ದುಬಾಯಿ: ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 197 ರನ್ ಗಳ ಸವಾಲನ್ನು ಬೆನ್ನತ್ತುವಲ್ಲಿ ಸಂಪೂರ್ಣವಾಗಿ ವಿಫಲವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು 59 ರನ್ ಗಳಿಂದ ಪರಾಭವಗೊಂಡಿದೆ.
ಅಂತಿಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 137 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ 59 ರನ್ ಗಳ ಸೋಲನ್ನು ಒಪ್ಪಿಕೊಂಡಿತು.
ರಾಯಲ್ಸ್ ನ ಟಾಪ್ ಬ್ಯಾಟ್ಸ್ ಮನ್ ಗಳೆಲ್ಲಾ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಲು ವಿಫಲರಾದದ್ದೇ RCB ಸೋಲಿಗೆ ಪ್ರಮುಖ ಕಾರಣವಾಯಿತು.
ಕಪ್ತಾನ ವಿರಾಟ್ ಕೊಹ್ಲಿಯನ್ನು ಹೊರತುಪಡಿಸಿ ಉಳಿದವರ್ಯಾರಿಂದಲೂ ದೊಡ್ಡ ಮೊತ್ತದ ಕೊಡುಗೆ ಲಭಿಸಲೇ ಇಲ್ಲ. ವಿರಾಟ್ ಕೊಹ್ಲಿ 43 ರನ್ ಗಳಿಸಿ ಟಾಪ್ ಸ್ಕೋರರ್ ಎಣಿಸಿಕೊಂಡರು.
ಕಳೆದ ಪಂದ್ಯದ ಹೀರೋ ಪಡಿಕ್ಕಲ್ 4 ರನ್ ಗೆ ಔಟಾದರು. ಫಿಂಚ್ (13), ಎಬಿಡಿ ವಿಲಿಯರ್ಸ್ (9), ಮೊಯೀನ್ ಅಲಿ (11), ವಾಷಿಂಗ್ಟನ್ ಸುಂದರ್ (17) ಹೀಗೆ ಪ್ರಮುಖ ಬ್ಯಾಟ್ಸ್ ಮನ್ ಗಳು ಸರಿಯಾದ ಸಮಯದಲ್ಲಿ ಸಿಡಿಯದೇ ಇದ್ದ ಕಾರಣ ಕ್ಯಾಪಿಟಲ್ಸ್ ಎದುರು ಆರ್.ಸಿ.ಬಿ. ಸೋಲು ಪಕ್ಕಾ ಆಯಿತು.
ಡೆಲ್ಲಿ ಕ್ಯಾಪಿಟಲ್ಸ್ ಪರ 4 ವಿಕೆಟ್ ಪಡೆದ ವೇಗಿ ರಬಾಡ ಆರ್.ಸಿ.ಬಿ.ಗೆ ಕಂಟಕವಾದರು. ಇನ್ನು 4 ಓವರ್ ನಲ್ಲಿ 18 ರನ್ ನೀಡಿ 2 ವಿಕೆಟ್ ಪಡೆದ ಅಕ್ಸರ್ ಪಟೇಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇನ್ನುಳಿದಂತೆ, ನೋರ್ಟ್ಜೆ 2 ವಿಕೆಟ್ ಪಡೆದರೆ ಸ್ಪಿನ್ನರ್ ಅಶ್ವಿನ್ 1 ವಿಕೆಟ್ ಪಡೆದರು.
ಇದನ್ನೂ ಓದಿ: ಪೃಥ್ವೀ ಶಾ ಬೊಂಬಾಟ್ ಆಟ ; ಸಿಡಿದ ಸ್ಟೋಯ್ನ್ಸ್- ಪಂತ್ : RCB ಗೆಲುವಿಗೆ 197 ರನ್ ಸವಾಲು