Advertisement

ಮೆಗಾ ಹರಾಜು: ಆರ್‌ಸಿಬಿ ಅಭಿಮಾನಿಗಳ ನಿರೀಕ್ಷೆ ಹುಸಿ

11:23 PM Feb 14, 2022 | Team Udayavani |

ರಾಯಲ್‌ ಚಾಲೆಂಜರ್ ಬೆಂಗಳೂರು ಕರ್ನಾಟಕದ ಬಹುತೇಕ ಕ್ರಿಕೆಟ್‌ ಅಭಿಮಾನಿಗಳ ನೆಚ್ಚಿನ ತಂಡ. ಈವರೆಗೆ ಒಮ್ಮೆಯೂ ಚಾಂಪಿಯನ್‌ ಪಟ್ಟ ಅಲಂಕರಿಸದೇ ಹೋದರೂ, ನಾಯಕನಾಗಿ ವಿರಾಟ್‌ ಕೊಹ್ಲಿ ಸತತ ವೈಫ‌ಲ್ಯ ಕಾಣುತ್ತ ಬಂದರೂ, ಇದಕ್ಕಿಂತ ಮಿಗಿಲಾಗಿ, ತಂಡದಲ್ಲಿ ಬೆರಳೆಣಿಕೆಯಷ್ಟೂ ಕನ್ನಡದ ಆಟಗಾರರು ಇಲ್ಲದೇ ಹೋದರೂ ಅಭಿಮಾನಕ್ಕೇನೂ ಕೊರತೆ ಕಾಡಿರಲಿಲ್ಲ. ಈ ಬಾರಿಯ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಕನ್ನಡಿಗರಿಗೆ ಆದ್ಯತೆ ನೀಡಬಹುದೆಂಬ ನಿರೀಕ್ಷೆ ಎಲ್ಲರಲ್ಲೂ ಇತ್ತು. ಅದೀಗ ಸಂಪೂರ್ಣ ಹುಸಿಯಾಗಿದೆ.

Advertisement

ನೂತನ ಆರ್‌ಸಿಬಿಯಲ್ಲಿರುವುದು ಕರ್ನಾಟಕದ ಇಬ್ಬರೇ ಆಟಗಾರರು-ಅನೀಶ್ವರ್‌ ಗೌತಮ್‌ ಮತ್ತು ಲವ್‌ನೀತ್‌ ಸಿಸೋಡಿಯಾ. ಅನುಭವಿಗಳೇನಲ್ಲ. ಗೌತಮ್‌ ಅಂಡರ್‌-19 ವಿಶ್ವಕಪ್‌ನಲ್ಲಿ ಆಡಿದ ಕ್ರಿಕೆಟಿಗ. ಸಿಸೋಡಿಯಾ ಹೆಸರು ಅನೇಕರಿಗೆ ತಿಳಿದಿಲ್ಲ. ಉಳಿದಂತೆ ಪ್ರತಿಭಾನ್ವಿತ ಓಪನರ್‌ ದೇವದತ್ತ ಪಡಿಕ್ಕಲ್‌ ಅವರನ್ನು ಬೇರೆ ತಂಡಕ್ಕೆ ಬಿಟ್ಟುಕೊಡಲಾಗಿದೆ. ಕರುಣ್‌ ನಾಯರ್‌ ಅವರನ್ನು ಪಡೆಯುವ ಅಷ್ಟೂ ಪ್ರಯತ್ನ ವಿಫ‌ಲವಾಗಿದೆ. ಕನ್ನಡ, ಕರ್ನಾಟಕದ ಮೇಲೆ ಅಭಿಮಾನ ಹೊಂದಿರುವ ಕ್ರಿಕೆಟ್‌ ಪ್ರೇಮಿಗಳ ಅಸಮಾಧಾನ ಇನ್ನಷ್ಟು ಹೆಚ್ಚಾಗಿದೆ. ಆರ್‌ಸಿಬಿ ಭರ್ಜರಿಯಾಗಿ ಟ್ರೋಲ್‌ ಆಗುತ್ತಿದೆ!

ಲೆಕ್ಕದ ಭರ್ತಿ ಆಟಗಾರರು
ವನಿಂದು ಹಸರಂಗ, ದಿನೇಶ್‌ ಕಾರ್ತಿಕ್‌ ಅವರಂಥ “ಲೆಕ್ಕದ ಭರ್ತಿ’ಯ ಕ್ರಿಕೆಟಿಗರಿಗೆ ಕೋಟಿ ಕೋಟಿ ಸುರಿದ ಬೆಂಗಳೂರು ಫ್ರಾಂಚೈಸಿ, ಇದೇ ಮೊತ್ತದಲ್ಲಿ ಕನಿಷ್ಠ ನಾಲ್ಕಾರು ಕರ್ನಾಟಕದ ಆಟಗಾರರನ್ನಾದರೂ ಖರೀದಿಸಬಹುದಿತ್ತಲ್ಲ ಎಂಬ ತರ್ಕದಲ್ಲಿ ಖಂಡಿತ ಹುರುಳಿಲ್ಲದಿಲ್ಲ. ಆದರೆ ಆರ್‌ಸಿಬಿಯ ಪ್ರಧಾನ ಕೋಚ್‌
ಸಂಜಯ್‌ ಬಂಗಾರ್‌ ಮಾತ್ರ ತಂಡದ ಸ್ವರೂಪದ ಬಗ್ಗೆ ಸಂಪೂರ್ಣ ಸಮಾಧಾನ, ತೃಪ್ತಿ ಹೊಂದಿದ್ದಾರೆ.

ಸಂತುಲಿತ ತಂಡ!
“ಸಂತುಲಿತ ತಂಡವೊಂದನ್ನು ಪಡೆದಿದ್ದೇವೆ ಎಂಬ ಸಮಾ ಧಾನ ನಮಗಿದೆ. ತಂಡಕ್ಕೆ ಸ್ಥಿರತೆ ತರುವುದು ಹಾಗೂ ಪಂದ್ಯದ ಪರಿಸ್ಥಿತಿಗೆ ತಕ್ಕ ಬದಲಾವಣೆ ತರುವ ಯೋಜನೆಗೆ ಸ್ಪಂದಿಸಬಲ್ಲ ಆಟಗಾರರು ನಮಗೆ ಬೇಕಿದ್ದರು. ಇವರ ಖರೀದಿಯಲ್ಲಿ ಯಶಸ್ವಿಯಾಗಿದ್ದೇವೆ. ಮುಖ್ಯವಾಗಿ ಹರ್ಷಲ್‌ ಪಟೇಲ್‌, ಹಸರಂಗ, ಹ್ಯಾಝಲ್‌ವುಡ್‌ ಮತ್ತು ಫಾ ಡು ಪ್ಲೆಸಿಸ್‌ ಅವರನ್ನು ಖರೀದಿಸಿದ್ದರಿಂದ ತಂಡದ ಸಾಮರ್ಥ್ಯ ಖಂಡಿತ ಹೆಚ್ಚಿದೆ ಎಂಬ ನಂಬಿಕೆ ನಮ್ಮದು…’ ಎಂದಿದ್ದಾರೆ ಸಂಜಯ್‌ ಬಂಗಾರ್‌.

22 ಸದಸ್ಯರ ಆರ್‌ಸಿಬಿ ತಂಡ
ಆರ್‌ಸಿಬಿ ಒಟ್ಟು 22 ಆಟಗಾರರನ್ನು ಹೊಂದಿದೆ. ಇದರಲ್ಲಿ ಭಾರತೀಯರ ಸಂಖ್ಯೆ 14, ವಿದೇಶಿಯರು 8. ಒಟ್ಟು 88.45 ಕೋ.ರೂ. ವ್ಯಯಿಸಿದೆ. ಇನ್ನೂ 1.55 ಕೋಟಿ ರೂ. ಪರ್ಸ್‌ನಲ್ಲಿದೆ.

Advertisement

ವಿರಾಟ್‌ ಕೊಹ್ಲಿ, ಫಾ ಡು ಪ್ಲೆಸಿಸ್‌, ಅನುಜ್‌ ರಾವತ್‌, ದಿನೇಶ್‌ ಕಾರ್ತಿಕ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಶಾಬಾಜ್‌ ಅಹ್ಮದ್‌, ಹರ್ಷಲ್‌ ಪಟೇಲ್‌, ವನಿಂದು ಹಸರಂಗ, ಆಕಾಶ್‌ದೀಪ್‌, ಮೊಹಮ್ಮದ್‌ ಸಿರಾಜ್‌, ಜೋಶ್‌ ಹ್ಯಾಝಲ್‌ವುಡ್‌, ಮಹಿಪಾಲ್‌ ಲೊನ್ರೋರ್‌, ಫಿನ್‌ ಅಲೆನ್‌, ಶೆಫೇìನ್‌ ರುದರ್‌ಫೋರ್ಡ್‌, ಜೇಸನ್‌ , ಸುಯಶ್‌ ಪ್ರಭುದೇಸಾಯಿ, ಚಾಮ ಮಿಲಿಂದ್‌, ಅನೀಶ್ವರ್‌ ಗೌತಮ್‌, ಕರ್ಣ್ ಶರ್ಮಾ, ಸಿದ್ಧಾರ್ಥ್ ಕೌಲ್‌, ಡೇವಿಡ್‌ ವಿಲ್ಲಿ, ಲವ್‌ನೀತ್‌ ಸಿಸೋಡಿಯಾ.

ಡು ಪ್ಲೆಸಿಸ್‌ ನಾಯಕ?
“ಫಾ ಡು ಪ್ಲೆಸಿಸ್‌ ಸೇರ್ಪಡೆಯಿಂದ ತಂಡದ ಬ್ಯಾಟಿಂಗ್‌ ವಿಭಾಗ ಖಂಡಿತವಾಗಿಯೂ ಬಲಿಷ್ಠಗೊಂಡಿದೆ. ಇವರಿಂದ ಅಗ್ರ ಕ್ರಮಾಂಕಕ್ಕೆ ಹೆಚ್ಚಿನ ಬಲ ಲಭಿಸಲಿದೆ. ಕೇವಲ ಬ್ಯಾಟರ್‌ ಅಷ್ಟೇ ಅಲ್ಲ, ನಾಯಕತ್ವದ ಕೌಶಲವೂ ಅವರಲ್ಲಿದೆ’ ಎನ್ನುವುದು ಸಂಜಯ್‌ ಬಂಗಾರ್‌ ಅವರ ಮತ್ತೂಂದು ಅನಿಸಿಕೆ. ಈ ಮೂಲಕ ಡು ಪ್ಲೆಸಿಸ್‌ ಆರ್‌ಸಿಬಿಯ ನೂತನ ನಾಯಕನಾಗುವ ಸಾಧ್ಯತೆಯನ್ನು ತೆರೆದಿರಿಸಿದ್ದಾರೆ. ತಂಡದ ಬೌಲಿಂಗ್‌ ವಿಭಾಗ ಈ ಸಲ ಹೆಚ್ಚು ಬಲಿಷ್ಠಗೊಂಡಿದೆ ಎಂಬುದ ಬಂಗಾರ್‌ ಲೆಕ್ಕಾಚಾರ. ಕಾರಣ, ಆಸೀಸ್‌ ವೇಗಿ ಜೋಶ್‌ ಹ್ಯಾಝಲ್‌ವುಡ್‌ ಸೇರ್ಪಡೆ. ಜತೆಗೆ ಕಳೆದ ಋತುವಿನಲ್ಲಿ ಅಮೋಘ ಪ್ರದರ್ಶನ ನೀಡಿದ ಹರ್ಷಲ್‌ ಪಟೇಲ್‌, ಮೊಹಮ್ಮದ್‌ ಸಿರಾಜ್‌ ಇದ್ದಾರೆ. ಸ್ಪಿನ್‌ ವಿಭಾಗದಲ್ಲಿ ಚಹಲ್‌ ಇಲ್ಲ. ಆದರೆ ರಿಸ್ಟ್‌ ಸ್ಪಿನ್ನಿಂಗ್‌ ಆಲ್‌ರೌಂಡರ್‌ ವನಿಂದು ಹಸರಂಗ ಅವರನ್ನು ಉಳಿಸಿಕೊಳ್ಳಲಾಗಿದೆ ಎಂದು ಬಂಗಾರ್‌ ಹೇಳಿದರು. ಆರನೇ ಕ್ರಮಾಂಕಕ್ಕೆ ಸಮರ್ಥ ಆಟಗಾರ ಹಾಗೂ ಅತ್ಯುತ್ತಮ ಫಿನಿಶರ್‌ ಒಬ್ಬರು ಬೇಕಿದ್ದರು. ಈ ಸ್ಥಾನಕ್ಕೆ ದಿನೇಶ್‌ ಕಾರ್ತಿಕ್‌ ಸೂಕ್ತ ಆಯ್ಕೆ ಎಂಬುದು ಆರ್‌ಸಿಬಿ ಕೋಚ್‌ ಅಭಿಪ್ರಾಯ.

Advertisement

Udayavani is now on Telegram. Click here to join our channel and stay updated with the latest news.

Next