Advertisement

ಆರ್‌ಸಿಬಿಗೆ ಇನ್ನೂ ಇದೆ ಅವಕಾಶ​​​​​​​

12:40 PM May 13, 2018 | Team Udayavani |

ನವದೆಹಲಿ: ಡೆಲ್ಲಿ ಡೇರ್‌ ಡೆವಿಲ್ಸ್‌ ವಿರುದ್ಧದ ಪಂದ್ಯವನ್ನು ರಾಯಲ್‌ ಚಾಲೆಂಜರ್ ಬೆಂಗಳೂರು ತಂಡ ಭರ್ಜರಿ 5 ವಿಕೆಟ್‌ಗಳಿಂದ ಗೆದ್ದುಕೊಂಡಿದೆ.

Advertisement

ಇದರೊಂದಿಗೆ ಬೆಂಗಳೂರು ತಂಡದ ಪ್ಲೇಆಫ್ ಕನಸು ಇನ್ನೂ ಜೀವಂತವಾಗಿ ಉಳಿದುಕೊಂಡಿದೆ. ಸೋತ ಡೆಲ್ಲಿ ತಂಡ ಕೂಟದಿಂದ ಅಧಿಕೃತವಾಗಿ ಹೊರಬಿದ್ದಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ತಂಡ 20 ಓವರ್‌ಗೆ 4 ವಿಕೆಟ್‌ಗೆ 181 ರನ್‌ಗಳಿಸಿತು. ಈ ಗುರಿ ಬೆನ್ನಟ್ಟಿದ ಆರ್‌ಸಿಬಿ ಆರಂಭಿಕರಿಬ್ಬರ ವಿಕೆಟ್‌ ಬೇಗನೆ ಕಳೆದುಕೊಂಡರೂ ವಿರಾಟ್‌ ಕೊಹ್ಲಿ (70 ರನ್‌) ಹಾಗೂ ಎಬಿಡಿ ವಿಲಿಯರ್ (ಅಜೇಯ 72 ) ರನ್‌ ಮಳೆ ಸುರಿಸಿದರು. ಮಾತ್ರವಲ್ಲ ಬೆಂಗಳೂರಿಗೆ ಗೆಲುವು ತಂದುಕೊಟ್ಟರು. 40 ಎಸೆತ ಎದುರಿಸಿದ ಕೊಹ್ಲಿ 7 ಬೌಂಡರಿ, 3 ಸಿಕ್ಸರ್‌ ಹೊಡೆದರೆ 37 ಎಸೆತ ಎದುರಿಸಿದ ಎಬಿಡಿ ವಿಲಿಯರ್ 4 ಬೌಂಡರಿ ಮತ್ತು 6 ಸಿಕ್ಸರ್‌ನಿಂದ ವಿಜೃಂಭಿಸಿದರು.

ಪಂತ್‌ ಮತ್ತೆ ಮಿಂಚು: ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಡೇರ್‌ಡೆವಿಲ್ಸ್‌ ರಿಷಭ್‌ ಪಂತ್‌ ಭರ್ಜರಿ ಬ್ಯಾಟಿಂಗ್‌
ಪ್ರದರ್ಶನದಿಂದ 4 ವಿಕೆಟಿಗೆ 181 ರನ್‌ ಪೇರಿಸಿತು. ಇದರಲ್ಲಿ ಪಂತ್‌ ಪಾಲು 61 ರನ್‌.

ಫಿರೋಜ್‌ ಷಾ ಕೋಟ್ಲಾ ಅಂಗಳದಲ್ಲಿ ಡೆಲ್ಲಿಗೆ ಸ್ಪಿನ್ನರ್‌ ಯಜುವೇಂದ್ರ ಚಹಲ್‌ ಮಾರಕವಾಗಿ ಪರಿಣಮಿಸಿದರು.
ಓಪನರ್‌ಗಳಾದ ಪೃಥ್ವಿ ಶಾ (2 ರನ್‌) ಮತ್ತು ಜಾಸನ್‌ರಾಯ್‌ (12 ರನ್‌) ಇಬ್ಬರನ್ನೂ ಬೌಲ್ಡ್‌ ಮಾಡುವ ಮೂಲಕ ಡೆಲ್ಲಿಗೆ ಆರಂಭಿಕ ಆಘಾತವಿಕ್ಕಿದರು. 16 ರನ್‌ ಆಗುವಷ್ಟರಲ್ಲಿ ಇವರಿಬ್ಬರು ಪೆವಿಲಿಯನ್‌ ಸೇರಿಕೊಂಡರು. ಬಳಿಕ ನಾಯಕ ಶ್ರೇಯಸ್‌ ಅಯ್ಯರ್‌ ಮತ್ತು ರಿಷಭ್‌ ಪಂತ್‌ ಸೇರಿಕೊಂಡು ಡೆಲ್ಲಿ ಇನಿಂಗ್ಸ್‌ ಆಧರಿಸ ತೊಡಗಿದರು. ಆರ್‌ಸಿಬಿ ದಾಳಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತ 3ನೇ ವಿಕೆಟಿಗೆ 93 ರನ್‌ ಪೇರಿಸಿದರು.

Advertisement

ಅಯ್ಯರ್‌ ಕೊಡುಗೆ 32 ರನ್‌. 35 ಎಸೆತ ಎದುರಿಸಿದ ಅವರು 3 ಬೌಂಡರಿ ಬಾರಿಸಿ ಸಿರಾಜ್‌ಗೆ ವಿಕೆಟ್‌
ಒಪ್ಪಿಸಿದರು.

ಕಳೆದ ಪಂದ್ಯದಲ್ಲಿ ಸನ್‌ರೈಸರ್ ಹೈದರಾಬಾದ್‌ ವಿರುದ್ಧ ಅಜೇಯ 128 ರನ್‌ ಬಾರಿಸಿ ಮೆರೆದಿದ್ದ ರಿಷಭ್‌ ಪಂತ್‌ ಈ ಬಾರಿ 61 ರನ್‌ ಮಾಡಿ ಉಜ್ವಲ ಫಾರ್ಮ್ ಮುಂದುವರಿಸಿದರು. ಕೇವಲ 34 ಎಸೆತ ಎದುರಿಸಿದ ಪಂತ್‌ 5 ಬೌಂಡರಿ, 4 ಸಿಕ್ಸರ್‌ ಸಿಡಿಸಿ ತವರಿನ ಅಭಿಮಾನಿಗಳಿಗೆ ಭರಪೂರ ರಂಜನೆ ಒದಗಿಸಿದರು. ಪಂತ್‌ 13ನೇ ಓವರಿನಲ್ಲಿ ಔಟಾದ ಬಳಿಕ ಅಭಿಷೇಕ್‌ ಶರ್ಮ ಬಿರುಸಿನ ಆಟಕ್ಕಿಳಿದರು. ಹೀಗಾಗಿ ಅಂತಿಮ 7 ಓವರ್‌ಗಳಲ್ಲಿ 72 ರನ್‌ ಹರಿದು ಬಂತು. ಶರ್ಮ ಬರೀ 19 ಎಸೆತಗಳಿಂದ 46 ರನ್‌ ಬಾರಿಸಿ ಅಜೇಯರಾಗಿ ಉಳಿದರು. ಈ ಮನಮೋಹಕ ಬ್ಯಾಟಿಂಗ್‌ ವೇಳೆ 4 ಸಿಕ್ಸರ್‌, 3 ಬೌಂಡರಿ ಸಿಡಿಯಲ್ಪಟ್ಟಿತು. ಆದರೆ ಅವರ ಜತೆಗಾರ ವಿಜಯ್‌ ಶಂಕರ್‌ ನಿಧಾನ ಗತಿಯಲ್ಲಿ ಸಾಗಿದರು. ಅವರು ಅಜೇಯ 21 ರನ್ನಿಗೆ 20 ಎಸೆತ ತೆಗೆದುಕೊಂಡರು (2 ಬೌಂಡರಿ).

ಪಂದ್ಯದ ತಿರುವು
ಕೊಹ್ಲಿ-ಎಬಿಡಿ ವಿಲಿಯರ್ ಬಿರುಸಿನ ಅರ್ಧಶತಕಗಳಿಸಿದ್ದರಿಂದ ಗೆಲುವು ಡೆಲ್ಲಿ ಡೇರ್‌ ಡೆವಿಲ್ಸ್‌ ತಂಡದ ಕೈ ತಪ್ಪುವಂತೆ ಆಯಿತು. 

ಪ್ಲೇ ಆಫ್ ಲೆಕ್ಕಾಚಾರ
ಡೆಲ್ಲಿ ತಂಡ ಈಗಾಗಲೇ ಆಡಿರುವ ಒಟ್ಟಾರೆ 12 ಪಂದ್ಯದಲ್ಲಿ 9 ಪಂದ್ಯ ಸೋತಿದೆ. ಅದು ಕೂಟದಿಂದ ಅಧಿಕೃತವಾಗಿ ಹೊರಬಿದ್ದಾಗಿದೆ. ಈ ಬೆನ್ನಲ್ಲೇ ಆರ್‌ಸಿಬಿಗೆ ಸಣ್ಣ ಅವಕಾಶವೊಂದು ತೆರೆದುಕೊಂಡಿದೆ. ಮುಂದೆ ಆರ್‌ಸಿಬಿ ಎದುರು ಮೂರು ಪಂದ್ಯವಿದ್ದು ಮೂರರಲ್ಲೂ ಅತ್ಯುತ್ತಮ ರನ್‌ರೇಟ್‌ನೊಂದಿಗೆ ಗೆಲ್ಲಬೇಕು. ಜತೆಗೆ ಉಳಿದ ತಂಡಗಳ ಸೋಲಿಗೂ ಆರ್‌ಸಿಬಿ ಪ್ರಾರ್ಥನೆ ಮಾಡಬೇಕಿದೆ. ಅದೃಷ್ಟ ಬಲವಿದ್ದರೆ ಆರ್‌ಸಿಬಿ ಪ್ಲೇ ಆಫ್ ಏರಲೂ ಬಹುದು.

ಮತ್ತೆ ಭದ್ರತೆ ಉಲ್ಲಂಘನೆ: 
ಡೆಲ್ಲಿ ವಿರುದ್ಧದ ಪಂದ್ಯದ ವೇಳೆ ಆರ್‌ಸಿಬಿ ಬ್ಯಾಟಿಂಗ್‌ ನಡೆಸುತ್ತಿದ್ದಾಗ ಅಭಿಮಾನಿಯೊಬ್ಬ ಅಕ್ರಮವಾಗಿ ಕ್ರೀಡಾಂಗಣದೊಳಕ್ಕೆ ನುಗ್ಗಿದ್ದಲ್ಲದೆ ಕೊಹ್ಲಿ ಕಾಲಿಗೆರಗಿ ಒಂದು ಸೆಲ್ಫಿ ತೆಗೆಸಿಕೊಂಡ. ಇತ್ತೀಚೆಗೆ 2 ಸಲ ಚೆನ್ನೈ ತಂಡದ ನಾಯಕ ಧೋನಿಗೂ ಇದೇ ರೀತಿಯ ಅನುಭವವಾಗಿತು.

Advertisement

Udayavani is now on Telegram. Click here to join our channel and stay updated with the latest news.

Next