ಶಾರ್ಜಾ : ಕೆಕೆಆರ್ ಎದುರಿನ ಸೋಮವಾರದ ಐಪಿಎಲ್ ಮುಖಾಮುಖಿಯಲ್ಲಿ ಸಂಘಟಿತ ಬೌಲಿಂಗ್ ದಾಳಿ ನಡೆಸಿದ ರಾಯಲ್ ಚಾಲೆಂಜರ್ ಬೆಂಗಳೂರು 82 ರನ್ ಗೆಲುವು ದಾಖಲಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ 2 ವಿಕೆಟಿಗೆ 194 ರನ್ ಗಳಿಸಿ ಸವಾಲೊಡ್ಡಿತು. ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಕೆಕೆಆರ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 112 ರನ್ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದು ಕೊಂಡ ಆರ್‌ಸಿಬಿ ಎಬಿ ಡಿ’ವಿಲಿಯರ್ ಅವರ ಸ್ಫೋಟಕ ಆಟದಿಂದಾಗಿ ತಂಡವು ಕೇವಲ 2 ವಿಕೆಟಿಗೆ 194 ರನ್ನುಗಳ ಬೃಹತ್ ಮೊತ್ತ ಪೇರಿಸಿತು.
ಉತ್ತಮ ಆರಂಭ ಪಡೆದ ಆರ್‌ಸಿಬಿ ತಂಡ ಕೊನೆ ಹಂತದಲ್ಲಿ ಸಿಡಿಯಿತು. ಕೆಕೆಆರ್ ದಾಳಿಯನ್ನು ಪುಡಿಗಟ್ಟಿದ ಡಿ’ವಿಲಿಯರ್ ಮತ್ತು ನಾಯಕ ವಿರಾಟ್ ಕೊಹ್ಲಿ ಕೊನೆಯ ನಾಲ್ಕು ಓವರ್‌ಗಳಲ್ಲಿ 65 ರನ್ ಪೇರಿಸಿದರು. ಆರ್‌ಸಿಬಿ ಮೊದಲ 14 ಓವರ್ ಮುಗಿದಾಗ 107 ರನ್ ತಲುಪಿತ್ತು. ಅಲ್ಲಿಂದ ತಂಡದ ಬ್ಯಾಟಿಂಗ್ ವೈಭವ ಮೊದಲ್ಗೊಂಡಿತ್ತು. ಪ್ರತಿ ಓವರ್‌ಗಳಲ್ಲಿಯೂ ತಂಡ ಹತ್ತಕ್ಕಿಂತ ಹೆಚ್ಚು ರನ್ ಗಳಿಸುತ್ತ ಹೋಯಿತು.
ಕೆಕೆಆರ್ ದಾಳಿಯನ್ನು ಒಂದೇ ಸವನೆ ಚಚ್ಚಿದ ಡಿ’ವಿಲಿಯರ್ ಕೇವಲ 33 ಎಸೆತಗಳಿಂದ 73 ರನ್ ಗಳಿಸಿ ಅಜೇಯರಾಗಿ ಉಳಿದರು. 5 ಬೌಂಡರಿ ಬಾರಿಸಿದ ಅವರು 6 ಮನಮೋಹಕ ಸಿಕ್ಸರ್ ಸಿಡಿಸಿ ರಂಜಿಸಿದರು. ಅವರಿಗೆ ಉತ್ತಮ ಬೆಂಬಲ ನೀಡಿದ ಕೊಹ್ಲಿ 28 ಎಸೆತಗಳಿಂದ 33 ರನ್ ಹೊಡೆದರು.