೈಕ್ ಗಳನ್ನು ಪ್ಯಾರಾಚೂಟ್ ಸಹಾಯದಿಂದ ಭೂಮಿಗೆ ಇಳಿಸುವ ಮಹಾನ್ ಉದ್ದೇಶ ಇದರ ಹಿಂದಿತ್ತು. ಈ ಬೈಕ್ 120 ಸಿಸಿ ಮತ್ತು 60ಕೆಜಿ ತೂಕವನ್ನು ಹೊಂದಿತ್ತು.
1953ರಲ್ಲಿ ಭಾರತೀಯ ಸೇನೆ ಗಡಿ ಕಾಯುವ ಸೈನಿಕರಿಗಾಗಿ ಬೈಕ್ ಗಳನ್ನು ಖರೀದಿ ಮಾಡಬೇಕು ಎಂದು ನಿರ್ಧರಿಸುತ್ತದೆ. ಆ ಸಮಯದಲ್ಲಿ ಇವರಿಗೆ ರಾಯಲ್ ಎನ್ ಫೀಲ್ಡ್ ಬೈಕ್ ಸೂಕ್ತವೆಂದೆನಿಸುತ್ತದೆ. ಅಚಾನಕ್ ಎಂಬಂತೆ ಅದೇ ವರ್ಷ ರಾಯಲ್ ಎನ್ ಫೀಲ್ಡ್ ಸಂಸ್ಥೆ ಮದ್ರಾಸ್ ನಲ್ಲಿ ‘ಮದ್ರಾಸ್ ಮೋಟಾರ್ ಸೈಕಲ್’ ಎಂಬ ಕಂಪೆನಿಯ ಜೊತೆ ಕೈಜೋಡಿಸಿ 350ಸಿಸಿ ಯ 800 ಬೈಕ್ ಗಳನ್ನು ಭಾರತಕ್ಕೆ ರಪ್ತು ಮಾಡುತ್ತದೆ. ಅವಾಗಿನಿಂದ ಮದ್ರಾಸ್ ಮೋಟಾರ್ ಸೈಕಲ್ ಕಂಪೆನಿ ‘ಎನ್ ಫೀಲ್ಡ್ ಇಂಡಿಯಾ’ ಎನ್ನುವ ಹೆಸರಿನಿಂದ ಭಾರತದಲ್ಲಿ ರಾಯಲ್ ಎನ್ ಫೀಲ್ಡ್ ಬೈಕ್ ಗಳನ್ನು ಮಾರಾಟ ಮಾಡುತ್ತದೆ.
ಆ ಸಮಯದಲ್ಲಿ ಮದ್ರಾಸ್ ಮೋಟಾರ್ ಸೈಕಲ್ ಕಂಪೆನಿಯಲ್ಲಿ ಕೇವಲ ಬಿಡಿಭಾಗಗಳನ್ನು ಮಾತ್ರ ಜೋಡಿಸಲಾಗುತ್ತಿತ್ತು. 1962ನೇ ವರ್ಷದಲ್ಲಿ ಈ ಕಂಪೆನಿ ಭಾರತದಲ್ಲಿಯೇ ಬಿಡಿಭಾಗಗಳನ್ನು ತಯಾರಿಸುವ ಲೈಸನ್ಸ್ ಅನ್ನು ಪಡೆಯುತ್ತದೆ. ಆದರೇ ದುರದೃಷ್ಟ ಎಂಬಂತೆ 1971 ರಲ್ಲಿ ರಾಯಲ್ ಎನ್ ಫೀಲ್ಡ್ ಕಂಪೆನಿ ಇಂಗ್ಲೆಂಡ್ ನಲ್ಲಿ ಸಂಪೂರ್ಣ ಮುಚ್ಚಿ ಹೋಗುತ್ತದೆ.
ಅದೇ ಸಮಯದಲ್ಲಿ ಎನ್ ಫೀಲ್ಡ್ ಇಂಡಿಯಾವನ್ನು ರಾಯಲ್ ಎನ್ ಫೀಲ್ಡ್ ಆಗಿ ಬದಲಾಯಿಸಲು ಮದ್ರಾಸ್ ಮೋಟಾರ್ ಸೈಕಲ್ ಕಂಪೆನಿ ಪೂರ್ಣ ಅಧಿಕಾರ ಪಡೆಯುತ್ತದೆ. ನಂತರ 1990ರಲ್ಲಿ ರಾಯಲ್ ಎನ್ ಫೀಲ್ಡ್ ಕಂಪೆನಿ ಈಚರ್ ಇಂಡಿಯಾ ಜೊತೆ ವಿಲೀನವಾಗುತ್ತದೆ. 1994 ರಿಂದ 2004ರವರೆಗೂ ಈ ಕಂಪೆನಿ ನಷ್ಟದ ಹಾದಿಯಲ್ಲಿತ್ತು. 2002ರಲ್ಲಿ ಜೈಪುರದಲ್ಲಿದ್ದ ಬೈಕ್ ನಿರ್ಮಾಣ ಘಟಕವೂ ಕೂಡ ಮುಚ್ಚಿಹೋಗುತ್ತದೆ.
2005ರಲ್ಲಿ ರಾಯಲ್ ಎನ್ ಫೀಲ್ಡ್ ಕಂಪೆನಿ(ಮದ್ರಾಸ್ ಮೋಟಾರ್ ಸೈಕಲ್)ಗೆ 50 ವರ್ಷ ಪೂರ್ತಿಯಾದ್ದರಿಂದ ಚೆನ್ನೈ ನಲ್ಲಿರುವ ನಿರ್ಮಾಣ ಘಟಕದಿಂದ ಹಳೆಯ ಬೈಕ್ ಗಳನ್ನು ಪುನರ್ ನಿರ್ಮಾಣ ಮಾಡಿ ಮಾರಾಟಕ್ಕೆ ಬಿಡುಗಡೆ ಮಾಡುತ್ತದೆ. ಅಲ್ಲಿಂದಲೇ ಯಶಸ್ಸಿ ಹಾದಿಯನ್ನು ಈ ಕಂಪೆನಿ ಹಿಡಿಯಿತು. ಒಂದು ಕಾಲದಲ್ಲಿ ಇಂಗ್ಲೆಂಡ್ ನಿಂದ ಭಾರತಕ್ಕೆ ಈ ಬೈಕ್ ಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೇ ಕಾಲ ಬದಲಾದಂತೆ ಭಾರತದಿಂದ ಇಂಗ್ಲೆಂಡ್ ಗೆ ಈ ಬೈಕ್ ಗಳನ್ನು ರಫ್ತು ಮಾಡಲಾಗುತ್ತಿದೆ. ಈ ರೀತಿಯಾಗಿ ರಾಯಲ್ ಎನ್ ಫೀಲ್ಡ್ ಕಂಪೆನಿ ಜಗತ್ತಿನಾದ್ಯಂತ ಮೈಲಿಗಲ್ಲನ್ನು ಸ್ಥಾಪಿಸಿತು.
ರಾಯಲ್ ಎನ್ ಫೀಲ್ಡ್ ಮೈಲಿಗಲ್ಲು:
ಭಾರತದಲ್ಲಿ ಮೊದಲು ಫೋರ್ ಸ್ಟ್ರೋಕ್ ಇಂಜಿನ್ ತಯಾರು ಮಾಡಿದ್ದು ಕೂಡ ಈ ಕಂಪೆನಿಯೇ. 1990 ರಲ್ಲಿ ಡಿಸೇಲ್ ಇಂಜಿನ್ ಮೋಟಾರ್ ಸೈಕಲ್ ಅನ್ನು ಕೂಡ ಆರಂಭಿಸುತ್ತದೆ. ಆದರೇ ಅದು ಯಶಸ್ಸು ಗಳಿಸದಿದ್ದರಿಂದ 2002ರಲ್ಲಿ ಈ ಪ್ರಯೋಗ ನಿಲ್ಲಿಸಲಾಯಿತು.
ಮೂಲ ರಾಯಲ್ ಎನ್ ಫೀಲ್ಡ್ ಲೋಗೋದಲ್ಲಿ ಒಂದು ಫಿರಂಗಿ ಗುರುತು ಮತ್ತು ಮೇಡ್ ಲೈಕ್ ಏ ಗನ್ ಎಂಬ ಅಕ್ಷರಗಳಿರುತ್ತದೆ. 1962ರಲ್ಲಿ ಈ ಕಂಪೆನಿ ಇಂಟರ್ ಸೆಪ್ಟರ್ ಎಂಬ ಹೆಸರಿನಿಂದ 750 ಸಿಸಿ ಬೈಕ್ ಅನ್ನು ತಯಾರು ಮಾಡುತ್ತದೆ. ಆಗಿನ ಕಾಲದಲ್ಲಿ ಜಗತ್ತಿನ ಅತೀ ವೇಗದ ಬೈಕ್ ಎಂಬ ಹೆಗ್ಗಳಿಕೆಗೆ ಕೂಡ ಪಾತ್ರವಾಗುತ್ತದೆ. 2011 ರಲ್ಲಿ ಚೆನ್ನೈನಲ್ಲಿ 2ನೇ ನಿರ್ಮಾಣ ಘಟಕ ಕೂಡ ಆರಂಭವಾಗಿ, ಇಲ್ಲಿ ಪ್ರತಿದಿನ 800 ಬೈಕ್ ಗಳು ತಯಾರು ಆಗುತ್ತಿದ್ದವು. 2014ರಲ್ಲಿ ರಾಯಲ್ ಎನ್ ಫೀಲ್ಡ್ ಭಾರತದಲ್ಲಿ 3ಲಕ್ಷಕ್ಕಿಂತ ಹೆಚ್ಚು ಬೈಕ್ ಗಳನ್ನು ಮಾರಾಟ ಮಾಡುತ್ತದೆ. ಇದು ಹಾರ್ಲೇ ಡೇವಿಡ್ಸನ್ ಕಂಪೆನಿ ಪ್ರಪಂಚದಾದ್ಯಂತ ಮಾರಾಟ ಮಾಡಿದ ಬೈಕ್ ಗಳ ಸಂಖ್ಯೆಗಿಂತ ಹೆಚ್ಚು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
-ಮಿಥುನ್ ಮೊಗೇರ