Advertisement

ಕಿಶನ್ – ಪೊಲಾರ್ಡ್ ಬ್ಯಾಟಿಂಗ್ ಅಬ್ಬರಕ್ಕೆ ಮ್ಯಾಚ್ ‘ಟೈ’ ; ಸೂಪರ್ ಓವರ್ ನಲ್ಲಿ ಗೆದ್ದ RCB

12:19 AM Sep 29, 2020 | Hari Prasad |

ದುಬಾಯಿ: ಶತಕ ವಂಚಿತ ಇಶನ್ ಕಿಶನ್ ಹಾಗೂ ಕೈರನ್ ಪೊಲಾರ್ಡ್ ಅವರ ಬ್ಯಾಟಿಂಗ್ ಸಾಹಸದಿಂದ ‘ಟೈ’ಯಲ್ಲಿ ಅಂತ್ಯಗೊಂಡ ಪಂದ್ಯವನ್ನು ಸೂಪರ್ ಓವರ್ ನಲ್ಲಿ ಎಬಿಡಿ – ಕೊಹ್ಲಿ ಬ್ಯಾಟಿಂಗ್ ಸಾಹಸದಿಂದ ಗೆಲ್ಲುವ ಮೂಲಕ RCB ವಿಜಯದ ನಗು ಬೀರಿದೆ.

Advertisement

ಸೋಲುವ ಪಂದ್ಯವನ್ನು ‘ಟೈ’ ಮಾಡಿಕೊಂಡ ಮುಂಬೈಗೆ ಸೂಪರ್ ಓವರ್ ನಲ್ಲಿ ಅದೃಷ್ಟ ಒಲಿಯಲಿಲ್ಲ. ಸೂಪರ್ ಓವರ್ ಗೆಲ್ಲುವ ಮೂಲಕ ಕೊಹ್ಲಿ ಪಡೆ ಈ ಪಂದ್ಯವನ್ನು ಗೆದ್ದು ‘ಬದುಕಿದೆಯೇ ಬಡಜೀವವೇ’ ಎಂದುಕೊಂಡಿತು.

ಸೂಪರ್ ಓವರ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 1 ಓವರ್ ನಲ್ಲಿ 7 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೊತ್ತವನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿಲಿಯರ್ಸ್ – ಕೊಹ್ಲಿ ಸಾಹಸದಿಂದ ಗೆದ್ದು ವಿಜಯದ ನಗು ಬೀರಿತು.

ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿ ಪಂಜಾಬ್ ವಿರುದ್ಧ ಕಳೆದ ಪಂದ್ಯದಲ್ಲಿ ಹೀನಾಯ ಸೋಲುಂಡಿದ್ದ ಕೊಹ್ಲಿ ಪಡೆ ಇಂದಿನ ಪಂದ್ಯದಲ್ಲಿ ಗೆಲುವಿನ ವಿಶ್ವಾಸವನ್ನು ಮೂಡಿಸಿತ್ತು. ಆದರೆ ಕಿಶನ್ (99) ಮತ್ತು ಪೊಲಾರ್ಡ್ (20 ಎಸೆತಗಳಲ್ಲಿ ಔಟಾಗದೇ 60) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಮುಂಬೈ ಈ ಪಂದ್ಯವನ್ನು ರೋಮಾಂಚಕ ‘ಟೈ’ಯಲ್ಲಿ ಅಂತ್ಯಗೊಳಿಸಿತು.

ಕಿಶನ್ (99) ಹಾಗೂ ಪೊಲಾರ್ಡ್ (60*) ನಾಲ್ಕನೇ ವಿಕೆಟಿಗೆ 119 ರನ್ ಗಳ ಭರ್ಜರಿ ಜೊತೆಯಾಟ ಕಟ್ಟಿದರು. ಪೊಲಾರ್ಡ್ 5 ಸಿಕ್ಸರ್ ಬಾರಿಸಿದರೆ ಕಿಶನ್ ಬ್ಯಾಟಿನಿಂದ 9 ಭರ್ಜರಿ ಸಿಕ್ಸರ್ ಗಳು ಸಿಡಿದವು.

Advertisement

ಇದು ಈ ಬಾರಿಯ ಐಪಿಎಲ್ ಕೂಟದಲ್ಲಿ ಎದುರಾಗುತ್ತಿರುವ ಎರಡನೇ ಸೂಪರ್ ಓವರ್.

RCB ನೀಡಿದ 202 ರನ್ ಗಳ ಸವಾಲನ್ನು ಬೆನ್ನಟ್ಟಿದ ಮುಂಬೈ ಓಪನಿಂಗ್ ಚೆನ್ನಾಗಿರಲಿಲ್ಲ. ಕಪ್ತಾನ ರೋಹಿತ್ ಶರ್ಮಾ 8 ರನ್ ಗಳಿಸಿ ಔಟಾದರೆ ಕ್ವಿಂಟನ್ ಡಿ’ ಕಾಕ್ 14 ರನ್ ಗೆ ಔಟಾದರು. ಹಿಟ್ಟರ್ ಹಾರ್ಧಿಕ್ ಪಾಂಡ್ಯ ಗಳಿಕೆ 15 ರನ್. ಈ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ಸ್ಕೋರ್ 11.2 ಓವರ್ ಗಳಲ್ಲಿ 78 ರನ್ನಿಗೆ 4 ಇತ್ತು.

ಇದನ್ನೂ ಓದಿ: ಫಿಂಚ್, ಪಡಿಕ್ಕಲ್ ಫಿಪ್ಟೀ ; ABD ಮಸ್ತ್ ಬ್ಯಾಟಿಂಗ್ ಮುಂಬೈ ಗೆಲುವಿಗೆ 202 ರನ್ ಗಳ ಟಾರ್ಗೆಟ್


ಇಂತಹ ಸ್ಥಿತಿಯಲ್ಲಿ ತಂಡಕ್ಕೆ ಆಸರೆಯಾಗಿದ್ದು ಯುವ ಬ್ಯಾಟ್ಸ್ ಮನ್ ಇಶನ್ ಕಿಶನ್ (99). ‍ಪ್ರಾರಂಭದಲ್ಲಿ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿದ ಕಿಶನ್ ಬಳಿಕ ಹೊಡಿಬಡಿಯ ಆಟಕ್ಕಿಳಿದರು. ಇನ್ನೊಂದು ತುದಿಯಲ್ಲಿ ಅವರಿಗೆ ದೈತ್ಯ ಬ್ಯಾಟ್ಸ್ ಮನ್ ಕೈರನ್ ಪೊಲಾರ್ಡ್ ಉತ್ತಮ ಸಾಥ್ ನೀಡಿದರು.


ಇವರಿಬ್ಬರೂ ಅರ್ಧಶತಕ ಬಾರಿಸಿ ಮಿಂಚಿದರು. ಒಂದು ಹಂತದಲ್ಲಿ RCB ಸುಲಭವಾಗಿಯೇ ಗೆಲ್ಲುವ ಸ್ಥಿತಿಯಲ್ಲಿತ್ತು. ಆದರೆ 16 ಮತ್ತು 17ನೇ ಓವರ್ ನಲ್ಲಿ ಪೊಲಾರ್ಡ್ ಹಾಗೂ ಕಿಶನ್ ಸೇರಿಕೊಂಡು 49 ರನ್ ಬಾರಿಸಿದ್ದು ಮುಂಬೈ ಗೆಲುವಿನ ಆಸೆಯನ್ನು ಚಿಗುರಿಸಿತ್ತು.


ಕೊನೆಯ ಓವರಿನಲ್ಲಿ ಮುಂಬೈ ಗೆಲುವಿಗೆ 19 ರನ್ ಅವಶ್ಯಕತೆ ಇತ್ತು. ಉದಾನ ಎಸೆದ ಆ ಓವರಿನಲ್ಲಿ ಮೊದಲ ಎರಡು ಎಸೆತಗಳಲ್ಲಿ ಒಂದೊಂದು ರನ್ ಬಂತು. ಮೂರು ಮತ್ತು ನಾಲ್ಕನೇ ಎಸೆತಗಳನ್ನು ಕಿಶನ್ ಸಿಕ್ಸರ್ ಗೆ ಅಟ್ಟಿದರು. ಐದನೇ ಎಸೆತವನ್ನು ಭರ್ಜರಿಯಾಗಿ ಆಡಲು ಹೋದ ಇಶನ್ ಕಿಶನ್ ಪಡಿಕ್ಕಲ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಕೇವಲ 58 ಎಸೆತಗಳಲ್ಲಿ 99 ರನ್ ಮಾಡಿದ್ದ ಕಿಶನ್ ಶತಕ ಬಾರಿಸದೆ ನಿರಾಶೆ ಮೂಡಿಸಿದರು.

ಕೊನೆಯ ಎಸೆತದಲ್ಲಿ ಮುಂಬೈ ಗೆಲುವಿಗೆ 5 ರನ್ ಬೇಕಿತ್ತು. ಕ್ರೀಸಿನಲ್ಲಿದ್ದ ಪೊಲಾರ್ಡ್ ಭರ್ಜರಿ ಬೌಂಡರಿ ಬಾರಿಸುವ ಮೂಲಕ ಪಂದ್ಯವನ್ನು ಸಮಬಲಗೊಳಿಸಿದರು. ಈ ಮೂಲಕ RCB ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯ ಸೂಪರ್ ಓವರ್ ಗೆ ಹೋಯಿತು.

RCB ಪರ ಲಂಕಾ ಬೌಲರ್ ಇಸುರು ಉದಾನ 2 ವಿಕೆಟ್ ಪಡೆದರೆ, ವಾಷಿಂಗ್ಟನ್ ಸುಂದರ್, ಚಾಹಲ್ ಮತ್ತು ಆ್ಯಡಂ ಝಂಪಾ ತಲಾ 1 ವಿಕೆಟ್ ಪಡೆದರು.



Advertisement

Udayavani is now on Telegram. Click here to join our channel and stay updated with the latest news.

Next