Advertisement

WPL ; ರೋಚಕ ಗೆಲುವಿನ ಮೂಲಕ ಫೈನಲ್ ಗೆ ಲಗ್ಗೆ ಇಟ್ಟ ಆರ್ ಸಿಬಿ

11:09 PM Mar 15, 2024 | Team Udayavani |

ಹೊಸದಿಲ್ಲಿ: ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಎಲಿಮಿನೇಟರ್‌ ಪಂದ್ಯದಲ್ಲಿ ಆರ್‌ಸಿಬಿಗೆ ಫೈನಲ್‌ ಲಕ್‌ ಒಲಿದಿದೆ. ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡವನ್ನು 5 ರನ್ನುಗಳಿಂದ ರೋಚಕವಾಗಿ ಮಣಿಸಿದ ಮಂಧನಾ ಪಡೆ ವನಿತಾ ಪ್ರೀಮಿಯರ್‌ ಲೀಗ್‌ ಪ್ರಶಸ್ತಿ ಸುತ್ತಿಗೆ ನೆಗೆದಿದೆ. ರವಿವಾರದ ಪ್ರಶಸ್ತಿ ಕಾಳಗದಲ್ಲಿ ಡೆಲ್ಲಿ-ಆರ್‌ಸಿಬಿ ಮುಖಾಮುಖಿ ಆಗಲಿವೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಆರ್‌ಸಿಬಿ 6 ವಿಕೆಟಿಗೆ 135 ರನ್ನುಗಳ ಸಾಮಾನ್ಯ ಮೊತ್ತ ಗಳಿಸಿದರೆ, ಮುಂಬೈ 6 ವಿಕೆಟಿಗೆ 130 ರನ್‌ ಗಳಿಸಿ ಶರಣಾಯಿತು.

ಮತ್ತೆ ಪೆರ್ರಿ ರಕ್ಷಣೆ
ಬ್ಯಾಟಿಂಗ್‌ ಆಯ್ದುಕೊಂಡ ಆರ್‌ಸಿಬಿ ನಿರ್ಧಾರ ಫ‌ಲ ಕೊಡಲಿಲ್ಲ. ಪವರ್‌ ಪ್ಲೇ ಮುಗಿಯುವುದರೊಳಗೆ 3 ವಿಕೆಟ್‌ ಉರುಳಿತು. ಸೋಫಿ ಡಿವೈನ್‌ (10), ನಾಯಕಿ ಸ್ಮತಿ ಮಂಧನಾ (10) ಮತ್ತು ದಿಶಾ ಕಸಟ್‌ (0) ಪೆವಿಲಿಯನ್‌ ಸೇರಿಕೊಂಡರು. ಆರ್‌ಸಿಬಿಯ ಸವಾಲಿನ ಮೊತ್ತದ ಯೋಜನೆ ಆಗಲೇ ಕೈಕೊಟ್ಟಿತು.

ಇಂಥ ಹತಾಶ ಸನ್ನಿವೇಶದಲ್ಲಿ ಮತ್ತೆ ಆರ್‌ಸಿಬಿ ಪಾಲಿಗೆ ಆಪತಾºಂಧವರಾಗಿ ಪರಿಣಮಿಸಿದವರು ಎಲ್ಲಿಸ್‌ ಪೆರ್ರಿ. ವನ್‌ಡೌನ್‌ನಲ್ಲಿ ಕ್ರೀಸ್‌ ಇಳಿದ ಆಸ್ಟ್ರೇಲಿಯದ ಸವ್ಯಸಾಚಿ ಮುಂಬೈ ಬೌಲಿಂಗ್‌ ಆಕ್ರಮಣವನ್ನು ದಿಟ್ಟ ರೀತಿಯಲ್ಲಿ ಎದುರಿಸಿ ರನ್‌ ಪೇರಿಸುತ್ತ ಹೋದರು. ಈ ನಡುವೆ ರಿಚಾ ಘೋಷ್‌ ವಿಕೆಟ್‌ ಉರುಳಿದಾಗ ಆರ್‌ಸಿಬಿ ಮತ್ತೆ ಆತಂಕಕ್ಕೆ ಸಿಲುಕಿತು. ರಿಚಾ ಗಳಿಕೆ ಕೇವಲ 14 ರನ್‌. ಆಗ ಸ್ಕೋರ್‌ ಕೇವಲ 49 ರನ್‌ ಆಗಿತ್ತು. 10ನೇ ಓವರ್‌ ಜಾರಿಯಲ್ಲಿತ್ತು.

ಎಲ್ಲಿಸ್‌ ಪೆರ್ರಿ 19ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡು ನಿಂತರು. ಡೆತ್‌ ಓವರ್‌ಗಳಲ್ಲಿ ಜಬರ್ದಸ್ತ್ ಆಟವಾಡಿದರು. ಭರ್ತಿ 50 ಎಸೆತ ಎದುರಿಸಿದ ಅವರು 8 ಬೌಂಡರಿ ಹಾಗೂ ಒಂದು ಸಿಕ್ಸರ್‌ ನೆರವಿನಿಂದ 66 ರನ್‌ ಬಾರಿಸಿದರು. ಒಂದೆಡೆ ಪೆರ್ರಿ ಬೀಸುತ್ತಿದ್ದಾಗ ಇನ್ನೊಂದೆಡೆ ಸೋಫಿ ಮೊಲಿನಾಕ್ಸ್‌ (11) ವಿಕೆಟ್‌ ಬಿತ್ತು. ಜಾರ್ಜಿಯಾ ವೇರ್‌ಹ್ಯಾಮ್‌ 10 ಎಸೆತ ಎದುರಿಸಿ ಅಜೇಯ 18 ರನ್‌ ಮಾಡಿದರು (1 ಬೌಂಡರಿ, 1 ಸಿಕ್ಸರ್‌). 12 ಓವರ್‌ಗಳಲ್ಲಿ 4ಕ್ಕೆ 57 ರನ್‌ ಮಾಡಿ ಕುಂಟುತ್ತಿದ್ದ ಆರ್‌ಸಿಬಿ, ಕೊನೆಯ 8 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 78 ರನ್‌ ಪೇರಿಸಲು ಯಶಸ್ವಿಯಾಯಿತು. ಮುಂಬೈ ಪರ ಹ್ಯಾಲಿ ಮ್ಯಾಥ್ಯೂಸ್‌, ನ್ಯಾಟ್‌ ಸ್ಕಿವರ್‌ ಬ್ರಂಟ್‌, ಸೈಕಾ ಇಶಾಖ್‌ ತಲಾ 2 ವಿಕೆಟ್‌ ಉರುಳಿಸಿದರು.

Advertisement

ಮುಂಬೈ ಚೇಸಿಂಗ್‌
ಚೇಸಿಂಗ್‌ಗೆ ಇಳಿದ ಮುಂಬೈ ಕೂಡ ನಿಧಾನ ಗತಿಯ ಆಟವಾಡಿತು. 50 ರನ್ನಿಗೆ ಭರ್ತಿ 8 ಓವರ್‌ ತೆಗೆದುಕೊಂಡಿತು. ಆಗ ಆರಂಭಿಕರಾದ ಹ್ಯಾಲಿ ಮ್ಯಾಥ್ಯೂಸ್‌ (15) ಮತ್ತು ಯಾಸ್ತಿಕಾ ಭಾಟಿಯ (19) ವಿಕೆಟ್‌ ಉರುಳಿತ್ತು. ಅರ್ಧ ಹಾದಿ ಕ್ರಮಿಸುವಾಗ ಮುಂಬೈ 2ಕ್ಕೆ 60 ರನ್‌ ಮಾಡಿತ್ತು. ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಮತ್ತು ನ್ಯಾಟ್‌ ಸ್ಕಿವರ್‌ ಬ್ರಂಟ್‌ ಕ್ರೀಸ್‌ನಲ್ಲಿದ್ದರು. ಕೊನೆಯ 5 ಓವರ್‌ಗಳಲ್ಲಿ 43 ರನ್‌ ಗಳಿಸುವ ಗುರಿ ಮುಂಬೈ ಮುಂದಿತ್ತು.
ಗೆಲುವಿಗೆ 16 ರನ್‌ ಆಗತ್ಯವಿದ್ದಾಗ ಕೌರ್‌ ವಿಕೆಟ್‌ ಬಿತ್ತು. ನಾಯಕಿಯ ಗಳಿಕೆ 30 ಎಸೆತಗಳಿಂದ 33 ರನ್‌ (4 ಬೌಂಡರಿ). ಕೊನೆಯ ಓವರ್‌ನಲ್ಲಿ 12 ರನ್‌ ಅಗತ್ಯವಿತ್ತು.

Advertisement

Udayavani is now on Telegram. Click here to join our channel and stay updated with the latest news.

Next